ದೊಡ್ಡಬಳ್ಳಾಪುರ: ಕರ್ನಾಟಕ ಜಾನಪದ ಪರಿಷತ್ತು, ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ವತಿಯಿಂದ ರಾಜ್ಯ ಮಟ್ಟದ ಗಾಳಿಪಟ ಉತ್ಸವ-2025 ಜುಲೈ 13 ರಂದು ಬೆಳಿಗ್ಗೆ 11 ಗಂಟೆಯಿಂದ ಇಲ್ಲಿನ ಭುವನೇಶ್ವರಿ ನಗರದ ಮುನಿನಂಜಪ್ಪನವರ ಜಮೀನಿನಲ್ಲಿ ನಡೆಯಲಿದೆ. ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿರುವ ಗಾಳಿಪಟ ಕಲಾವಿದರು ಗಾಳಿಪಟ ಕಲೆ ಪ್ರದರ್ಶಿಸಲಿದ್ದಾರೆ ಎಂದು ಗಾಳಿಪಟ ಕಲಾಸಂಘದ ಅಧ್ಯಕ್ಷ ಎಲ್.ಎನ್.ಶ್ರೀನಾಥ್ ಹೇಳಿದರು.
ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿ, ಅತ್ಯಂತ ಪ್ರಾಚೀನ ಹಾಗೂ ಜನಪ್ರಿಯ ಕಲೆಯಾದ ಗಾಳಿಪಟ ತಯಾರಿಸುವ ಹಾಗೂ ಹಾರಿಸುವ ಕಲೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ಗಾಳಿಪಟ ಕಲಾಸಂಘವು 18 ವರ್ಷಗಳಿಂದ ಗಾಳಿಪಟ ಉತ್ಸವ ಹಾಗೂ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿದೆ. ನಮ್ಮೊಂದಿಗೆ ಜನಪದ ತಜ್ಞರಾಗಿದ್ದ ಎಚ್.ಎಲ್ ನಾಗೇಗೌಡ ಅವರ ಆಸಕ್ತಿ ಮತ್ತು ಪರಿಶ್ರಮದಿಂದ ಸ್ಥಾಪನೆಯಾದ ಯುನೆಸ್ಕೋ ಮಾನ್ಯತೆ ಪಡೆದಿರುವ ಕರ್ನಾಟಕ ಜಾನಪದ ಪರಿಷತ್ ವತಿಯಿಂದ 35ನೇ ರಾಜ್ಯ ಮಟ್ಟದ ಗಾಳಿಪಟ ಉತ್ಸವ-2025 ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಉತ್ಸವದಲ್ಲಿ ಎಲ್ಲಾ ವಯೋಮಾನದವರಿಗೂ ಮುಕ್ತ ಆಹ್ವಾನವಿದೆ ಎಂದರು.
ಗಾಳಿಪಟ ಕಲಾಸಂಘದ ಕಾರ್ಯದರ್ಶಿ ಎ.ಎನ್.ಪ್ರಕಾಶ್ ಮಾತನಾಡಿ,ಜುಲೈ 13ರಂದು ಗಾಳಿಪಟ ಉತ್ಸವದ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಉದ್ಘಾಟಿಸಲಾಗುತ್ತಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಮಕ್ಕಳಿಗಾಗಿ ಉಚಿತ ಗಾಳಿಪಟ ತಯಾರಿಕೆ ತರಬೇತಿ ನೀಡಲಾಗುತ್ತಿದೆ. ಕಾರ್ಯಕ್ರಮವನ್ನು ಶಾಸಕ ಧೀರಜ್ ಮುನಿರಾಜು ಉದ್ಘಾಟಿಸಲಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ನಗರಸಭೆ ಅಧ್ಯಕ್ಷೆ ಸುಮಿತ್ರ ಆನಂದ್ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಗುವುದು. ಸಂಜೆ 6.30ಕ್ಕೆ ಎಲ್.ಇ.ಡಿ ಗಾಳಿಪಟಗಳ ಪ್ರದರ್ಶನ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಗಾಳಿಪಟ ಕಲಾ ಸಂಘದ ಉಪಾಧ್ಯಕ್ಷ ಎಸ್.ಮುನಿರಾಜು, ಖಜಾಂಚಿ ವಿಶ್ವನಾಥ್, ಸಹ ಕಾರ್ಯದರ್ಶಿ ಜೆ.ವಿ.ಸುಬ್ರಹ್ಮಣ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.