
ಆನೇಕಲ್: ಪಟ್ಟಣದಲ್ಲಿ ಕಾರ್ತಿಕ ದೀಪೋತ್ಸವ ಬುಧವಾರ ವೈಭವದಿಂದ ನಡೆಯಿತು. ಸಂಜೆಯ ದೀಪದ ಬೆಳಕಿನಲ್ಲಿ ನೂರಾರು ಮಹಿಳೆಯರು ಮಣ್ಣಿನ ಹಣತೆ ಹಚ್ಚುವ ಮೂಲಕ ಭಕ್ತಿ ಸಮರ್ಪಿಸಿದರು. ದೇವಾಲಯದಲ್ಲಿ ವಿಶೇಷ ಅಲಂಕಾರದ ಮೂಲಕ ಲಕ್ಷ ದೀಪೋತ್ಸವ ನಡೆಸಲಾಯಿತು.
ಪಟ್ಟಣದ ಕಂಬದ ಗಣಪತಿ ದೇವಾಲಯ, ಭ್ರಮರಾಂಭ ಸಮೇತ ಅಮೃತ ಮಲ್ಲಿಕಾರ್ಜುನ ಸ್ವಾಮಿ, ತಿಮ್ಮರಾಯಸ್ವಾಮಿ, ಚನ್ನಕೇಶವ, ಸ್ಕಂದ ಗಣಪತಿ, ಥಳೀ ರಸ್ತೆಯ ಬಸವೇಶ್ವರ ದೇವಾಲಯ, ದೊಡ್ಡಕೆರೆ ಬಾಗಿಲು ಬ್ರಾಹ್ಮಣರ ಬೀದಿಯ ಪಟ್ಟಾಭಿರಾಮ ದೇವಾಲಯ, ಸೋಮೇಶ್ವರ ಸ್ವಾಮಿ, ರಾಜರಾಜೇಶ್ವರಿ ದೇವಾಲಯ, ಮಹದೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ ಏರ್ಪಡಿಸಲಾಗಿತ್ತು. ದೇವಾಲಯಗಳ ಬಳಿ ಜನರು ದೀಪ ಹತ್ತಿಸಿ ಲಕ್ಷ ದೀಪೋತ್ಸವದಲ್ಲಿ ಭಾಗಿಯಾದರು. ದೇವಾಲಯಗಳ ಬಳಿ ಭಕ್ತರ ದಂಡು ನೆರೆದಿತ್ತು.
ಪಟ್ಟಣದ ತಿಮ್ಮರಾಯಸ್ವಾಮಿ ದೇವಾಲಯದ ಬೃಹತ್ ಪ್ರಾಂಗಣದಲ್ಲಿ ಲಕ್ಷ ದೀಪೋತ್ಸವದ ಪ್ರಯುಕ್ತ ದೀಪೋತ್ಸವ ದೀಪಗಳನ್ನು ಹಚ್ಚಲಾಗಿತ್ತು. ದೇವಾಲಯದ ಸುತ್ತ ದೀಪಗಳ ಅಲಂಕಾರ ಕಣ್ಮನ ಸೆಳೆಯಿತು. ದೀಪೋತ್ಸವದ ಪ್ರಯುಕ್ತ ತಿಮ್ಮರಾಯಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಪಟ್ಟಣದ ಕಂಬದ ಗಣಪತಿ ಸ್ವಾಮಿ ದೇವಾಲಯದಲ್ಲಿ ಲಕ್ಷ ದೀಪೋತ್ಸವದ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯ ಆವರಣದಲ್ಲಿರುವ ಅಮೃತ ಮಲ್ಲಿಕಾರ್ಜುನ ದೇವಾಲಯದ ಸುತ್ತಲೂ ಆಕರ್ಷಕ ದೀಪಗಳನ್ನು ಹತ್ತಿಸಲಾಗಿತ್ತು. ಚನ್ನಕೇಶವ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಮಾಡಲಾಗಿತ್ತು. ದೊಡ್ಡಕೆರೆ ಬಾಗಿಲು ಬ್ರಾಹ್ಮಣರ ಬೀದಿಯ ಪಟ್ಟಾಭಿರಾಮ ಸ್ವಾಮಿ ದೇವಾಲಯದಲ್ಲಿ 30ನೇ ವರ್ಷದ ಕಾರ್ತಿಕ ದೀಪೋತ್ಸವ ಆಯೋಜಿಸಲಾಗಿತ್ತು. ಸುತ್ತಮುತ್ತಲ ವಾರ್ಡ್‌ಗಳ ಭಕ್ತರು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು. ಮಹಿಳೆಯರು ಸೇರಿದಂತೆ ನೂರಾರು ಮಂದಿ ಭಕ್ತರು ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು. ವಿವಿಧ ದೇವಾಲಯಗಳಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಲಕ್ಷ ದೀಪೋತ್ಸವದ ಪ್ರಯುಕ್ತ ದೇವಾಲಯಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು.
ಪ್ರತ್ಯಂಗೀರಾ ಹೋಮ: ಪಟ್ಟಣದ ಗಂಗಾಪರಮೇಶ್ವರಿ ದೇವಾಲಯದಲ್ಲಿ ಕಾರ್ತಿಕ ಅಮಾವಾಸ್ಯೆ ಪ್ರಯುಕ್ತ ನಾರಾಯಣೇ ಪ್ರತ್ಯಂಗೀರಾ ಹೋಮ ಆಯೋಜಿಸಲಾಗಿತ್ತು. ಪಟ್ಟಣದ ವಿವಿಧೆಡೆಯಿಂದ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.