ದೊಡ್ಡಬಳ್ಳಾಪುರ: ಮೂರು ದಿನಗಳಿಂದ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಅದರಲ್ಲೂ ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರಾರಂಭವಾದ ಮಳೆ ಸಂಜೆವರೆಗೂ ಬೀಳುತ್ತಲೇ ಇತ್ತು. ಇದರಿಂದ ನಗರದ ತಗ್ಗು ಪ್ರದೇಶಗಳು ಸೇರಿದಂತೆ ಹಲವೆಡೆ ಚರಂಡಿ ನೀರು ರಸ್ತೆಗಳಿಗೆ ನುಗ್ಗಿದ್ದರಿಂದ ವಾಹನ ಸವಾರರು ಪರದಾಡುವಂತಾಗಿತ್ತು.
ಮಧುರೆ ಹೋಬಳಿಯಲ್ಲಿ ಕೆರೆ, ಕುಂಟೆಗಳಿಗೆ ನೀರು ಬಂದಿದ್ದರೆ, ತೂಬಗೆರೆ ಹೋಬಳಿಯ ನಂದಿ ಬೆಟ್ಟದ ಸಾಲಿನ ಚನ್ನರಾಯಸ್ವಾಮಿ ಬೆಟ್ಟದಲ್ಲಿ ಏಳುಎಮ್ಮೆ ದೊಣೆಯಲ್ಲಿ ನೀರಿನ ಜಲಪಾತ ದುಮ್ಮಿಕ್ಕಿ ಹರಿಯಲು ಆರಂಭವಾಗಿದೆ.
ಇದರಿಂದ ಬೆಟ್ಟದ ತಪ್ಪಲಿನ ಅರ್ಕಾವತಿ ನಗದಿ ಪಾತ್ರದ ಕೆರೆಗಳೀಗೆ ನೀರು ಹರಿದು ಬರಲು ಆರಂಭವಾಗಿದ್ದು, ಇದೇ ರೀತಿ ಒಂದೆರಡು ದಿನಗಳ ಕಾಲ ಜೋರು ಮಳೆಯಾದರೆ ಈ ಭಾಗದ ಚನ್ನಾಪುರ, ಹೆಗ್ಗಡಿಹಳ್ಳಿ,ಮೇಳೆಕೋಟೆ ಕೆರೆಗಳು ತುಂಬಲಿವೆ ಎನ್ನುತ್ತಾರೆ ದೊಡ್ಡರಾಯಪ್ಪನಹಳ್ಳಿ ಗ್ರಾಮದ ರೈತ ಚನ್ನೇಗೌಡ.
ಭಾನುವಾರ ಇಡೀ ದಿನ ಮಳೆ ಬಿದ್ದಿರಿಂದ ರೈತರು ಹೊಲಗಳಲ್ಲಿ ರಾಗಿ ಪೈರು ನಾಟು ಮಾಡುವುದು ಸೇರಿದಂತೆ ಇತರೆ ಕೆಲಸಗಳಿಗೂ ಅಡ್ಡಿಯಾಗಿತ್ತು. ಹೊಲ, ಕೆರೆ ಅಂಗಳದ ಕಡೆಗೆ ಹಸು, ಕುರಿ, ಮೇಕೆಗಳನ್ನು ಮೇಯಿಸಲು ಹೋದ ರೈತ ಮಹಿಳೆಯರು ಮಳೆಯಲ್ಲಿ ನೆನೆಯುತ್ತಲೇ ಮತ್ತೆ ಮನೆಗಳಿಗೆ ಬಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.