
ದೊಡ್ಡಬಳ್ಳಾಪುರ: 2026-27ನೇ ಸಾಲಿನ ರಾಜ್ಯದ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ. ಹಲವು ವರ್ಷಗಳ ಬೇಡಿಕೆ ಈ ಬಾರಿಯಾದರೂ ಈಡೇರುವುದೇ, ಜಿಲ್ಲೆಯ ಹಲವು ಕಾರ್ಯಕ್ರಮಗಳಿಗೆ ಅನುದಾನ ಸಿಗುವುದೇ ಎಂದು ಜನರು ಎದುರು ನೋಡುತ್ತಿದ್ದಾರೆ.
ಶಂಕುಸ್ಥಾಪನೆಯಾಗಿರುವ ಜಿಲ್ಲಾ ಆಸ್ಪತ್ರೆ ನಿರ್ಮಾಣ, 100 ಹಾಸಿಗಳ ಇಎಸ್‌ಐ ಆಸ್ಪತ್ರೆ ಉದ್ಘಾಟನೆ, ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ಹೋಗುತ್ತಿರುವ ಕೊಳಚೆ ನೀರಿನ 3ನೇ ಹಂತದ ಶುದ್ಧೀಕರಣ, ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸ್ಥಳಾಂತರ ಸೇರಿದಂತೆ ಇನ್ನೂ ಹಲವಾರು ಯೋಜನೆಗಳಿಗೆ ಅನುದಾನ ನೀಡಬೇಕೆಂದು ತಾಲ್ಲೂಕು ಜನರ ಬಹುವರ್ಷಗಳ ಬೇಡಿಕೆಯಾಗಿದೆ.
ಈ ಹಳೆ ಬೇಡಿಕೆಗಳು ರಾಜ್ಯದ 2026-27ನೇ ಸಾಲಿನ ಬಜಟ್‌ನಲ್ಲಿ ಈಡೇರುವ ಆಶಾಭಾವ ಹೊತ್ತು ಜನ ಕಾಯುತ್ತಿದ್ದಾರೆ.
ಈಗಾಗಲೇ ನಗರದ ಸಿದ್ದೇನಾಯಕನಹಳ್ಳಿ ಸಮೀಪ 16 ಎಕರೆ ಪ್ರದೇಶದಲ್ಲಿ ಡಯಾಲೀಸಿಸ್ ವಿಭಾಗ, ರಕ್ತ ನಿಧಿ ಕೇಂದ್ರ, ತುರ್ತು ಘಟಕ ಸೇರಿದಂತೆ 100 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಈ ಹಿಂದಿನ ಬಜೆಟ್‌ನಲ್ಲಿ ₹192 ಕೋಟಿ ನಿಗದಿ ಮಾಡಿತ್ತು. ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದ್ದಾರೆ. ಆದರೆ ತುರ್ತು ಘಟಕದ ನಿರ್ಮಾಣ ಕೆಲಸ ಹೊರತು ಬೇರೆ ಯಾವುದೇ ಕಟ್ಟಡ ಕಾಮಗಾರಿ ಆರಂಭವಾಗಿಲ್ಲ.
2024-25ನೇ ಸಾಲಿನ ಬಜೆಟ್‌ನಲ್ಲಿ ಜಿಲ್ಲಾಸ್ಪತ್ರೆಗೆ ನಿಗದಿಯಾಗಿದ್ದ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದು, ಈಗ ನಗರದಲ್ಲಿರುವ ತಾಯಿ ಮಗು ಸರ್ಕಾರಿ ಆಸ್ಪತ್ರೆಯನ್ನೇ ಉನ್ನತೀಕರಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿ ಪಕ್ಷಾತೀತವಾಗಿ ವಿವಿಧ ರಾಜಕೀಯ ಪಕ್ಷಗಳು, ಪ್ರಗತಿಪರ ಸಂಘಟನೆಗಳು ಜಿಲ್ಲಾ ಆಸ್ಪತ್ರೆ ಹೋರಾಟ ಸಮಿತಿ ಅಡಿಯಲ್ಲಿ ಹೋರಾಟ ನಡೆಸುತ್ತಿವೆ.
