
ದೊಡ್ಡಬಳ್ಳಾಪುರ: ಕಡಿಮೆ ಉಷ್ಣಾಂಶ, ಶೀತ ವಾತಾವರಣದಲ್ಲಿ ಮಾತ್ರ ಬೆಳೆಯುವ ಕಾಶ್ಮೀರಿ ಕೇಸರಿಯನ್ನು ದೊಡ್ಡಬಳ್ಳಾಪುರದಐಟಿ ಉದ್ಯೋಗಿ ಪವನ್ ಅವರು ಬಯಲು ಸೀಮೆಯಲ್ಲಿ ಬೆಳೆದು ಯಶಸ್ವಿಯಾಗಿದ್ದಾರೆ.
ಮಾರುತಿ ನಗರದ ಪವನ್ ವರ್ಷದ ಹಿಂದೆ ಕಾಶ್ಮೀರದ ಪುಲ್ವಾಮಾದ ತನ್ನ ಸ್ನೇಹಿತರ ಮೂಲಕ 50 ಕೆ.ಜಿ ಕೇಸರಿ ಹೂವಿನ ಗೆಡ್ಡೆಗಳನ್ನು ತರಿಸಿಕೊಂಡಿದ್ದರು. ಅವುಗಳನ್ನು ಬೆಳೆಸುವ ಮಾಹಿತಿ ಪಡೆದುಕೊಂಡು ಮನೆಯಲ್ಲೇ ಕೃತಕ ವಾತಾವರಣ ಕಲ್ಪಿಸಿ ಕೇಸರಿ ಹೂವು ಬೆಳೆದು ಕೊಯ್ಲು ಮಾಡಿದ್ದಾರೆ.
ಮನೆಯಲ್ಲಿನ ಹತ್ತು ಅಡಿ ಉದ್ದ ಹಾಗೂ ಹತ್ತು ಅಡಿ ಅಗಲ ಇರುವ ಕೊಠಡಿಯಲ್ಲಿ ರ್‍ಯಾಕ್ ನಿರ್ಮಿಸಿ, ಟ್ರೇಗಳಲ್ಲಿ ಗೆಡ್ಡೆಗಳನ್ನು ಇರಿಸಿ ಕೃತಕ ವಾತಾವರಣದಲ್ಲಿ ಕೃಷಿಯಲ್ಲಿ ತೊಡಗಿದರು.
ಹಗಲಿನಲ್ಲಿ 16 ಡಿಗ್ರಿ, ರಾತ್ರಿ 10 ಡಿಗ್ರಿ ಸೆಲ್ಸಿಯಸ್ ತಣ್ಣನೆಯ ವಾತಾವರಣ ಸೃಷ್ಟಿಸಲು ಎ.ಸಿ ಅಳವಡಿಸಿದರು. ಬೆಳಕಿಗಾಗಿ ಅಷ್ಟಾಗಿ ಬಿಸಿಯಾಗದ ಎಲ್‌ಇಡಿ ಟ್ಯೂಬ್ ಲೈಟ್ ಅಳವಡಿಸಿದರು.
ಜುಲೈನಲ್ಲಿ ಹೂವಿನ ಗೆಡ್ಡೆ ತರಿಸಿಕೊಂಡು ಟ್ರೇಗಳಲ್ಲಿ ಮಣ್ಣಿನಲ್ಲಿ ಶೇಖರಿಸಿ ಇಡಲಾಗಿತ್ತು. ಗೆಡ್ಡೆಗಳು ಮೊಳಕೆಯಾದ ನಂತರ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಮಣ್ಣಿನಿಂದ ಹೊರ ತೆಗೆದು ಕೊಠಡಿಯಲ್ಲಿನ ರ‍್ಯಾಕ್ ಮೇಲೆ ಪ್ಲಾಸ್ಟಿಕ್ ಹಾಳೆ ಹಾಸಿ ಅವುಗಳ ಮೇಲೆ ಗೆಡ್ಡೆ ಜೋಡಿಸಿದ ಬಳಿಕ ಮೊಳಕೆ ಹೂವಾಗಿ ಅರಳಿವೆ.
ಅಕ್ಟೋಬರ್ ಕೊನೆಯ ವಾರದಲ್ಲಿ ಗೆಡ್ಡೆಯಲ್ಲಿನ ಹುಲ್ಲಿನಂತಹ ಪೈರಿನಿಂದ ಹೂವಿನ ಮೊಗ್ಗು ಕಾಣಿಸಲಾರಂಭಿಸಿದವು. ಈಗ ಒಂದು ವಾರದಿಂದ ಇಲ್ಲಿಯವರೆಗೆ 50 ಗ್ರಾಂ ಕೇಸರಿ ಕೊಯ್ಲು ಮಾಡಲಾಗಿದೆ.
