ADVERTISEMENT

ಕನ್ನಡ ಮಾಧ್ಯಮ ಯಶಸ್ಸಿಗೆ ಅಡ್ಡಿ ಅಲ್ಲ: ಜಿಲ್ಲಾಧಿಕಾರಿ ಎ.ಬಿ.ಬಸವರಾಜು

ಸರ್ಕಾರಿ ಶಾಲೆ ಉಳಿಸಿ–ಕನ್ನಡ ಬೆಳೆಸಿ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 1:51 IST
Last Updated 25 ಜುಲೈ 2025, 1:51 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಹಿರೇಮುದ್ದೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದೊಂದಿಗೆ ನವ ಕರ್ನಾಟಕ ಯುವಶಕ್ತಿ ವೇದಿಕೆ ವತಿಯಿಂದ ನಡೆದ ‘ಸರ್ಕಾರಿ ಶಾಲೆ ಉಳಿಸಿ–ಕನ್ನಡ ಬೆಳೆಸಿ’ ಅಭಿಯಾನದಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಮಾತನಾಡಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಹಿರೇಮುದ್ದೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದೊಂದಿಗೆ ನವ ಕರ್ನಾಟಕ ಯುವಶಕ್ತಿ ವೇದಿಕೆ ವತಿಯಿಂದ ನಡೆದ ‘ಸರ್ಕಾರಿ ಶಾಲೆ ಉಳಿಸಿ–ಕನ್ನಡ ಬೆಳೆಸಿ’ ಅಭಿಯಾನದಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಮಾತನಾಡಿದರು   

ತೂಬಗೆರೆ(ದೊಡ್ಡಬಳ್ಳಾಪುರ): ಸರ್ಕಾರಿ ಶಾಲೆಗಳಲ್ಲಿ ಮತ್ತು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಭವಿಷ್ಯ ಹಿನ್ನಡೆಯಾಗುತ್ತದೆ ಎಂಬ ಪೋಷಕರ ಧೋರಣೆ ಬೇಸರ ತರುತ್ತದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಹೇಳಿದರು.

ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದೊಂದಿಗೆ ನವ ಕರ್ನಾಟಕ ಯುವಶಕ್ತಿ ವೇದಿಕೆ ಯಿಂದ ಹಿರೇಮುದ್ದೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಸರ್ಕಾರಿ ಶಾಲೆ ಉಳಿಸಿ–ಕನ್ನಡ ಬೆಳೆಸಿ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ನಾನು ಸಹ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿ. ಪ್ರಾಥಮಿಕ ಹಂತದಿಂದ ಹತ್ತನೇ ತರಗತಿವರೆಗೆ ಕನ್ನಡದಲ್ಲೇ ಓದಿದ್ದೇನೆ. ಕನ್ನಡ ಮಾಧ್ಯಮ ಯಶಸ್ಸಿಗೆ ಅಡ್ಡಿ ಆಗುವುದಿಲ್ಲ ಎಂಬುದು ನನ್ನ ವೈಯಕ್ತಿಕ ಅನುಭವ’ ಎಂದರು.

ADVERTISEMENT

ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸ್ಥಳೀಯ ಭಾಷೆಯಲ್ಲಿಯೇ ಓದಿ ಯುಪಿಎಸ್‌ಸಿ ಸೇರಿದಂತೆ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುತ್ತಿದ್ದಾರೆ. ಇದು ಮಾತೃಭಾಷೆಯಲ್ಲಿಯೇ ಉನ್ನತ ವಿದ್ಯೆ ಸಾಧಿಸಬಹು ಎಂಬುದಕ್ಕೆ ಸಾಕ್ಷಿ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಇಲ್ಲ. ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಣ ಪಡೆದರೆ ಖಂಡಿತವಾಗಿಯೂ ಉತ್ತಮ ಫಲಿತಾಂಶ ದೊರೆಯುತ್ತದೆ. ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಜಾಗರೂಕರಾಗಬೇಕು. ಆದರೆ ಭಾಷೆಯ ಆಧಾರದ ಮೇಲೆ ಶಾಲೆ ಆಯ್ಕೆ ಮಾಡುವ ಧೋರಣೆಗೆ ಸರಿಯಲ್ಲ ಎಂದು ಹೇಳಿದರು.

ಈ ಕುರಿತು ಜಾಗೃತಿ ಮೂಡಿಸಲು ನವ ಕರ್ನಾಟಕ ಯುವಶಕ್ತಿ ವೇದಿಕೆ ಆರಂಭಿಸಿರುವ 'ಸರ್ಕಾರಿ ಶಾಲೆ ಉಳಿಸಿ–ಕನ್ನಡ ಬೆಳೆಸಿ' ಅಭಿಯಾನ ಶ್ಲಾಘನೀಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಶಂಕರಯ್ಯ, ಶಿಕ್ಷಣ ಕ್ಷೇತ್ರದಲ್ಲಿ ಒಂದು ವಿಶಿಷ್ಟ ಪ್ರಯತ್ನ, ಸಾರ್ವಜನಿಕ ಶಿಕ್ಷಣದ ಮಹತ್ವವನ್ನು ಜನತೆಗೆ ತಿಳಿಸಿ, ಸಮಾಜದಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಲು ನವ ಕರ್ನಾಟಕ ಯುವ ಶಕ್ತಿ ವೇದಿಕೆಯ ಕಾರ್ಯ ಶ್ಲಾಘನೀಯ ಎಂದರು.

ನವ ಕರ್ನಾಟಕ ಯುವಶಕ್ತಿ ವೇದಿಕೆ ಅಧ್ಯಕ್ಷ ಹಳ್ಳಿರೈತ ಅಂಬರೀಶ್, ಕಾರ್ಯದರ್ಶಿ ಉದಯಆರಾಧ್ಯ, ನಿವೃತ್ತ ಅರೆಸೇನಾ ಯೋಧರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಅನಂತರಾಜ್, ಗೋಪಾಲ್, ಕನ್ನಡ ಪರ ಹೋರಾಟಗಾರ ತೂಬಗೆರೆ ಷರೀಫ್, ಕನ್ನಡ ಸಾಹಿತ್ಯ ಪರಿಷತ್ ತೂಬಗೆರೆ ಹೋಬಳಿಯ ಅಧ್ಯಕ್ಷ ಕುಮಾರ್, ಮುಖ್ಯಶಿಕ್ಷಕ ವಸಂತ ಕುಮಾರ್ ಗೌಡ, ರಾಧಾಕೃಷ್ಣ, ಎಸ್‌ಡಿಎಂಸಿ ಅಧ್ಯಕ್ಷ ಕಾಂತರಾಜು, ಗ್ರಾಮ ಪಂಚಾಯಿತಿ ಸದಸ್ಯ ಟಿ.ಎನ್. ಕೃಷ್ಣಪ್ಪ, ಮಂಜುಳಾ ರಾಜಕುಮಾರ್, ನಾಗೇಶ್, ಯುವ ಮುಖಂಡ ನರಸಿಂಹಮೂರ್ತಿ, ನಾಗರಾಜು, ಮುಬಾರಕ್  ಷರೀಫ್, ಶ್ರೀಧರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.