ಈ ಹಿಂದೆ ನಿಗದಿಯಾಗಿರುವ ಹಣವನ್ನು 2026ನೇ ಸಾಲಿನ ಬಜೆಟ್‌ನಲ್ಲಿ ಬಿಡುಗಡೆ ಮಾಡಿ, ಕಾಮಗಾರಿ ಆರಂಭಿಸುವಂತೆ ಹೋರಾಟ ಸಮಿತಿಯರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮನವಿ ಸಲ್ಲಿಸಿದ್ದಾರೆ. ಹಾಗೆಯೇ ಸರ್ಕಾರಿ ಮೇಡಿಕಲ್ ಕಾಲೇಜ್ ಅನ್ನು ದೊಡ್ಡಬಳ್ಳಾಪುರದಲ್ಲಿ ಸ್ಥಾಪಿಸುವ ಪ್ರಸ್ತಾವನೆ ಪ್ರತಿ ಭಾರಿಯ ಬಜೆಟ್‌ನಲ್ಲೂ ಕೇಳಿ ಬರುತ್ತಿದೆಯೇ ಹೊರತು ಇದುವರೆಗೂ ಸಾಕಾರವಾಗಿಲ್ಲ ಎಂದು ತಿಳಿಸಿದ್ದಾರೆ.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 2014ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ಮಾಡಿದ್ದ 100 ಹಾಸಿಗಳೆ ಇಎಸ್‌ಐ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಮುಕ್ತಾಯವಾಗಿ, ಆಸ್ಪತ್ರೆಗೆ ಅಗತ್ಯ ಯಂತ್ರೋಪಕರಣಗಳು ಬಂದಿವೆ. ಆದರೆ ಕನಿಷ್ಠ ಪ್ರಮಾಣದ ಹಣಕಾಸಿನ ಕೊರತೆಯಿಂದ ಆಸ್ಪತ್ರೆ ಕಾರ್ಮಿಕರ ಸೇವೆಗೆ ಜನಾರ್ಪಣೆ ಆಗಿಲ್ಲ. 2026-27ನೇ ಸಾಲಿನ ಬಜ್‌ನಲ್ಲಿ ಆಸ್ಪತ್ರೆಗೆ ಆಗತ್ಯ ಹಣ ಬಿಡುಗಡೆಯಾಗಿ ಕಾರ್ಮಿಕರ ಆರೋಗ್ಯ ಸೇವೆಗೆ ಇಎಸ್‌ಐ ಆಸ್ಪತ್ರೆ ದೊರೆಯಬೇಕು ಎನ್ನುವುದು ಸಾವಿರಾರು ಕಾರ್ಮಿಕರ ಆಗ್ರಹ.
ದೊಡ್ಡಬಳ್ಳಾಪುರ ವಕೀಲರ ಸಂಘದ ನೂತನ ಭವನ ನಿರ್ಮಾಣದ ಬಹುದಿನಗಳ ಬೇಡಿಕೆಗೆ ಬಜೆಟ್‌ನಲ್ಲಿ ಹಣ ಮೀಸಲಿಡುವಂತೆ ಇತ್ತೀಚೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಬೆಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಗಿರೀಶ್‌ಕುಮಾರ್ ಭೇಟಿ ಮಾಡಿ ಮನವಿಸಲ್ಲಿಸಿದ್ದಾರೆ.
