ದೊಡ್ಡಬಳ್ಳಾಪುರ: ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದ ರಾಗಿ ಸೇರಿದಂತೆ ವಿವಿದ ಬೆಳೆ ಬಿತ್ತನೆಗೆ ಹಿನ್ನೆಡೆಯಾಗಿತು. ಇತ್ತೀಚಿನ ದಿನಗಳಲ್ಲಿ ಬಿದ್ದ ಹದ ಮಳೆಯಿಂದ ರೈತರು ಹರ್ಷಗೊಂಡಿದ್ದರು. ಆದರೆ ಕಳೆದ ವಾರದಿಂದ ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆಯಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ. ಪೈರುಗಳು ತೋಟಗಳಲ್ಲಿ ಕೊಳೆಯಲಾರಂಭಿಸಿವೆ.
ತಾಲ್ಲೂಕಿನಲ್ಲಿ ಆಗಸ್ಟ್ ಮೊದಲ ವಾರದಿಂದ ಆರಂಭವಾಗಿರುವ ಮಳೆ ಜಿಲ್ಲೆಯಾದಾದ್ಯಂತ ವಾಡಿಕೆಗಿಂತಲೂ ಹೆಚ್ಚು ಸುರಿಯುತ್ತಿದೆ. ಆಗಸ್ಟ್ 1 ರಿಂದ 10 ರವರೆಗೆ ವಾಡಿಕೆ ಮಳೆ 33 ಮೀ.ಮೀ ಇತ್ತು. ಈಗ ಬಿದ್ದಿರುವುದು 100 ಮಿ.ಮೀ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಎಲ್ಲಾ ರೀತಿಯ ಬೆಳೆಗಳು ಸೇರಿ ಶೇ 88 ರಷ್ಟು ಬಿತ್ತನೆಯಾಗಿದೆ. ಆದರೆ ಉಳಿದ ಭಾಗದಲ್ಲಿ ಬಿತ್ತನೆ ಮಾಡಲು ಮಳೆ ಅಡ್ಡಿಯಾದರೆ, ವಾರದಿಂದ ಸುರಿದ ನಿರಂತರವಾಗಿ ಮಳೆಯಿಂದ ತೋಟಗಳಲ್ಲಿ ಬೆಳೆಯ ಪೈರು ಕೊಳೆಯುತ್ತಿದೆ.
ಜೂನ್ ತಿಂಗಳಲ್ಲಿ ವಾಡಿಕೆ ಮಳೆಗಿಂತಲೂ 38 ಮಿ.ಮೀ., ಜುಲೈನಲ್ಲಿ ವಾಡಿಕೆಗಿಂತ 32 ಮಿ.ಮೀ ಮಳೆ ಕಡಿಮೆಯಾಗಿತ್ತು. ಇದರಿಂದ ಮಳೆ ಆಶ್ರಿತ ಬೆಳೆಗಳಾದ ರಾಗಿ, ಮುಸುಕಿನಜೋಳ ಸೇರಿದಂತೆ ಎಲ್ಲಾ ಬೆಳೆಗಳ ಬಿತ್ತನೆ ವಿಳಂಬವಾಗಿತ್ತು. ಈಗ ಒಂದು ವಾರದಿಂದಲೂ ಬಿಳುತ್ತಲೇ ಇರುವ ಮಳೆಯಿಂದ ರಾಗಿ ಹೊಲದಲ್ಲಿ ಮಳೆ ನೀರು ತುಂಬಿಕೊಂಡಿದೆ. ಇನ್ನೂ ಬಿತ್ತನೆ ಮಾಡಬೇಕಿರುವ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿ ಬಿತ್ತನೆ ಮಾಡಲು ರೈತರು ಭೂಮಿಯ ಹದಕ್ಕಾಗಿ ಕಾದುಕುಳಿತ್ತಿದ್ದಾರೆ.
