
ದೇವನಹಳ್ಳಿ: ಕೈಗಾರಿಕಾ ವಲಯ ಸ್ಥಾಪನೆಗೆ ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಭೂಸ್ವಾಧೀನ ಕೈಬಿಡುವುದಾಗಿ ಸರ್ಕಾರ ಘೋಷಿಸಿದ ನಂತರ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಈಗ ದೇವನಹಳ್ಳಿ ಬಳಿ ಟೌನ್‌ಶಿಪ್ ಸ್ಥಾಪಿಸಲು 590 ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ. ಇದರಿಂದ ಮತ್ತೆ ಭೂಸ್ವಾಧೀನ ಆತಂಕ ರೈತರನ್ನು ಕಾಡುತ್ತಿದೆ.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದಲ್ಲಿರುವ ಜಿಲ್ಲಾಡಳಿತ ಭವನದ ಸುತ್ತಮುತ್ತ ಹಾಗೂ ಅರ್ಕಾವತಿ ನದಿ ಪಾತ್ರಕ್ಕೆ ಒಳಪಡುವ ಕೃಷಿ ಭೂಮಿಯಲ್ಲಿ ಕೆಎಚ್‌ಬಿ ಹೊಸ ಟೌನ್‌ಶಿಪ್ ಯೋಜನೆ ಘೋಷಿಸಿದ್ದು, ಜ.9ರಂದು ಅಂತಿಮ ಅಧಿಸೂಚನೆ ಹೊರಡಿಸಿದೆ.
ಮೂರು ತಿಂಗಳ ಹಿಂದೆ 700 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಾಣಕ್ಕೆ ಕೆಎಚ್‌ಬಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶ ಹಾಗೂ ದೇವನಹಳ್ಳಿ ಐಟಿಐಆರ್ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ 590 ಎಕರೆ ವಿಸ್ತೀರ್ಣದ ಬೃಹತ್ ವಸತಿ ಯೋಜನೆಗೆ ಅಂತಿಮ ಅಧಿಸೂಚನೆ ಹೊರಡಿಸಿದೆ.
ಈ ವಸತಿ ಯೋಜನೆಗೆ ಶ್ಯಾನಪ್ಪನಹಳ್ಳಿ, ವಾಜರಹಳ್ಳಿ, ಬೀರಸಂದ್ರ ಹಾಗೂ ವಿಶ್ವನಾಥಪುರ ಗ್ರಾಮಗಳ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು. ಫಾಕ್ಸ್‌ಕಾನ್ ಫ್ಯಾಕ್ಟರಿ, ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶ ಹಾಗೂ ಐಟಿಐಆರ್ ಕೈಗಾರಿಕಾ ಪ್ರದೇಶದ ಹತ್ತಿರದ ಪ್ರದೇಶ ‘ಕೆಎಚ್‌ಬಿ ಟೌನ್‌ಶಿಪ್ ವಸತಿ ಬಡಾವಣೆ’ ಎಂಬ ಹೊಸ ಹೆಸರಿನೊಂದಿಗೆ ಗುರುತಿಸಿಕೊಳ್ಳಲಿದೆ.
ಈ ಭಾಗದ ಸುತ್ತಮುತ್ತ ಉಪನಗರ ವರ್ತುಲ ರಸ್ತೆ ಯೋಜನೆ(ಎಸ್‌ಟಿಆರ್‌ಆರ್), ರಾಷ್ಟ್ರೀಯ ಹೆದ್ದಾರಿ ಹಾಗೂ ಬೃಹತ್ ಕೈಗಾರಿಕೆಗಳು ಆರಂಭವಾಗಿರುವ ಕಾರಣ ಇಲ್ಲಿನ ಭೂಮಿಗೆ ಭಾರಿ ಬೇಡಿಕೆ ಕುದುರಿತ್ತು. ಹೊಸ ಟೌನ್‌ಶಿಪ್ ತಲೆ ಎತ್ತಲಿದೆ ಎಂದಾದರೆ ರಿಯಲ್ ಎಸ್ಟೇಟ್ ವಹಿವಾಟು ಮೇರೆ ಮೀರಲಿದೆ. ಈಗಾಗಲೇ ಭೂ ಮಾಫಿಯಾ ಇಲ್ಲಿಯ ರೈತರ ಭೂಮಿ ಖರೀದಿಸಲು ಹಲವು ರೀತಿಯ ತಂತ್ರ ಬಳಸಿ ಲ್ಯಾಂಡ್ ಬ್ಯಾಂಕಿಂಗ್‌ನಲ್ಲಿ ತೊಡಗಿವೆ ಎಂದು ಸ್ಥಳೀಯ ರೈತ ಮುಖಂಡರು ಆತಂಕ ವ್ಯಕ್ತಪಡಿಸುತ್ತಾರೆ.
