ADVERTISEMENT

ಕಾಂಗ್ರೆಸ್‌ನದ್ದು ಮೃದು ಹಿಂದೂತ್ವ: ಸಿ.ಎಂ.ಇಬ್ರಾಹಿಂ ಟೀಕೆ

ದೊಡ್ಡಬಳ್ಳಾಪುರ ಇಸ್ಲಾಂಪುರದಲ್ಲಿ ಇಫ್ತಾರ್‌ ಕೂಟ ಆಯೋಜನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 5:31 IST
Last Updated 28 ಮಾರ್ಚ್ 2023, 5:31 IST
ದೊಡ್ಡಬಳ್ಳಾಪುದಲ್ಲಿ ಸೋಮವಾರ ಜೆಡಿಎಸ್‌ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಇಫ್ತಾರ್‌ ಕೂಟದಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಮುಖಂಡರನ್ನು ಅಭಿನಂದಿಸಲಾಯಿತು
ದೊಡ್ಡಬಳ್ಳಾಪುದಲ್ಲಿ ಸೋಮವಾರ ಜೆಡಿಎಸ್‌ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಇಫ್ತಾರ್‌ ಕೂಟದಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಮುಖಂಡರನ್ನು ಅಭಿನಂದಿಸಲಾಯಿತು   

ದೊಡ್ಡಬಳ್ಳಾಪುರ: ಕಾಂಗ್ರೆಸ್‌ ಮುಖಂಡರು ಮೀಸಲಾತಿ ವಿಚಾರವಾಗಿ ಮಾತನಾಡುವ ನೈತಿಕತೆ ಕಳೆದು ಕೊಂಡಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

ನಗರದಲ್ಲಿ ಸೋಮವಾರ ಜೆಡಿಎಸ್‌ ವತಿಯಿಂದ ಇಸ್ಲಾಂಪುರದಲ್ಲಿ ಏರ್ಪಡಿಸಿದ್ದ ಇಫ್ತಾರ್‌ ಕೂಟದಲ್ಲಿ ಮಾತನಾಡಿದರು.

ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಂ ಸಮುದಾಯಕ್ಕೆ ಶೇ4ರಷ್ಟು ಮೀಸಲಾತಿ ನೀಡಿದ್ದರು. ಈಗಿನ ಬಿಜೆಪಿ ಸರ್ಕಾರ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದು ಮಾಡಿ ಇತರ ಸಮುದಾಯಕ್ಕೆ ನೀಡಿದ್ದಾರೆ. ಮೃದು ಹಿಂದೂತ್ವ ವಾದ ಪಾಲಿಸುತ್ತಿರುವ ಕಾಂಗ್ರೆಸ್‌ ಮೀಸಲಾತಿ ವಿರುದ್ಧ ಧ್ವನಿ ಎತ್ತುವ ಅರ್ಹತೆಯನ್ನೇ ಕಳೆದುಕೊಂಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ನ್ಯಾಯಯುತವಾಗಿ ಸಿಕ್ಕಿರುವ ಮೀಸಲಾತಿ ಪಡೆಯಬೇಕಿದ್ದರೆ ರಾಜ್ಯದಲ್ಲಿ ಮತ್ತೆ ಜೆಡಿಎಸ್‌ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರಬೇಕಿದೆ ಎಂದರು.

ADVERTISEMENT

ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯದಲ್ಲಿ ಹತ್ತಾರು ಬಾರಿ ರೋಡ್‌ ಷೊ ನಡೆಸಿದರು ಭಯಪಡುವುದಿಲ್ಲ. ಆದರೆ, ಜೆಡಿಎಸ್‌ ನಾಯಕ ಎಚ್‌.ಡಿ.ದೇವೇಗೌಡರು ಒಮ್ಮೆ ರೋಡ್‌ ಷೊ ನಡೆಸಿರುವುದಕ್ಕೆ ಬಿಜೆಪಿ, ಕಾಂಗ್ರೆಸ್‌ ಎರಡೂ ಪಕ್ಷದ ನಾಯಕರ ಎದೆಯಲ್ಲಿ ನಡುಕು ಆರಂಭವಾಗಿದೆ. ಹಿಜಾಬ್‌ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒಮ್ಮೆಯೂ ಮಾತನಾಡಿಲ್ಲ. ಈ ಬಗ್ಗೆ ನನ್ನನ್ನು ಮಾತನಾಡದಂತೆ ತಡೆದರು. ಆದರೆ, ಈ ಬಗ್ಗೆ ಕಾಂಗ್ರೆಸ್‌ ಮುಖಂಡರಿಗೆ ಭಯಪಡದೆ ಮಾತನಾಡಿದ್ದೇನೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲು ಗ್ಯಾರಂಟಿ ಕಾರ್ಡ್‌ ನಾಟಕ ಪ್ರಾರಂಭಿಸಿದೆ. ಈ ಗ್ಯಾರಂಟಿ ಕಾರ್ಡ್‌ಗೆ ಯಾವುದೇ ವಾರಂಟಿ ಇಲ್ಲದಾಗಿದೆ. ದಕ್ಷಿಣ ಭಾರತದ ರಾಜ್ಯಗಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ನೆಲೆ ಇಲ್ಲದಾಗಿವೆ. ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲೂ ಬಿಜೆಪಿ, ಕಾಂಗ್ರೆಸ್‌ ಎರಡೂ ಪಕ್ಷಗಳನ್ನು ಮತದಾರರು ಸೋಲಿಸಲಿದ್ದಾರೆ ಎಂದರು.

ಬಿಜೆಪಿ, ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ ಯಾರು ಎನ್ನುವುದನ್ನು ಹೇಳಲಾಗದೆ ಇನ್ನೂ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಜೆಡಿಎಸ್‌ ಪಕ್ಷದಲ್ಲಿ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗದೆ ಇದ್ದರೆ ಜೆಡಿಎಸ್‌ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ದೊಡ್ಡಬಳ್ಳಾಪುರ ವಿಧಾನ ಕ್ಷೇತ್ರದಿಂದ ಈ ಬಾರಿ ಮುನೇಗೌಡ ಅವರು ಶಾಸಕರಾಗುವುದು ನಿಶ್ಚಿತ ಎಂದರು.

ಜೆಡಿಎಸ್‌ ರಾಷ್ಟ್ರೀಯ ಕಾರ್ಯದರ್ಶಿ ಜಫೀರ್‌ ಉಲ್ಲಾಖಾನ್‌, ಅಬ್ದುಲ್‌ ರಹುಫ್‌, ಫಯಾಜ್‌, ಆರೀಫ್‌, ನಗರಸಭೆ ಉಪಾಧ್ಯಕ್ಷೆ ಫರ್ಹಾನಾತಾಜ್,ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಚ್‌.ಜಿ.ವಿಜಯ್‌ಕುಮಾರ್‌, ಹರೀಶ್‌ಗೌಡ, ಮುಖಂಡರಾದ ಇ.ಕೃಷ್ಣಪ್ಪ, ಎಚ್‌.ಅಪ್ಪಯ್ಯ, ಪದ್ಮಾವತಿ ಮುನೇಗೌಡ, ಟಿಎಪಿಎಂಸಿಎಸ್‌ ಅಧ್ಯಕ್ಷ ವಿ.ಅಂಜನೇಗೌಡ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.