ADVERTISEMENT

ಸಂಭ್ರಮದ ಹಸಿ ಕರಗ ಉತ್ಸವ  

ಶನಿವಾರ ರಾತ್ರಿ ಸಪ್ತಮಾತೃಕ ಮಾರಿಯಮ್ಮ ಕರಗ ಮಹೋತ್ಸವಕ್ಕೆ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 17 ಮೇ 2019, 13:41 IST
Last Updated 17 ಮೇ 2019, 13:41 IST
ಪೂಜಾರಿ ಮುನಿರತ್ನಂ ಬಾಲಾಜಿ ಹಸೀ ಕರಗ ಹೊತ್ತು ನಗರ ಪ್ರದಕ್ಷಿಣೆ ನಡೆಸಿದರು
ಪೂಜಾರಿ ಮುನಿರತ್ನಂ ಬಾಲಾಜಿ ಹಸೀ ಕರಗ ಹೊತ್ತು ನಗರ ಪ್ರದಕ್ಷಿಣೆ ನಡೆಸಿದರು   

ದೊಡ್ಡಬಳ್ಳಾಪುರ: ನಗರದ ವನ್ನಿಗರಪೇಟೆಯಲ್ಲಿರುವ ಶ್ರೀಸಪ್ತಮಾತೃಕ ಮಾರಿಯಮ್ಮ ದೇವಾಲಯದಲ್ಲಿ ನಡೆಯಲಿರುವ ಕರಗ ಮಹೋತ್ಸವದ ಅಂಗವಾಗಿ ಹಸಿ ಕರಗ ಉತ್ಸವವು ಶುಕ್ರವಾರ ಬೆಳಿಗ್ಗೆ ಸಂಭ್ರಮದಿಂದ ನೆರವೇರಿತು. ಉತ್ಸವವನ್ನು ಸಹಸ್ರಾರು ಜನರು ವೀಕ್ಷಿಸಿದರು.

ಕುಪ್ಪಂನ ಪೂಜಾರಿ ಮುನಿರತ್ನಂ ಬಾಲಾಜಿ ಹಸೀ ಕರಗವನ್ನು ಹೊತ್ತು ಕರಗದ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

ನಗರದ ಗಗನಾರ್ಯಸ್ವಾಮಿ ಮಠದಿಂದ ಹೊರಟ ಉತ್ಸವವು ಹಳೇ ಬಸ್ ನಿಲ್ದಾಣ, ನೆಲದಾಂಜನೇಯಸ್ವಾಮಿ ದೇವಾಲಯ, ಏಳು ಸುತ್ತಿನ ಕೋಟೆ, ತೂಬಗೆರೆ ಪೇಟೆ, ವನ್ನಿಗರಪೇಟೆ ಮತ್ತಿತರೆಡೆ ಸಂಚರಿಸಿ ದೇವಾಲಯದ ಬಳಿ ಆಗಮಿಸಿತು.

ADVERTISEMENT

ಶನಿವಾರ ರಾತ್ರಿ ನಡೆಯಲಿರುವ ಶ್ರೀಸಪ್ತಮಾತೃಕ ಮಾರಿಯಮ್ಮ ಕರಗ ಮಹೋತ್ಸವಕ್ಕೆ ಸಕಲ ಸಿದ್ದತೆಗಳು ನಡೆದಿವೆ. ದೇವಾಲಯವನ್ನು ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿದೆ. ನಗರದ ವಿವಿಧ ವೃತ್ತಗಳಲ್ಲಿ ತಮಿಳುನಾಡು ಕಲಾವಿದರಿಂದ ತಯಾರಿಸಲಾದ ವಿವಿಧ ದೇವತೆಗಳ ವಿದ್ಯುತ್ ದೀಪಾಲಂಕೃತ ಬೃಹತ್ ಕಟೌಟ್‌ಗಳು ಕರಗದ ಸಂಭ್ರಮಕ್ಕೆ ಮೆರುಗು ನೀಡಿವೆ. ಕರಗ ಸ್ವಾಗತಿಸಲು ನಗರದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.

ಕರಗದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಗಣ ಹೋಮ, ನವಗ್ರಹ ಹೋಮ, ಚಂಡಿಕಾ ಹೋಮ ಪೂಜಾ ಕಾರ್ಯಕ್ರಮಗಳು ನಡೆದವು. ಕರಗ ಉತ್ಸವದ ದಿನದವರೆಗೆ ನಿತ್ಯ ಅಭಿಷೇಕ, ಪೊಂಗಲ್ ಸೇವೆ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

18 ರಂದು​ ಕರಗ ಮಹೋತ್ಸವ: ಶ್ರೀಸಪ್ತಮಾತೃಕಾ ಮಾರಿಯಮ್ಮದೇವಿ ಕರಗ ಮಹೋತ್ಸವವು ಮೇ 18 ರಂದು ರಾತ್ರಿ 11 ರಿಂದ ನಡೆಯಲಿದೆ. 9 ವರ್ಷಗಳಿಂದ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಸೇರಿದಂತೆ ಆಂದ್ರಪ್ರದೇಶ, ತಮಿಳುನಾಡು ರಾಜ್ಯದ ವಿವಿಧಡೆಗಳಲ್ಲಿ ಕರಗ ಹೊತ್ತಿರುವ ಆಂಧ್ರಪ್ರದೇಶ ಕುಪ್ಪಂ ಪೂಜಾರಿ ಮುನಿರತ್ನಂ ಬಾಲಾಜಿ ಎರಡನೇ ಬಾರಿಗೆ ದೊಡ್ಡಬಳ್ಳಾಪುರದಲ್ಲಿ ಕರಗ ಹೊರುತಿದ್ದಾರೆ. ವಂಶಪಾರಂಪರೆಯಾಗಿ ಕರಗ ಆಚರಣೆ ಮಾಡುತ್ತಾ ಬರುತ್ತಿರುವ ಕುಟುಂಬದ ಇವರು ಕರಗ ನೃತ್ಯದಲ್ಲಿ ಪರಿಣಿತರಾಗಿದ್ದಾರೆ.

ಕುರುಕ್ಷೇತ್ರ ಪೌರಾಣಿಕ ನಾಟಕ: ನಗರದ ತೇರಿನ ಬೀದಿ ವಿಶ್ವೇಶ್ವರಯ್ಯ ವೃತ್ತದ ಶ್ರೀಆಂಜನೇಯ ಕೃಪಾಪೋಷಿತ ನಾಟಕ ಮಂಡಲಿ ವತಿಯಿಂದ ಸಪ್ತಮಾತೃಕ ಮಾರಿಯಮ್ಮ ಕರಗ ಮಹೋತ್ಸವದ ಅಂಗವಾಗಿ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ಮೇ 18ರ ರಾತ್ರಿ 8.30ಕ್ಕೆ ಅರಳುಮಲ್ಲಿಗೆ ಬಾಗಿಲು ವಿಶ್ವೇಶ್ವರಯ್ಯ ಆಟದ ಮೈದಾನದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.