ಕಳೆದ ಬಜೆಟ್‌ನಲ್ಲಿ ತಾಲ್ಲೂಕಿನ ಆದಿನಾರಾಯಣಹೊಸಹಳ್ಳಿ ಸಮೀಪ ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಘೋಷಣೆಯಾಗಿತ್ತು. ಆದರೆ ಪ್ರಸ್ತಕ ಬಜೆಟ್ ಸಮೀಪಿಸಿದರೂ ಕ್ರೀಡಾಂಗಣ ನಿರ್ಮಾಣ ಸಂಬಂಧ ಗುಲಗಂಜಿಯಷ್ಟು ಕೆಲಸ ಆಗಿಲ್ಲ. ಕ್ರೀಡಾಂಗಣ ಅಭಿವೃದ್ಧಿಗೆ ₹17 ಕೋಟಿ ಅನುದಾನ ಅಂದಾಜಿಸಲಾಗಿದೆ. ಇದರಲ್ಲಿ ₹5 ಕೋಟಿ ವೆಚ್ಚದಲ್ಲಿ ಪ್ರಥಮ ಹಂತದಲ್ಲಿ ಕ್ರೀಡಾಂಗಣ ಅಭಿವೃದ್ಧಿ ಹಾಗೂ ಆಧುನಿಕ ಮಾದರಿಯಲ್ಲಿ ಸೈಕ್ಲಿಂಗ್ ಟ್ರ್ಯಾಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ ಹಣಕಾಸು ಬಿಡುಗಡೆಯಾಗದೆ ಯಾವ ಕಾಮಗಾರಿಯೂ ಆರಂಭವಾಗಿಲ್ಲ.
15ನೇ ಹಣಕಾಸು ಯೋಜನೆ ಹಣ ಹಂಚಿಕೆಗೆ ಒತ್ತಾಯ: ತಾಲ್ಲೂಕಿನಲ್ಲಿ ಕ್ವಿನ್‌ಸಿಟಿ ಸೇರಿದಂತೆ ಕೈಗಾರಿಕಾ ಪ್ರದೇಶದಲ್ಲಿ ಹತ್ತಾರು ಬೃಹತ್ ಕಂಪನಿಗಳು ಆರಂಭವಾಗುತ್ತಿವೆ. ರಾಜ್ಯದ ವಿವಿಧ ನಗರಸಭೆಗಳಿಗೆ 15ನೇ ಹಣಕಾಸು ಯೋಜನೆಯ ಹಣ ಹಂಚಿಕೆಯಾಗಿದೆ. ಆದರೆ ಬಿಡುಗಡೆ ಮಾತ್ರ ಇದುವರೆಗೂ ಆಗಿಲ್ಲ. ನಗರದ ಅಭಿವೃದ್ಧಿ ವೇಗ ಮಾತ್ರ ಆಮೆಗತಿಯಲ್ಲೇ ಸಾಗುತ್ತಿದೆ ಎನ್ನುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.
ಸಂಚಾರ ಪೊಲೀಸ್ ಠಾಣೆ ಆರಂಭಕ್ಕೆ ಒತ್ತಾಯ: ನಗರದ ಮೂಲಕ ರಾಜ್ಯ ಹೆದ್ದಾರಿ, ನಗರದ ಅಂಚಿನಲ್ಲೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿವೆ. ಕೈಗಾರಿಕಾ ಪ್ರದೇಶ ಆಭಿವೃದ್ಧಿ ನಂತರ ಜನಸಂಖ್ಯೆ, ವಾಹನಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿವೆ. ಈಗ ನಗರದಲ್ಲಿ ಇರುವ ಕಿರಿದಾದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಮಿತಿ ಮೀರಿದೆ. ಇದರ ನಿಯಂತ್ರಣಕ್ಕೆ ಸಂಚಾರ ಪೊಲೀಸ್ ಠಾಣೆ ಸ್ಥಾಪನೆಗೆ ಎರಡು ಎಕರೆ ಸ್ಥಳ ಮೀಸಲಿಟ್ಟು ಐದು ವರ್ಷಗಳೇ ಕಳೆದಿವೆ. ಪ್ರತಿ ಬಜೆಟ್ ಸಮೀಪಿಸುವಾಗಲೂ ಸಂಚಾರ ಪೊಲೀಸ್ ಠಾಣೆಗೆ ಆಗ್ರಹಗಳು ಕೇಳಿಬರುತ್ತವೆ ಮತ್ತೆ ಅದು ಹಿಂದೆ ಸರಿಯುತ್ತಲೇ ಬರುತ್ತಿದೆ.
ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಗಿತಕ್ಕೆ ದಶಕ: ಮೊದಲ ಬಾರಿಗೆ ಬಾಶೆಟ್ಟಿಹಳ್ಳಿ ಕೈಗಾರಿಕ ಪ್ರದೇಶ ಸ್ಥಾಪನೆಯಾಗಿದ್ದ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಕೆಟ್ಟು ನಿಂತು 10 ವರ್ಷಗಳೇ ಕಳೆದಿದೆ. 8 ಹಂತಗಳಲ್ಲಿ ಕೈಗಾರಿಕಾ ಪ್ರದೇಶ ವಿಸ್ತರಣೆಯಾಗಿದ್ದರೂ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಮಾತ್ರ ಇದುವರೆಗೂ ದುರಸ್ತಿಯಾಗಿಲ್ಲ. ಪ್ರತಿ ವರ್ಷದ ರಾಜ್ಯ ಬಜೆಟ್‌ನಲ್ಲೂ ಹಣ ಮಾತ್ರ ಮೀಸಲಿಡಲಾಗುತ್ತಿದೆಯೇ ವಿನಹ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಮಾತ್ರ ದುರಸ್ತಿಯಾಗಿ ಕಾರ್ಯಾರಂಭವಾಗಿಲ್ಲ.
ಪ್ರಮುಖ ಬೇಡಿಕೆ
*ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ
* ಇಎಸ್‌ಐ ಆಸ್ಪತ್ರೆ ಉದ್ಘಾಟನೆ
* ಕೊಳಚೆ ನೀರು 3ನೇ ಹಂತದ ಶುದ್ಧೀಕರಣ
* ಜಿಲ್ಲಾ ಕ್ರೀಡಾಂಗಣ
* ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸ್ಥಳಾಂತರ
*ಸರ್ಕಾರಿ ವೈದ್ಯಕೀಯ ಕಾಲೇಜು ಸಂಚಾರ ಪೊಲೀಸ್ ಠಾಣೆ
ಎಂಟು ವರ್ಷದ ಹೋರಾಟಕ್ಕೆ ಸಿಗುವುದೇ ಫಲ?
ಅರ್ಕಾವತಿ ನದಿ ಪಾತ್ರದ ಮಜರಾಹೊಸಹಳ್ಳಿ ದೊಡ್ಡತುಮಕೂರು ಕೆರೆಗಳಿಗೆ ಬಾಶೆಟ್ಟಿಹಳ್ಳಿ ಕೈಗಾರಿಕೆಗಳ ನಗರಸಭೆಯ ವ್ಯಾಪ್ತಿಯ ಹಾಗೂ ಬಾಶೇಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಒಳ ಚರಂಡಿಯ ಕೊಚ್ಚೆ ನೀರು ಹರಿದು ಹೋಗುತ್ತಿವೆ. ಈ ನೀರಿನ 3ನೇ ಹಂತದ ಶುದ್ಧೀಕರಣ ಘಟಕ ಸ್ಥಾಪಿಸಬೇಕೆಂದು 8 ವರ್ಷಗಳಿಂದ ಈ ಭಾಗದ ಜನರು ಹೋರಾಟ ನಡೆಸುತ್ತಿದ್ದಾರೆ. ಜನವರಿ 24 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ₹52 ಕೋಟಿ ವೆಚ್ಚದಲ್ಲಿ 3ನೇ ಹಂತದ ಶುದ್ಧೀಕರಣ ಘಟಕ ಸ್ಥಾಪನೆ ಮಾಡುವ ಕುರಿತಂತೆ ಭರವಸೆ ದೊರೆತಿದೆ. ಹೋರಾಟಗಾರರ ಈ ಬೇಡಿಕೆಗೆ ಬಜೆಟ್‌ನಲ್ಲಿ ಹಣ ನಿಗದಿಯಾಗುವ ಮೂಲಕ ಈಡೇರುವುದೇ ಎನ್ನುವ ನಿರೀಕ್ಷೆ ಇದೆ.
