ADVERTISEMENT

Karnataka Budget 2023 | ಚಿಟಿಕೆ ಸಕ್ಕರೆ ಹಂಚುವ ಕೆಲಸ ಆಯವ್ಯಯದಲ್ಲಿ ನಡೆದಿದೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2023, 3:30 IST
Last Updated 8 ಜುಲೈ 2023, 3:30 IST
ಪ್ರೊ.ಎಂ.ಜಿ.ಚಂದ್ರಶೇಖರಯ್ಯ
ಪ್ರೊ.ಎಂ.ಜಿ.ಚಂದ್ರಶೇಖರಯ್ಯ   

ಪ್ರೊ.ಎಂ.ಜಿ.ಚಂದ್ರಶೇಖರಯ್ಯ (ಪ್ರಗತಿಪರ ಚಿಂತಕರು, ದೊಡ್ಡಬಳ್ಳಾಪುರ)

ದೊಡ್ಡಬಳ್ಳಾಪುರ: ಹೊಸ ಸರ್ಕಾರದ ಮುಖ್ಯಮಂತ್ರಿಗಳು 14ನೇ ಬಾರಿ ಆಯವ್ಯಯವನ್ನು‌ ಮಂಡಿಸಿ ದಾಖಲೆ ನಿರ್ಮಿಸಿದರು. ಮೇಲ್ನೋಟಕ್ಕೆ ಇದು ಚುನಾವಣಾ ಪೂರ್ವದಲ್ಲಿ ‌ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಜನಪ್ರಿಯ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಸರ್ಕಾರದ ನಿಲವು ಸ್ವಾಗತಾರ್ಹವೆನಿಸಿದರೂ ಯಾವುದೇ ಸಿದ್ಧತೆ ಮಾಡಿಕೊಳ್ಳದೆ ದಿಢೀರ್ ರದ್ದು ಪಡಿಸಿದರೆ ವಿದ್ಯಾರ್ಥಿಗಳು ತೊಂದರೆಗೆ ಸಿಲುಕುವರು. ಪ್ರಾಥಮಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣ ನೀತಿಯು ಈಚಿನ ವರ್ಷಗಳಲ್ಲಿ ಶಿಕ್ಷಣ ಸಚಿವರು ಬದಲಾದಂತೆ ಬದಲಾಗುತ್ತಿದೆ. ಇದು ವಿದ್ಯಾರ್ಥಿಗಳಲ್ಲಿ ಅನಗತ್ಯ ಗೊಂದಲ ಮತ್ತು ತೊಂದರೆಗೆ ಕಾರಣವಾಗಬಹುದು.

