ADVERTISEMENT

ದೊಡ್ಡಬಳ್ಳಾಪುರ: ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಕಾರ್ಯತಂತ್ರ

ಭಿನ್ನಮತ ಶಮನಕ್ಕೆ ಪಕ್ಷದ ಮುಖಂಡರ ಕಸರತ್ತು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 4:51 IST
Last Updated 1 ಫೆಬ್ರುವರಿ 2023, 4:51 IST
ದೊಡ್ಡಬಳ್ಳಾಪುರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚುನಾವಣ ಉಸ್ತುವಾರಿ ಸಮಿತಿ ಪಟ್ಟಿಯನ್ನು ವಿಧಾನ ಪರಿಷತ್‌ ಸದಸ್ಯ ಶ್ರೀಕಂಠೇಗೌಡ ಬಿಡುಗಡೆ ಮಾಡಿದರು
ದೊಡ್ಡಬಳ್ಳಾಪುರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚುನಾವಣ ಉಸ್ತುವಾರಿ ಸಮಿತಿ ಪಟ್ಟಿಯನ್ನು ವಿಧಾನ ಪರಿಷತ್‌ ಸದಸ್ಯ ಶ್ರೀಕಂಠೇಗೌಡ ಬಿಡುಗಡೆ ಮಾಡಿದರು   

ದೊಡ್ಡಬಳ್ಳಾಪುರ: ‘ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಂತೆ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ನಡೆಸಿ ಜನರ ಸಮಸ್ಯೆ ಅರಿತು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ. ಈಗಾಗಲೇ ರಚನೆಯಾಗಿರುವ 69 ಜನರ ಸಮಿತಿ ಮೂಲಕ ಜೆಡಿಎಸ್ ವರಿಷ್ಠರು ಮಂಗಳವಾರದಿಂದಲೇ ಅಧಿಕೃತವಾಗಿ ಚುನಾವಣೆ ಪ್ರಚಾರಕ್ಕೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ ಹೇಳಿದರು.

ನಗರದ ಹೊರವಲಯದ ಸ್ಕೌಂಟ್ ಕ್ಯಾಂಪ್‌ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಷ್ಟ್ರೀಯ ಪಕ್ಷಗಳ ಜನ ವಿರೋಧಿ ನೀತಿಗಳು ದೇಶ ಮತ್ತು ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳಿವೆ. ಆದರೆ ಕುಮಾರಸ್ವಾಮಿ ಅವರು ಜನರ ನಾಡಿಮಿಡಿತ ಅರಿತು ಕೆಲಸ ಮಾಡುವವರು ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಪಕ್ಷದ ವರಿಷ್ಠರು ರಚಿಸಿರುವ ಸಮಿತಿಗೆ ನಾನು ಬದ್ಧನಾಗಿರುತ್ತೇನೆ’ ಎಂದರು.

ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ‘2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ. ಮುನೇಗೌಡ ಅವರ ಗೆಲುವಿಗಾಗಿ ಹಿರಿಯ ಮುಖಂಡ ಎಚ್. ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ಚುನಾವಣೆ ಉಸ್ತುವಾರಿ ಸಮಿತಿ ರಚಿಸಲಾಗಿದೆ’ ಎಂದರು.

ADVERTISEMENT

ಚುನಾವಣಾ ಉಸ್ತುವಾರಿ ಸಮಿತಿ ಅಧ್ಯಕ್ಷ ಎಚ್‌. ಅಪ್ಪಯ್ಯ ಮಾತನಾಡಿ, ಚುನಾವಣೆಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದೆ ಜೆಡಿಎಸ್ ಅಭ್ಯರ್ಥಿ ಬಿ.ಮುನೇಗೌಡ ಗೆಲ್ಲಿಸಲು ಶ್ರಮಿಸಲಾಗುವುದು. ಈಗಾಗಲೇ ರಾಷ್ಟ್ರೀಯ ಪಕ್ಷಗಳಲ್ಲಿ ಮುಸುಕಿನ ಗುದ್ದಾಟ ತೀವ್ರವಾಗಿದೆ. ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದೆ’ ಎಂದರು.

ಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡಾ.ಎಚ್‌.ಜಿ. ವಿಜಯ್‌ಕುಮಾರ್‌, ಹರೀಶ್‌ಗೌಡ, ಸ್ವಾಮಿಗೌಡ, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಿಪತಯ್ಯ, ನಗರಸಭೆ ಉಪಾಧ್ಯಕ್ಷೆ ಫರ್ಜಾನಾತಾಜ್, ಸ್ಥಾಯಿ ಸಮಿತಿ ಅಧ್ಯಕ್ಷೆ ಆದಿಲಕ್ಷ್ಮಿ, ಸದಸ್ಯರಾದ ತ.ನ. ಪ್ರಭುದೇವ್, ತಳವಾರ್‌ ನಾಗರಾಜ್‌, ಎ. ನರಸಿಂಹಯ್ಯ, ವೆಂಕಟೇಶ್‌ಬಾಬು, ಚಂದ್ರಣ್ಣ, ಆನಂದ್‌, ಶ್ರೀನಿವಾಸ್, ಶಾಂತಮ್ಮ ದೇವರಾಜಮ್ಮ,ಗೌರೀಶ್‌, ಸಿ.ಎಚ್‌. ರಾಮಕೃಷ್ಣ, ಧರ್ಮೇಂದ್ರ, ಉಜ್ಜನಿ ನರಸಿಂಹಗೌಡ ಇದ್ದರು.

ನಿಂತಿಲ್ಲ ಬಣ ರಾಜಕೀಯ

ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ. ಮುನೇಗೌಡ ಅವರನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಗುಂಪನ್ನು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವಂತೆ ಮಾಡುವ ಪ್ರಯತ್ನ ಸಂಪೂರ್ಣವಾಗಿ ಯಶಸ್ಸು ಆಗದಿರುವುದು ಮಂಗಳವಾರದ ಪತ್ರಿಕಾಗೋಷ್ಠಿಯಲ್ಲಿ ಎದ್ದು ಕಾಣುತ್ತಿತ್ತು.

ಟಿಎಪಿಎಂಸಿಎಸ್‌ ಅಧ್ಯಕ್ಷ ಅಂಜನಗೌಡ, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ವಡ್ಡರಹಳ್ಳಿರವಿ, ಜೆಡಿಎಸ್‌ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಆರ್‌. ಕೆಂಪರಾಜ್‌, ಯುವ ಮುಖಂಡ ಕೆಸ್ತೂರು ರಮೇಶ್‌ ಸೇರಿದಂತೆ ಇನ್ನೂ ಹಲವು ಗೋಷ್ಠಿಯಿಂದ ದೂರವೇ ಉಳಿದರು.

ಚುನಾವಣ ಉಸ್ತುವಾರಿ ಸಂಚಾಲಕರಲ್ಲಿ ಪ್ರಮುಖರಾದ ಹುಸ್ಕೂರು ಆನಂದ್‌ ಸಹ ನೆಪ ಹೇಳಿ ಪತ್ರಿಕಾಗೋಷ್ಠಿಯಿಂದ ತಪ್ಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.