ADVERTISEMENT

ದೇವನಹಳ್ಳಿ: ಕೆಟ್ಟು ನಿಂತಿದ್ದ ವಿಮಾನಕ್ಕೆ ಟೆಂಪೊ ಟ್ರಾವೆಲರ್‌ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2025, 13:14 IST
Last Updated 20 ಏಪ್ರಿಲ್ 2025, 13:14 IST
ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಇಂಡಿಗೋ ವಿಮಾನಕ್ಕೆ ಟೆಂಪೊ ಟ್ರಾವೆಲರ್‌ ಡಿಕ್ಕಿ ಹೊಡೆದಿದೆ
ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಇಂಡಿಗೋ ವಿಮಾನಕ್ಕೆ ಟೆಂಪೊ ಟ್ರಾವೆಲರ್‌ ಡಿಕ್ಕಿ ಹೊಡೆದಿದೆ   

ದೇವನಹಳ್ಳಿ (ಬೆಂ.ಗ್ರಾಮಾಂತರ): ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಟ್ಟು ನಿಂತಿದ್ದ ಇಂಡಿಗೊ ವಿಮಾನಕ್ಕೆ ಶನಿವಾರ ರಾತ್ರಿ ಪ್ರಯಾಣಿಕರ ವಾಹನ (ಟೆಂಪೊ ಟ್ರಾವೆಲರ್‌) ಡಿಕ್ಕಿ ಹೊಡೆದಿದೆ. ಇದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ವಿಮಾನ ನಿಲ್ದಾಣದ ರನ್ ವೇಯಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು (ಗ್ರೌಂಡ್‌ ಸ್ಟಾಫ್‌) ಪಿಕ್‌ ಅಪ್ ಮತ್ತು ಡ್ರಾಪ್ ಮಾಡುವ ಖಾಸಗಿ ಕಂಪನಿಯೊಂದಕ್ಕೆ ಸೇರಿದ ವಾಹನವು ವಿಮಾನಕ್ಕೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದೆ.

ಇಂಡಿಗೊ ವಿಮಾನಯಾನ ಸಂಸ್ಥೆಗೆ ಸೇರಿದ ಈ ವಿಮಾನ (0320) ತಾಂತ್ರಿಕ ದೋಷದಿಂದಾಗಿ ಮೂರು ತಿಂಗಳಿಂದ ವಿಮಾನ ನಿಲ್ದಾಣದ ನಿಲುಗಡೆ ಸ್ಥಳದಲ್ಲಿ ನಿಂತಲ್ಲೇ ನಿಂತಿದೆ.

ADVERTISEMENT

ಇಂಡಿಗೊ ವಿಮಾನದ ಮುಂಭಾಗದ ಅಡಿಯಲ್ಲಿ ಹಾಯ್ದು ಹೋಗುವಾಗ ವಾಹನದ ಛಾವಣಿ ವಿಮಾನದ ಚೂಪಾದ ಮೂತಿಗೆ ತಾಕಿದೆ. ವಾಹನ ಚಾಲಕ ನಿದ್ರೆ ಮಂಪರಿನಲ್ಲಿದ್ದ ಕಾರಣ ಆತನಿಗೆ ಅರಿವಿಗೆ ಬಾರದೆ ಆಕಸ್ಮಿಕವಾಗಿ ಈ ಘಟನೆ ಸಂಭವಿಸಿದೆ. ಈ ವೇಳೆ ವಿಮಾನ ಮತ್ತು ವಾಹನದಲ್ಲಿ ಪ್ರಯಾಣಿಕರು ಇರಲಿಲ್ಲ ಎಂದು ತಿಳಿದು ಬಂದಿದೆ.

‘ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ. ಅಪಘಾತವಾದ ತಕ್ಷಣ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಮಾನಗಳ ಕಾರ್ಯಾಚರಣೆ ಹಾಗೂ ಪ್ರಯಾಣಿಕರ ಸುರಕ್ಷಿತೆಗೆ ಯಾವುದೇ ಧಕ್ಕೆ ಆಗಿಲ್ಲ’ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

‘ಯಾವ ಕಾರಣಕ್ಕೆ ವಾಹನ ವಿಮಾನಕ್ಕೆ ಡಿಕ್ಕಿ ಹೊಡೆದಿದೆ ಎಂದು ಸದ್ಯಕ್ಕೆ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ’ ಎಂದು ಇಂಡಿಗೊ ವಿಮಾನಯಾನ ಸಂಸ್ಥೆಯ ಪ್ರಕಟಣೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.