ADVERTISEMENT

ಆನೇಕಲ್: ಉರಿಬಿಸಿಲ ತಂಪಾಗಿಸಿದ ಕನ್ನಡದ ಕಂಪು

ಗಡಿಯಲ್ಲಿ ಮೊಳಗಿದ ಕನ್ನಡ ಡಿಂಡಿಮ । ಮೆರುಗು ನೀಡಿದ ಭುವನೇಶ್ವರಿ ದೇವಿ ಮೆರವಣಿಗೆ । ‘ಹಚ್ಚೇವು ಕನ್ನಡದ ದೀಪ’ ನೃತ್ಯ ವೈಭೋಗ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 1:43 IST
Last Updated 2 ನವೆಂಬರ್ 2025, 1:43 IST
ರಾಜ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶನ
ರಾಜ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶನ   

ಆನೇಕಲ್: ರಾಗಿ ಕಣಜ ಹಾಗೂ ಗಡಿ ತಾಲ್ಲೂಕು ಆನೇಕಲ್‌ನಲ್ಲಿ ಶನಿವಾರ 70ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ವೈಭವದಿಂದ ನಡೆಯಿತು.

ನಾಡಹಬ್ಬಗಳ ಆಚರಣೆ ಸಮಿತಿಯಿಂದ ನಡೆದ 70ನೇ ವರ್ಷದ ಕರ್ನಾಟಕ ರಾಜ್ಯೋತ್ಸವದಲ್ಲಿ ಜಾನಪದ ಕಲಾತಂಡ, ವಿದ್ಯಾರ್ಥಿಗಳ ನೃತ್ಯ, ಭುವನೇಶ್ವರಿ ದೇವಿಯ ಮೆರವಣಿಗೆಯು ರಾಜ್ಯೋತ್ಸವವಕ್ಕೆ ಮೆರುಗು ನೀಡಿತು. ಉರಿ ಬಿಸಿಲನ್ನು ಲೆಕ್ಕಿಸದೆ ವಿದ್ಯಾರ್ಥಿಗಳು, ಕಲಾವಿದರು, ಶಿಕ್ಷಕರು ಹಾಗೂ ಶಿಬ್ಬಂದಿ ವರ್ಗ ನೃತ್ಯ, ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡ ಪ್ರೇಮ ಮೆರೆದರು. ಪಟ್ಟಣದ ಜನತೆ ವೈಭವದ ಮೆರವಣಿಗೆಗೆ ಸಾಕ್ಷಿಯಾದರು.

ರಾಜ್ಯೋತ್ಸವದ ಪ್ರಯುಕ್ತ ಪಟ್ಟಣದ ತಿಲಕ್‌ ವೃತ್ತದಿಂದ ಎಎಸ್‌ಬಿ ಮೈದಾನದವರೆಗೆ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ADVERTISEMENT

ಶಾಸಕ ಬಿ.ಶಿವಣ್ಣ ಮತ್ತು ತಹಶೀಲ್ದಾರ್‌ ಶಶಿಧರ್‌ ಮಾಡ್ಯಾಳ್‌ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಪಟದ ಕುಣಿತ, ಪೂಜಾ ಕುಣಿತ, ವೀರಗಾಸೆ, ಗಾರುಡಿಗೊಂಬೆಗಳು, ಡೊಳ್ಳುಕುಣಿತ ಸೇರಿದಂತೆ 10ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಭುವನೇಶ್ವರಿ ದೇವಿಯ ಮೆರವಣಿಗೆಯು ತಿಲಕ್‌ ವೃತ್ತದಿಂದ ಆರಂಭವಾಗಿ, ಗಾಂಧಿ ವೃತ್ತ, ದೇವರಕೊಂಡಪ್ಪ ವೃತ್ತದ ಮೂಲಕ ಹಾದು ಎಎಸ್‌ಬಿ ಮೈದಾನ ತಲುಪಿತು. ದೇವರಕೊಂಡಪ್ಪ ವೃತ್ತದಲ್ಲಿ ರಾಜೇಂದ್ರ ಪ್ರಸಾದ್‌ ಅವರ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಕಲಾವಿದರು ನಾದಸ್ವರ ಡೋಲು ಕಛೇರಿ ನಡೆಸಿಕೊಟ್ಟರು.