ತಕರಾರು ಸಲ್ಲಿಸಲು 60 ದಿನ ಅವಕಾಶ: ಯೋಜನೆಗೆ ಸಂಬಂಧಿಸಿದ ಯಾವುದೇ ತಕರಾರು ಇದ್ದರೆ ಅಗತ್ಯ ದಾಖಲೆಗಳೊಂದಿಗೆ ಕರ್ನಾಟಕ ಗೃಹ ಮಂಡಳಿ ಕಚೇರಿಗೆ 60 ದಿನದೊಳಗೆ ಸಲ್ಲಿಸಬೇಕು ಎಂದು ರಾಜ್ಯಪತ್ರದಲ್ಲಿ ತಿಳಿಸಲಾಗಿದೆ. ನಿಗದಿತ ಅವಧಿ ಮುಗಿದ ಬಳಿಕ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಗೃಹ ಮಂಡಳಿ ಸ್ಪಷ್ಟಪಡಿಸಿದೆ.
ಹಣ ಬೇಡವೆಂದರೆ ಶೇ.50ರಷ್ಟು ನಿವೇಶನ
ಕೆಎಚ್‌ಬಿ ಭೂಮಿ ಸ್ವಾಧೀನಪಡಿಸಿಕೊಂಡ ನಂತರ ಪರಿಹಾರದ ಹಣ ಬೇಡವೆಂದ ರೈತರಿಗೆ ಅವರಿಂದ ಪಡೆದ ಭೂಮಿಯ ವಿಸ್ತೀರ್ಣದ ಶೇ 50ರಷ್ಟು ನಿವೇಶನ ಹಿಂತಿರುಗಿಸುವುದಾಗಿ ಹೇಳಿದೆ. ಆದರೆ ಕೆಲವು ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ‘ನಾವು ನಮ್ಮ ಹೊಲದಲ್ಲಿಯೇ ಬದುಕು ಕಟ್ಟಿಕೊಂಡಿದ್ದೇವೆ. ಸರ್ಕಾರದ ಯೋಜನೆಗೆ ಭೂಮಿ ಕೊಡಲಾರೆವು. ನಮ್ಮ ಪೂರ್ವಿಕರು ಕೊಟ್ಟ ಭೂಮಿ ನಮಗೇ ಉಳಿಯಬೇಕು’ ಎಂದು ಪಟ್ಟು ಹಿಡಿದಿದ್ದಾರೆ.
ರೈತರಿಗೆ ಮತ್ತೊಂದು ಗುಮ್ಮ
ಕೈಗಾರಿಕಾ ಉದ್ದೇಶಕ್ಕೆ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ 1777 ಎಕರೆ ಭೂ ಸ್ವಾಧೀನಕ್ಕೆ ಕೆಐಎಡಿಬಿ ಅಭಿಸೂಚನೆ ಹೊರಡಿಸಿತ್ತು. ಇದರ ವಿರುದ್ಧ ರೈತರು ಹಾಗೂ ಹೋರಾಟಗಾರರು ಮೂರು ವರ್ಷಗಳ ನಿರಂತರ ಹೋರಾಟದ ಫಲವಾಗಿ ಸರ್ಕಾರ ನಿರ್ಧಾರ ಕೈಬಿಟ್ಟಿತು. ಈಗ ಕರ್ನಾಟಕ ಗೃಹ ಮಂಡಳಿ ಟೌನ್‌ಶಿಪ್ ಘೋಷಣೆ ಗುಮ್ಮ ರೈತರನ್ನು ಮತ್ತೆ ಕಾಡುತ್ತಿದೆ.
ಪಟ್ಟಿ ಕೆಎಚ್‌ಬಿ ಟೌನ್‌ಶಿಪ್ ಭೂಸ್ವಾಧೀನ ವಿವರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.