ADVERTISEMENT

ಐದು ಗ್ಯಾರಂಟಿ ಯೋಜನೆಗಳಿಗೆ ₹52,000 ಕೋಟಿಗಳನ್ನು ಮೀಸಲಿಟ್ಟಿದೆ. ಮಹಿಳೆಯರಿಗೆ ಆಯ್ದ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಯೋಜನೆ ಈಗಾಗಲೇ ಅನುಷ್ಠಾನಕ್ಕೆ ಬಂದಿದ್ದು, 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆ ಈ ತಿಂಗಳಿಂದ ಜಾರಿಗೆ ಬರಲಿದೆ. ಆದರೆ ಇಂಧನ ಇಲಾಖೆಯು ಈಗಾಗಲೇ ₹91 ಸಾವಿರ ಕೋಟಿ ಸಾಲದ ಭಾರದಲ್ಲಿ ಕುಸಿಯುತ್ತಿದೆ. ಇನ್ನು 200 ಯೂನಿಟ್ ಉಚಿತ ವಿದ್ಯುತ್ ಪೂರೈಕೆಯ ನಂತರ ಇಲಾಖೆ ತನ್ನ ಆದಾಯ ಮೂಲದಲ್ಲಿ ಕುಸಿತ ಕಂಡು ತನ್ನ ಹೊಸ ಯೋಜನೆಗಳಿಗೆ, ವಿಸ್ತರಣೆಗೆ, ನಿರ್ವಹಣೆಗೆ ಸದಾ ಸರ್ಕಾರದ ಕಡೆ ನೋಡಬೇಕಾಗುತ್ತದೆ. ಇದು ವಿದ್ಯುತ್ ಸರಬರಾಜು ಕಂಪನಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಪದವಿ ಮತ್ತು ಡಿಪ್ಲೊಮಾ ಪದವೀಧರರಿಗೆ ಯುವನಿಧಿ‌ ಯೋಜನೆ ಅಡಿಯಲ್ಲಿ ನೀಡುವ ಹಣ ಯಾವತ್ತು ಬಿಡುಗಡೆಯಾಗುತ್ತದೆ ಎಂಬ ಬಗ್ಗೆ ಆಯವ್ಯಯದಲ್ಲಿ ಯಾವುದೇ ಸೂಚನೆ ಇಲ್ಲ. ಚುನಾವಣಾ ಪ್ರಚಾರದ ಸಮಯದಲ್ಲಿ ಪದವೀಧರರಿಗೆ ಯುವನಿಧಿಯ ಮೂಲಕ ಪ್ರತಿ ತಿಂಗಳು ₹2 ಸಾವಿರ ಹಣ ನೀಡಲಾಗುತ್ತದೆ ಎಂದು ಪ್ರಚಾರ ಮಾಡಿದ ಈಗಿನ ಆಡಳಿತ ಪಕ್ಷ ಈಗ ನಿಬಂಧನೆಗಳನ್ನು ಹಾಕಿ 2023-24ರಲ್ಲಿ ಪದವಿ ಮತ್ತು ಡಿಪ್ಲೊಮಾ ಪಡೆದವರು ಮಾತ್ರ ಈ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಎಂದು ಹೇಳಿ ಲಕ್ಷಾಂತರ ಯುವಕರನ್ನು ನಿರಾಶೆಗೊಳಿಸಿದೆ. ಹಾಗೂ ಕಳೆದ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದವರು ಕೂಡ ತಕ್ಷಣ ಈ ಗ್ಯಾರಂಟಿ ಯೋಜನೆ ಜಾರಿಗೆ ಬರುವುದು ತಡವಾಗುವುದರಿಂದ ಹಲವು ತಿಂಗಳು ಕಾಯಬೇಕಾಗುತ್ತದೆ.

ಈ ಆಯವ್ಯಯದಲ್ಲಿ ಆಕರ್ಷಕ ಶೀರ್ಷಿಕೆಗಳು, ಕವಿಗಳ ಪದ್ಯಭಾಗಗಳು ಇವೆ. ಇವುಗಳ ಆಶಯ ಚೆನ್ನಾಗಿಯೇ ಇದ್ದರೂ ಅವುಗಳನ್ನು ಜಾರಿಗೊಳಿಸಲು ಹಣದ ಅಡಚಣೆ ಖಂಡಿತ ಉಂಟಾಗಲಿದೆ. ಕೆಲವು ಅಗತ್ಯ ಸೇವೆಗಳನ್ನು ನೀಡಲು ಹಣಕಾಸಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಉದಾಹರಣೆಗೆ, ಅಗತ್ಯ ಸೇವೆಗಳಾದ ಆರೋಗ್ಯಕ್ಕೆ ಶೇ 4, ಸಮಾಜ ಕಲ್ಯಾಣಕ್ಕೆ ಶೇ 3, ಕೃಷಿ ಶೇ 2 ಹೀಗೆ ಕಡಿಮೆ ಹಣವನ್ನು ಮೀಸಲಿಡಲಾಗಿದೆ. ಇದರಿಂದ ಬಡವರು, ಆರ್ಥಿಕವಾಗಿ ದುರ್ಬಲರಾದವರು ಅಗತ್ಯ ಸೇವೆಗಳಿಂದ ವಂಚಿತರಾಗುವರು. ಅದರಲ್ಲೂ ಕೃಷಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಒಂದು ಕಡೆ ಅನ್ನಭಾಗ್ಯ ಯೋಜನೆ ಮತ್ತು ಇಂದಿರಾ ಕ್ಯಾಂಟೀನ್‌ಗೆ ಸಾವಿರಾರು ಕೋಟಿ ನೀಡುವ ಸರ್ಕಾರ ಆಹಾರೋತ್ಪಾದನೆಯನ್ನು ಕಡೆಗಣಿಸಿ ಕೇಂದ್ರ ಸರ್ಕಾರವು ಆಹಾರ ಭದ್ರತೆ ಯೋಜನೆ ಅಡಿಯಲ್ಲಿ ನೀಡುವ ಅಕ್ಕಿಯನ್ನು ಮಾತ್ರ ಅವಲಂಬಿಸಿದೆ. ಉಳಿದ ಐದು ಕೆ.ಜಿ. ಅಕ್ಕಿ ಕೊಡುವ ಶಕ್ತಿ ನಮ್ಮ ರಾಜ್ಯ ಸರ್ಕಾರಕ್ಕೆ ಇಲ್ಲ. ಇದರಿಂದ ಐದು ಕೆ.ಜಿ.ಅಕ್ಕಿ ಬದಲಿಗೆ ಹಣ ನೀಡುವ ತೀರ್ಮಾನ ಮಾಡಿದೆ. ಮುಂದಿನ ದಿನಗಳಲ್ಲಾದರೂ ಆಹಾರೋತ್ಪಾದನೆಯಲ್ಲಿ ನಮ್ಮ ರಾಜ್ಯ ಸ್ವಾವಲಂಬಿ ಆಗಬೇಕಾದರೆ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಯೋಜನೆಯ ಅಗತ್ಯ ಇತ್ತು. ಆದರೆ ಸರ್ಕಾರದ ಧೋರಣೆ ರಾಜ್ಯದ ರೈತರನ್ನು ದುರ್ಬಲಗೊಳಿಸುತ್ತದೆ. ಉತ್ಪಾದನಾ ವಲಯವನ್ನು ಬಲಿಷ್ಠಗೊಳಿಸದೆ ಕೇವಲ ಉಚಿತ, ಗ್ಯಾರಂಟಿ ಯೋಜನೆಗಳ ಮೇಲೆ ಜನಪ್ರಿಯತೆ ಗಳಿಸಲು ಹೊರಟರೆ ಭವಿಷ್ಯದ ಕರ್ನಾಟಕದ ಅರ್ಥ ವ್ಯವಸ್ಥೆಗೆ ಭಾರೀ ಹೊಡೆತ ಬೀಳಲಿದೆ.