ಎಎಸ್‌ಬಿ ಮೈದಾನದಲ್ಲಿ ಶಾಸಕ ಬಿ.ಶಿವಣ್ಣ, ತಹಶೀಲ್ದಾರ್‌ ಶಶಿಧರ್‌ ಮಾಡ್ಯಾಳ್‌ ಅವರು ಧ್ವಜಾರೋಹಣ ನೆರವೇರಿಸಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳ ಕನ್ನಡ ಗೀತೆಗಳಿಗೆ ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು. ಹೆಬ್ಬಗೋಡಿಯ ವಿನಾಯಕ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ ಗಮನ ಸೆಳೆಯಿತು.

ಹಚ್ಚೇವು ಕನ್ನಡದ ದೀಪ ಗೀತೆಗೆ ಸೊಗಸಾಗಿ ನೃತ್ಯ ಪ್ರದರ್ಶನ ನೀಡಿದರು. ಆನೇಕಲ್‌ನ ವಿಧಾತ್‌ ಶಾಲೆಯ ವಿದ್ಯಾರ್ಥಿಗಳು ಮಹಿಳಾ ವೀರಗಾಸೆ, ಕರಗ, ಹುಲಿ ಕುಣಿತ, ನಂದಿಕೋಲು ಕುಣಿತ ಪ್ರದರ್ಶಿಸಿದರು. ಆನೇಕಲ್‌ ಸರಸ್ವತಿ ವಿದ್ಯಾ ಮಂದಿರ ಶಾಲೆ ಮತ್ತು ಹೆಬ್ಬಗೋಡಿ ಟ್ರಂಪ್ ವರ್ಲ್ಡ್‌ ಶಾಲೆಯ ವಿದ್ಯಾರ್ಥಿಗಳ ನೃತ್ಯ ಕಣ್ಮನ ಸೆಳೆಯಿತು. ಪುಟಾಣಿ ಮಕ್ಕಳು ಕನ್ನಡ ಗೀತೆಗಳಿಗೆ ಮನಮೋಹಕವಾಗಿ ನೃತ್ಯ ಪ್ರದರ್ಶನ ನೀಡಿದರು.

ಶತಕಂಠದಲ್ಲಿ ಮೊಳಗಿದ ಗೀತೆ: 100ಕ್ಕೂ ಹೆಚ್ಚು ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಕನ್ನಡ ಗೀತೆಗಳ ಗಾಯನ ನಡೆಸಿಕೊಟ್ಟರು. ಶಿಕ್ಷಕರು ಹಚ್ಚೆವು ಕನ್ನಡದ ದೀಪ, ರೈತ ಗೀತೆ, ತಾಯಿ ತಾಯಿ ಭುವನೇಶ್ವರಿ, ನಿತ್ಯೋತ್ಸವ ಗೀತೆಗಳ ಗಾಯನ ನಡೆಸಿಕೊಟ್ಟರು. ಏಕಕಾಲದಲ್ಲಿ 100ಕ್ಕೂ ಹೆಚ್ಚು ಶಿಕ್ಷಕರ ಗಾಯನ ಗಮನ ಸೆಳೆಯಿತು. ಸಂಗೀತ ಶಿಕ್ಷಕರಾದ ಆನಂದ್‌, ಶ್ರೀನಿವಾಸ್, ಯಲ್ಲಪ್ಪ, ರಾಮಾನುಜಂ ಅವರು ಶಿಕ್ಷಕರಿಗೆ ಮೂರು ದಿನಗಳಿಂದ ತರಬೇತಿ ನೀಡಿದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಉರಿ ಬಿಸಿಲನ್ನು ಲೆಕ್ಕಿಸದೇ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಆನೇಕಲ್‌ ವಿಧಾನಸಭಾ ಕ್ಷೇತ್ರ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪುರುಷೋತ್ತಮರೆಡ್ಡಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದೊಡ್ಡಹಾಗಡೆ ಹರೀಶ್‌, ಆನೇಕಲ್ ಪುರಸಭೆ ಸದಸ್ಯರಾದ ಎನ್‌.ಎಸ್.ಪದ್ಮನಾಭ್‌, ಮುನಾವರ್‌, ರಾಜೇಂದ್ರ ಪ್ರಸಾದ್‌, ಲೋಕೇಶ್‌ ಗೌಡ, ಲೇಖಕ ಜಗನ್ನಾಥರಾವ್‌ ಬಹುಳೆ, ತಾ.ಪಂ. ಮಂಜುನಾಥ್‌, ವಿಶೇಷ ತಹಶೀಲ್ದಾರ್‌ ಕರಿಯನಾಯಕ್‌, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಗುರುಮೂರ್ತಿ, ಎಡಿಎಲ್‌ಆರ್‌ ಮದನ್‌, ಎಇಇ ಚಿನ್ನಪ್ಪ, ಸಿಡಿಪಿಓ ಮಹೇಶ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಗೋಪಾಲ್‌, ಕಸಾಪ ಅಧ್ಯಕ್ಷ ಆದೂರು ಪ್ರಕಾಶ್‌, ವಕೀಲರ ಸಂಘದ ಮಾಜಿ ಅಧ್ಯಕ್ಷ ರಮೇಶ್‌, ಸಮಾಜ ಕಲ್ಯಾಣ ಇಲಾಖೆಯ ಮಂಜುನಾಥ್, ಆನೇಕಲ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ತಿಪ್ಪೇಸ್ವಾಮಿ ಇದ್ದರು.