ಜನಸಂಖ್ಯೆ ಆಧಾರದ ಮೇಲೆ ಅನುದಾನ ನೀಡಿ
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ 8 ಹಂತಗಳಲ್ಲಿ ವಿಸ್ತಾರಣೆಯಾಗಿದೆ. ಮೊಬೈಲ್ ತಯಾರಿಕ ಫಾಕ್ಸ್‌ಕಾನ್ ಘಟಕ ಸ್ಥಾಪನೆಯಾದ ನಂತರ ನಗರದಲ್ಲಿ ವಾಸ ಮಾಡುವ ಜನ ಸಂಖ್ಯೆ 2 ಲಕ್ಷ ಮೀರುತ್ತಿದೆ. ಇಲ್ಲಿನ ಜನ ಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ದೊರೆಯಬೇಕು. 2018-19ನೇ ಸಾಲಿನಲ್ಲಿ ₹8 ಕೋಟಿ ವಿಶೇಷ ಅನುದಾನ ಹೊರತು ಇದುವರೆಗೂ ಯಾವುದೇ ಅನುದಾನ ನೀಡಿಲ್ಲ. ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಜನಸಂಖ್ಯೆ ಆಧಾರದ ಮೇಲೆ ವಿಶೇಷ ಅನುದಾನ ನೀಡಬೇಕು. ಈ ನಿಯಮ ಇಲ್ಲಿಗೆ ಅನ್ವಯವೇ ಆಗುತ್ತಿಲ್ಲ.ವಿ.ಎಸ್.ರವಿಕುಮಾರ್‌ಅಧ್ಯಕ್ಷ ದೊಡ್ಡಬಳ್ಳಾಪುರ ನಗರಸಭೆ ಸ್ಥಾಯಿ ಸಮಿತಿ
ನೇಕಾರಿಕೆ ಬಿಕ್ಕಟ್ಟು; ಪರಿಹಾರ ನಿರೀಕ್ಷೆ
ದೊಡ್ಡಬಳ್ಳಾಪುರ ನಗರದ ಜನರ ಬದುಕಿನ ಜೀವನಾಡಿಯಾಗಿರುವ ನೇಕಾರಿಕೆ ಉದ್ಯಮ ಸೂರತ್ ಸೀರೆಯಿಂದ ಬಿಕ್ಕಟ್ಟಿಗೆ ಸಿಲುಕಿದೆ. ನೇಕಾರಿಕೆಯ ಉನ್ನತೀಕರಣಕ್ಕೆ ಆರ್ಥಿಕ ನೆರವು ಹಾಗೂ ಸೂರತ್ ಸೀರೆಗಳು ರಾಜ್ಯಕ್ಕೆ ಬರುವುದನ್ನು ತಡೆಯುವಂತೆ ನಿಯಮ ರೂಪಿಸಲು ನೇಕಾರ ಹೋರಾಟ ಸಮಿತಿಗಳು ಜವಳಿ ಸಚಿವರಿಂದ ಮುಖ್ಯಮಂತ್ರಿಗಳವರೆಗೂ ಮನವಿಗಳನ್ನು ಸಲ್ಲಿಸಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸುವಂತೆ ಇತ್ತೀಚೆಗಷ್ಟೇ ದೊಡ್ಡಬಳ್ಳಾಪುರ ಬಂದ್ ಮಾಡುವ ಮೂಲಕ ಸರ್ಕಾರದ ಗಮನವನ್ನು ಸೆಳೆಯಲಾಗಿದೆ. 2026-27ನೇ ಸಾಲಿನ ಬಜೆಟ್‌ನಲ್ಲಿ ನೇಕಾರರ ವಿವಿಧ ಬೇಡಿಕೆಗಳಿಗೆ ಆರ್ಥಿಕ ನೆರವು ಘೋಷಣೆಯಾಗಬಹುದು ಎನ್ನುವ ನಿರೀಕ್ಷೆ ನೇಕಾರರಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.