ಜಾತಿ, ಧರ್ಮ ಆಧರಿಸಿ ಅಭಿವೃದ್ಧಿ ನಿಗಮ ಸ್ಥಾಪನೆಯು ರಾಜ್ಯದ ಸಮಗ್ರ ಅಭಿವೃದ್ಧಿ ಯೋಜನೆಯ ಪರಿಕಲ್ಪನೆಯೇ ಈಚಿನ ಸರ್ಕಾರಗಳಿಗೆ ಇಲ್ಲ ಎಂಬ ಶಂಕೆ ಮೂಡಿಸುತ್ತದೆ. ಲಿಂಗಾಯತ ಅಭಿವೃದ್ಧಿ ಮಂಡಳಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಒಕ್ಕಲಿಗ ಅಭಿವೃದ್ಧಿ ಮಂಡಳಿ ಹಾಗೂ ಈ ಸಾಲಿನಲ್ಲಿ ಘೋಷಣೆ ಮಾಡಿರುವ ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿಗಳ ಅಗತ್ಯ ಖಂಡಿತ ಇಲ್ಲ. ಇಂತಹ ಪೀಸ್ ಮೀಲ್ ಯೋಜನೆಗಳು ಓಟ್ ಬ್ಯಾಂಕ್ ಸೃಷ್ಟಿಸಬಹುದೇ ಹೊರತು ಸಮಾಜದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿಲ್ಲ.

ಒಂದು ಕಡೆ ಸಾಲು ಸಾಲು ಕಲ್ಯಾಣ ಯೋಜನೆಗಳನ್ನು ರೂಪಿಸುವ ಸರ್ಕಾರ ಅಬಕಾರಿ ಸುಂಕ ಹೆಚ್ಚಿಸಿ ಜನರ ಜೇಬನ್ನು ಖಾಲಿ ಮಾಡುತ್ತದೆ ಮತ್ತು ಆರೋಗ್ಯವನ್ನು ಅಪಾಯಕ್ಕೆ ತಳ್ಳುತ್ತದೆ. ಅಬಕಾರಿ ತೆರಿಗೆಗಳನ್ನು ಹೆಚ್ಚಿಸಿ ಗ್ಯಾರಂಟಿ ಯೋಜನೆ ನೀಡುವುದು ವಿಪರ್ಯಾಸವಲ್ಲದೆ ಮತ್ತೇನಲ್ಲ.

ಒಟ್ಟಾರೆ ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಮತ್ತು ಇನ್ನು ಕೆಲವೇ ತಿಂಗಳುಗಳಲ್ಲಿ ಎದುರಾಗುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರಿಗೂ ಚಿಟಿಕೆ ಸಕ್ಕರೆ ಹಂಚುವ ಕೆಲಸ ಆಯವ್ಯಯದಲ್ಲಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.