ವಿದ್ಯಾರ್ಥಿನಿಯರ ನಂದಿಕೋಲು ಕುಣಿತ
ಶತಕಂಠದಲ್ಲಿ ಕನ್ನಡ ಗೀತಾ ಗಾಯನ
ಡೊಳ್ಳುಕುಣಿತ
ವೀರಗಾಸೆ ಕುಣಿತ
ಆಕರ್ಷಕ ಕಂಸಾಳೆ ನೃತ್ಯ
ವಿದ್ಯಾರ್ಥಿಗಳ ಭರತನಾಟ್ಯ ಪ್ರದರ್ಶನ
ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲಾಪ್ರದರ್ಶನ

ಅನ್ಯ ಭಾಷಿಕರಿಗೆ ಕನ್ನಡ ಕಲಿಕಾ ಕೇಂದ್ರ

ಆನೇಕಲ್‌ ತಾಲ್ಲೂಕು ಗಡಿಭಾಗದಲ್ಲಿದ್ದರೂ ನಿರಂತರವಾಗಿ ಕನ್ನಡ ಚಟುವಟಿಕೆಗಳು ನಡೆಯುತ್ತಿವೆ. ಕಸಬಾ ಹೋಬಳಿಯಲ್ಲಿ ಕನ್ನಡ ಭವನ ನಿರ್ಮಿಸಲು ಒಂದು ಎಕರೆ ಜಾಗ ಗುರುತಿಸುವಂತೆ ತಾಲ್ಲೂಕು ಆಡಳಿತವನ್ನು ಕೋರಲಾಗಿದೆ. ಐದು ಕೈಗಾರಿಕ ಪ್ರದೇಶಗಳಿರುವುದರಿಂದ ಅನ್ಯಭಾಷಿಕರಿಗೆ ಕನ್ನಡ ಭಾಷೆ ಕಲಿಸಲು ಕಲಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ನಿಟ್ಟಿನಲ್ಲಿ ಬೊಮ್ಮಸಂದ್ರ ಹೆಬ್ಬಗೋಡಿ ಸ್ಥಳೀಯ ಸಂಸ್ಥೆಗಳಲ್ಲಿ ಕಲಿಕಾ ಕೇಂದ್ರ ತೆರೆಯಲು ಸೂಚಿಸಲಾಗುವುದು ಎಂದು ಶಾಸಕ ಶಿವಣ್ಣ ತಿಳಿಸಿದರು.

ಅತ್ತಿಬೆಲೆಯಲ್ಲಿ ಭುವನೇಶ್ವರಿ ದೇವಿ ಕಂಚಿನ ಪ್ರತಿಮೆ

ತಾಲ್ಲೂಕು ಗಡಿಭಾಗ ಅತ್ತಿಬೆಲೆಯಲ್ಲಿ ಭುವನೇಶ್ವರಿ ದೇವಿಯ ಕಂಚಿನ ಪುತ್ಥಳಿ ಸ್ಥಾಪಿಸಲು ಉದ್ದೇಶಿಸಲಾಗಿದ್ದು ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು. ಆನೇಕಲ್‌ ತಾಲ್ಲೂಕು ಕ್ರೀಡಾಂಗಣ ಎಎಸ್‌ಬಿ ಮೈದಾನ ಸರ್ಜಾಪುರ ಅತ್ತಿಬೆಲೆಯಲ್ಲಿ ಕ್ರೀಡಾಂಗಣ ನಿರ್ಮಿಸಲು ಕ್ರೀಡಾ ಸಚಿವರನ್ನು ಕೋರಲಾಗುವುದು ಎಂದು ಶಾಸಕ ಶಿವಣ್ಣ ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.