ವಿಜಯಪುರ (ದೇವನಹಳ್ಳಿ): ಪಟ್ಟಣ ಸಮೀಪದ ಅಂಕತಟ್ಟಿ ಗೇಟ್ ಬಳಿ ಇರುವ ಕುಂಬ್ಬಿಗಲ್ ಕುಟೀರದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಬಹುಭಾಷಾ ನಟಿ ಬಿ.ಸರೋಜಾದೇವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿ ರೇಣುಕಾ ಚಂದ್ರಶೇಖರ್ ಹಡಪದ್ ಮಾತನಾಡಿ, ಹಿರಿಯ ನಟಿ ಬಿ.ಸರೋಜಾದೇವಿ ಅವರನ್ನು ಅಭಿನಯ ಸರಸ್ವತಿ ಮತ್ತು ತಮಿಳಿನಲ್ಲಿ ಕನ್ನಡತು ಪೈಂಗಿಲಿ (ಕನ್ನಡದ ಗಿಳಿ) ಎಂಬ ಉಪನಾಮಗಳಿಂದ ಕರೆಯಲಾಗುತ್ತದೆ. ಅವರ ಅಗಲಿಕೆ ಕನ್ನಡಿಗರಿಗೆ ನೋವಿನ ಸಂಗತಿ ಎಂದರು.
ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಅವರು ಭಾರತೀಯ ಚಿತ್ರರಂಗದಲ್ಲಿ ಏಳು ದಶಕಗಳಲ್ಲಿ ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ ಎಂದರು.
ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯೆ ಭಾನುಮತಿ ಜಯರಾಂ ಮಾತನಾಡಿ, ಕನ್ನಡ ಚಲನಚಿತ್ರ ಕಪ್ಪು ಬಿಳುಪಿನ ಏರುಗತಿಯ ಸ್ಥಿತಿಯಲಿದ್ದಾಗ ಕನ್ನಡ ಸಿನಿಮಾವನ್ನು ಜನ ಮಾನಸಕ್ಕೆ ಹಿಡಿಸುವಂತೆ ಖ್ಯಾತಿಗೊಳಿಸಿದವರು ಸರೋಜಾದೇವಿ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಹಡಪದ್, ಸಂತೆ ನಾರಾಯಣಸ್ವಾಮಿ, ಸಿ.ಮಂಜುನಾಥ್, ರೇಷ್ಮೆ ಇಲಾಖೆ ವಿಶ್ರಾಂತ ನೌಕರ ಮಾರ್ಕೆಟ್ ವೆಂಕಟೇಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಆರ್.ಮುನಿರಾಜು, ಲಕ್ಷ್ಮಿವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.