ADVERTISEMENT

ಆನೇಕಲ್‌ನಲ್ಲಿ ಉದ್ಯೋಗ ಮೇಳ

ಸೂರ್ಯ ಸಿಟಿಯಲ್ಲಿ ಬಿಜೆಪಿ ಎಸ್.ಸಿ ಮೋರ್ಚಾದಿಂದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 4:51 IST
Last Updated 30 ಜನವರಿ 2023, 4:51 IST
ಆನೇಕಲ್ ತಾಲ್ಲೂಕಿನ ಸೂರ್ಯ ಸಿಟಿಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಬೃಹತ್ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ಯುವಕರು
ಆನೇಕಲ್ ತಾಲ್ಲೂಕಿನ ಸೂರ್ಯ ಸಿಟಿಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಬೃಹತ್ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ಯುವಕರು   

ಆನೇಕಲ್: ತಾಲ್ಲೂಕಿನ ಸೂರ್ಯ ಸಿಟಿಯಲ್ಲಿ ಬಿಜೆಪಿ ವತಿಯಿಂದ ಭಾನುವಾರ ಬೃಹತ್‌ ಉದ್ಯೋಗ ಮೇಳ ಆಯೋಜಿಸಲಾಗಿತ್ತು. 40ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದವು. 1,650 ಉದ್ಯೋಗಕಾಂಕ್ಷಿಗಳು ಮೇಳದಲ್ಲಿ ಪಾಲ್ಗೊಂಡಿದ್ದು, ಈ ಪೈಕಿ 367 ಮಂದಿಗೆ ಸ್ಥಳದಲ್ಲಿಯೇ ಉದ್ಯೋಗ ಪತ್ರ ನೀಡಲಾಯಿತು.

ಬಿಜೆಪಿ ಎಸ್‌.ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಹುಲ್ಲಹಳ್ಳಿ ಶ್ರೀನಿವಾಸ್‌ ಮಾತನಾಡಿ, ಉದ್ಯೋಗ ಇಂದಿನ ಅವಶ್ಯಕತೆಯಾಗಿದೆ. ಉದ್ಯೋಗ ಮಾಡುವ ಉತ್ಸಾಹವಿದ್ದರೂ ಸರಿಯಾದ ಮಾರ್ಗದರ್ಶನವಿಲ್ಲದೆ ಹಲವು ಯುವಕರು ನಿರುದ್ಯೋಗಿಗಳಾಗಿ ಉಳಿಯುತ್ತಿದ್ದಾರೆ. ಉದ್ಯೋಗ ಮೇಳದ ಆಯೋಜನೆ ಮೂಲಕ ಯುವಕರಿಗೆ ಉದ್ಯೋಗದ ಮಾರ್ಗ ತೋರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ ಎಂದರು.

ಕೊರೊನಾದಿಂದಾಗಿ ಆರ್ಥಿಕ ಪರಿಸ್ಥಿತಿ ಕುಸಿತದಿಂದ ಉದ್ಯೋಗಗಳ ಸಮಸ್ಯೆ ಉದ್ಭವಿಸಿತು. ಪ್ರಸ್ತುತ ಚೇತರಿಕೆಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ ಎಂದರು.

ADVERTISEMENT

ಬಿಜೆಪಿ ಮಂಡಲ ಅಧ್ಯಕ್ಷ ಬಿ.ಬಿ.ಐ. ಮುನಿರೆಡ್ಡಿ ಮಾತನಾಡಿ, ತಾಲ್ಲೂಕಿನಲ್ಲಿ ಐದು ಕೈಗಾರಿಕಾ ಪ್ರದೇಶಗಳಿವೆ. ಆದರೂ ಎಲ್ಲರಿಗೂ ಉದ್ಯೋಗ ದೊರೆಯುತ್ತಿಲ್ಲ. ಉದ್ಯೋಗ ಹುಡುಕಿಕೊಂಡು ಕಂಪನಿಯಿಂದ ಕಂಪನಿಗಳಿಗೆ ಅಲೆದಾಡಬೇಕಾಗುತ್ತದೆ. ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳು ಒಂದೆಡೆ ಸೇರುವುದರಿಂದ ಒಂದೇ ಸೂರಿನಲ್ಲಿ ಉದ್ಯೋಗದ ವಿವಿಧ ಅವಕಾಶಗಳು ದೊರೆಯುತ್ತವೆ. ಗ್ರಾಮಾಂತರ ಭಾಗದ ಯುವ ಸಮುದಾಯ ಉದ್ಯೋಗ ಮೇಳವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕಿಯೋನಿಕ್ಸ್‌ ಮಾಜಿ ಅಧ್ಯಕ್ಷ ಎಂ. ಯಂಗಾರೆಡ್ಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ವಿ. ಶಿವಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ್‌ರೆಡ್ಡಿ, ಆನೇಕಲ್‌ ಪುರಸಭಾ ಸದಸ್ಯ ಸುರೇಶ್‌, ನಾಗನಾಯಕನಹಳ್ಳಿ ರಾಧಾಕೃಷ್ಣ, ಭಾರತಿ ನಾಗರಾಜು, ಡಾ. ಸುಲೋಚನಾ, ತೇಜಸ್ವಿನಿ ನಟರಾಜ್‌, ಮಂಜುಳ ನೀಲಕಂಠಯ್ಯ, ಸು.ಧಾ. ಜಯದೇವ್‌, ರಾಕೇಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.