ಈ ಬಾರಿ ಇಡೀ ಜಿಲ್ಲೆಯಲ್ಲೇ ನೆಲಮಂಗಲ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಅಂದರೆ 14,852 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಹೊಸಕೋಟೆ ತಾಲ್ಲೂಕಿನಲ್ಲಿ ಜಿಲ್ಲೆಗೆ ಅತಿ ಕಡಿಮೆ ಅಂದರೆ 8,540 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಹೊಸಕೋಟೆ ತಾಲ್ಲೂಕಿನಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಮುಸುಕಿನಜೋಳ ಬಿತ್ತನೆಯೇ ಆಗಿಲ್ಲ. ಆದರೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂದರೆ 4,330 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನಜೋಳ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ನಂದಿಗಿರಿ ಶ್ರೇಣಿಯಲ್ಲಿನ ಚನ್ನರಾಯಸ್ವಾಮಿ ಬೆಟ್ಟದ ತಪ್ಪಲಿನ ಚಿಕ್ಕರಾಯಪನಹಳ್ಳಿ ಕೆರೆ ಮೂರು ದಿನಗಳಿಂದ ಸುರಿದ ಮಳೆಗೆ ಸೋಮವಾರ ಬೆಳಗ್ಗೆ ಕೋಡಿ ಬಿದ್ದಿದೆ. ಈ ಕೆರೆಯ ನೀರು ಮುಂದೆ ಸಾಗುತ್ತ ಅರ್ಕಾವತಿ ನದಿ ಪಾತ್ರದ ಕೆರೆಗಳನ್ನು ತುಂಬಿಸುತ್ತ ಸಾಗಲಿದೆ.
***
ತೋಟಗಳಿಗೆ ನುಗ್ಗಿದ ಮಳೆ ನೀರು
‘ಒಂದು ವಾರದಿಂದಲೂ ಬಿದ್ದ ಮಳೆಯಿಂದ ನಂದಿ ಗಿರಿ ಶ್ರೇಣಿಗಳ ತಪ್ಪಲಿನ ದೊಡ್ಡರಾಯಪ್ಪನಹಳ್ಳಿ ಚನ್ನಾಪುರ ಮೆಳೇಕೋಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಟೊಮೆಟೊ ಮೆಣಸಿನಕಾಯಿ ಸೇರಿದಂತೆ ತರಕಾರಿ ಬೆಳೆಗಳ ತೋಟಕ್ಕೆ ಮಳೆ ನೀರು ನುಗ್ಗಿದ್ದು ಸಸಿಗಳು ಕೊಳೆಯಲು ಪ್ರಾರಂಭವಾಗಿವೆ. ಕೈಗೆ ಬಂದ ಬೆಳೆ ಕಣ್ಣಮುಂದೆಯೇ ಹಾಳಾಗುತ್ತಿದೆ’ ಎಂದು ದೊಡ್ಡರಾಯಪ್ಪನಹಳ್ಳಿ ಗ್ರಾಮದ ರೈತ ಬಿ.ಸಿ.ನಾಗರಾಜ್ ಅಳಲು ತೋಡಿಕೊಂಡರು.
ಬಿತ್ತನೆಯಲ್ಲಿ ಏರುಪೇರು
‘ಜುಲೈ ತಿಂಗಳಲ್ಲಿ ಮಳೆ ಕೈಕೊಟ್ಟಿದ್ದರಿಂದ ಈ ಬಾರಿ ರಾಗಿ ಬಿತ್ತನೆ ತಡವಾಗಿದೆ. ಆದರೆ ಒಂದು ವಾರದಿಂದ ಪ್ರತಿ ದಿನವು ಮಳೆ ಬೀಳುತ್ತಲೇ ಇರುವುದರಿಂದ ಬಿತ್ತೆ ಮಾಡಲು ಭೂಮಿ ಹದವಾಗುತ್ತಿಲ್ಲ. ಬಿತ್ತನೆಯಾಗಿರುವ ಹೊಲದಲ್ಲಿ ರಾಗಿ ಪೈರುಗಳಲ್ಲಿ ಕಳೆ ತೆಗೆದು ಹದವಾಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಈ ಬಾರಿ ರಾಗಿ ಬಿತ್ತನೆಯಲ್ಲಿ ದೊಡ್ಡ ಏರುಪೇರಾಗಿದೆ’ ಎನ್ನುತ್ತಾರೆ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಗ್ರಾಮದ ರೈತ ಮುನಿರಾಜಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.