ಹೂವಿನ ಮಧ್ಯ ಭಾಗದ ಕೇಸರಿ ಬಣ್ಣದ ಸಣ್ಣ ಸಲಾಖೆಗಳನ್ನು (ಕಡ್ಡಿಗಳನ್ನು) ಬೇರ್ಪಡಿಸಿ ಮೂರು ಬಗೆಯಲ್ಲಿ ವಿಗಂಡಿಸಲಾಗುತ್ತದೆ. ಹೂವಿನ ಎಸಳುಗಳನ್ನು ಸುಂಗದ ದ್ರವ್ಯ, ಪೌಡರ್ ತಯಾರಿಕೆಗೆ, ಹೂವಿನ ಮದ್ಯಭಾಗದ ಹಳದಿ ಬಣ್ಣದ ಮಕರಂದ ಸಣ್ಣ ಕಡ್ಡಿಗಳನ್ನು ಸುವಾಸನೆಗೆ, ಕೇಸರಿ ಬಣ್ಣದ ಸಣ್ಣ ಕಡ್ಡಿಗಳನ್ನು ಬಣ್ಣಕ್ಕಾಗಿ ಅಡುಗೆ, ಇತರ ತಿನಿಸು ಹಾಗೂ ಆಯುರ್ವೇದ ಔಷಧಿಯಲ್ಲಿ ಬಳಸಲಾಗುತ್ತದೆ ಎಂದು ಪವನ್ ತಿಳಿಸಿದರು.
‘ಕೇಸರಿಯನ್ನು ಸದ್ಯ ಮಾರಾಟ ಮಾಡದೆ ಸ್ನೇಹಿತರಿಗೆ ಬಳಸಲು ನೀಡಿ ಅವರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಗೆಡ್ಡೆಗಳನ್ನು ಫ್ರಿಜ್‌ನಲ್ಲಿ ಇಟ್ಟು ಕೇಸರಿ ಹೂವು ಬೆಳೆಸಬಹುದು ಎನ್ನುವುದು ಸುಳ್ಳು. ಅದಕ್ಕೆ ಕನಿಷ್ಠ ವಿಶಾಲ ಜಾಗ ಅಗತ್ಯವಿದ್ದು, ಕನಿಷ್ಠ ಉಷ್ಣಾಂಶದ ಅಗತ್ಯ ಇಲ್ಲ. ಕಾಶ್ಮೀರದಲ್ಲಿ ಕೇಸರಿ ಹೂವುಗಳನ್ನು ಬೆಳೆಯುವ ಪಾಂಪೋರ್ ಎನ್ನುವ ಪ್ರದೇಶದಲ್ಲಿ ಇರುವ 16 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವನ್ನು ಕೊಠಡಿಯಲ್ಲಿ ಕಾಪಾಡಿಕೊಂಡಿದ್ದೇನೆ’ ಎಂದು ತಿಳಿಸಿದರು.
ಹೊಸದಾಗಿ ಏನಾದರು ಪ್ರಯೋಗ ಮಾಡಬೇಕೆನ್ನುವ ನನ್ನ ಆಸೆ ಈಡೇರಿದೆ. ಕೆಸರಿ ಅದೇ ರುಚಿ ಇದೆಯೇ ಎಂದು ಪರೀಕ್ಷಿಸಲು ಸ್ನೇಹಿತರಿಗೆ ಕಳುಹಿಸಲಾಗಿದೆ. ಸ್ನೇಹಿತರ ಪ್ರತಿಕ್ರಿಯೆ ಬಳಿಕ ಮಾರುಕಟ್ಟೆಗೆ ಒಯ್ಯಲಾಗುವುದು.– ಪವನ್, ಐಟಿ ಉದ್ಯೋಗಿ
ಕೇಸರಿ ಬೆಳೆಯಲು ಮಾರ್ಗದರ್ಶನ
ಡಿಸೆಂಬರ್ ಅಂತ್ಯದ ವೇಳೆಗೆ ಹೂವು ಬಿಟ್ಟ ನಂತರ ಗೆಡ್ಡೆಗಳು ನೀಲಿ ಬಣ್ಣಕ್ಕೆ ತಿರುಗುತ್ತವೆ. ಆಗ ಗೆಡ್ಡೆಗಳನ್ನು ಸಂಗ್ರಹಿಸಿ ಮತ್ತೆ ಟ್ರೇಗಳಲ್ಲಿನ ಮಣ್ಣಿನಲ್ಲಿ ಹುದುಗಿಸಿಟ್ಟು ಮಣ್ಣಿನ ಮೇಲೆ ಕನಿಷ್ಠ ಪ್ರಮಾಣದಲ್ಲಿ ನೀರು ಸಿಂಪರಣೆ ಮಾಡಿದರೆ ಸಾಕು. ಒಂದು ಗೆಡ್ಡೆಯಿಂದ ಕನಿಷ್ಠ ಮೂರು ಗೆಡ್ಡೆಗಳು ಬೆಳೆಯುತ್ತವೆ. ಗೆಡ್ಡೆಗಳನ್ನು ಮತ್ತೆ ಆಗಸ್ಟ್ ವೇಳೆಗೆ ಹೊರತೆಗೆದು ಹೂವು ಬೆಳೆಸಲು ಆರಂಭಿಸಬೇಕು. ಈ ಬಗ್ಗೆ ಆಸಕ್ತರು ಬಂದರೆ ಅಗತ್ಯ ಮಾಹಿತಿ ನೀಡುತ್ತೇನೆ ಎಂದು ಪವನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.