
ಹೊಸಕೋಟೆ: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಿಕ್ಸಡ್ ಮಾರ್ಷಲ್ ಆರ್ಟ್ ಸ್ಪರ್ಧೆಗಳಲ್ಲಿ ಗ್ರಾಮೀಣ ಪ್ರತಿಭೆ ಕಿಶೋರ್ ಛಾಫು ಮೂಡಿಸುತ್ತಿದ್ದಾರೆ.
ತಾಲ್ಲೂಕಿನ ಸೂಲಿಬೆಲೆ ಹೋಬಳಿಯ ಬೇಗೂರು ಗ್ರಾಮದ ಕುಮಾರ್ ಅವರ ಪುತ್ರ ಕಿಶೋರ್ ಹತ್ತು ವರ್ಷದಿಂದ ಸಮರ ಕಲೆಗಳಾದ ಕರಾಟೆ, ಕುಂಗ್ ಫೂ, ಬಾಕ್ಸಿಂಗ್ ಸೇರಿದಂತೆ ಎಲ್ಲ ಮಾದರಿ ಕುಸ್ತಿಗಳಲ್ಲಿ ಸ್ಪರ್ಧಿಸಿ ಪದಕ ಜಯಸಿದ್ದಾರೆ. ಜನವರಿಯಲ್ಲಿ ಅಮೆರಿಕದಲ್ಲಿ ನಡೆಯಲಿರುವ ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್ ಶಿಪ್‌ಗೆ ಆಯ್ಕೆಯಾಗಿದ್ದಾರೆ.
ಬೇಗೂರು ಸಮೀಪದ ಟ್ವೆಕಾಂಡೋ ಶಾಲೆಯಲ್ಲಿ ತರಬೇತಿಗೆ ಸೇರಿದ ಬಳಿಕ ಮಿಕ್ಸಡ್ ಮಾರ್ಷಲ್ ಆರ್ಟ್(ಕರಾಟೆ, ಕುಂಗ್ ಫೂ, ಬಾಕ್ಸಿಂಗ್)ನಲ್ಲಿ ಆಸಕ್ತಿ ಮೂಡಿತು. ಇದಕ್ಕೆ ದಾನಿಗಳು ಪ್ರೋತ್ಸಾಹ ನೀಡಿದರು. ಇದರ ಫಲವಾಗಿ ರಷ್ಯಾದಲ್ಲಿ ತರಬೇತಿ ಪಡೆದುಕೊಂಡು ಮಿಕ್ಸಡ್ ಮಾರ್ಷಲ್ ಆರ್ಟ್(ಎಂಎಂಎ) ಪಟುವಾಗಿ ಹೊರಹೊಮ್ಮಿದ್ದಾರೆ.
ಬಡತನದ ನಡುವೆಯೂ ಸ್ವ ಸಾಮರ್ಥ್ಯದಿಂದ ಗಮನ ಸೆಳೆದಿರುವ ಕಿಶೋರ್ ಸದ್ಯ ಇಂದಿರಾ ನಗರದ ಕ್ರೈಸ್ಟ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ಓದುತ್ತಿದ್ದಾರೆ.
ಅರುಣಾಚಲ ಪ್ರದೇಶ, ಕಜಕಿಸ್ತಾನ, ಜರ್ಮನಿ, ರಷ್ಯಾ, ನೇಪಾಳ ಸೇರಿದಂತೆ ವಿವಿಧೆಡೆ 13 ಅಮೇಚೂರ್ ಪಂದ್ಯದಲ್ಲಿ ಭಾಗವಹಿಸಿ ಹಲವು ಪದಕ ಜಯಗಳಿಸಿದ್ದಾರೆ. ಇದರಲ್ಲಿ ರಷ್ಯಾದ ಎಂಎಂಎ ಪಟು ವಿರುದ್ಧ ನಾಲ್ಕು ಬಾರಿ, ಪಾಕಿಸ್ತಾನದ ಎಂಎಂಎ ಪಟು ವಿರುದ್ಧ ಎರಡು ಬಾರಿ, ನೇಪಾಳದ ಎಂಎಂಎ ಪಟು ವಿರುದ್ಧ ಎರಡು ಬಾರಿ ಗೆಲುವು ಸಾಧಿಸಿದ್ದಾರೆ.
ಕಜಕಿಸ್ತಾನ್‌ನಲ್ಲಿ ನಡೆದ ಏಷ್ಯನ್ ವಲಯದ ಆರ್ಟ್ಸ್ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ ಮಿಕ್ಸಡ್ ಮಾರ್ಷಲ್ ಆರ್ಟ್ಸ್‌ನ 52 ಕೆಜಿ ವಿಭಾಗದಲ್ಲಿ ಚಿನ್ನದ ಪದಕ, ನೆದರ್ಲೆಂಡ್ಸ್‌ನಲ್ಲಿ ನಡೆದ ಗ್ಲೋಬಲ್ ಅಸೋಸಿಯೇಷನ್ ಆಯೋಜಿಸಿದ್ದ 52 ಕೆಜಿ ತೂಕದ ಎಂಎಂಎ ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
ಅಂತರರಾಷ್ಟ್ರೀಯ ಮಟ್ಟದ ಮಿಕ್ಸಡ್ ಮಾರ್ಷಲ್ ಆರ್ಟ್ ಸಾಧನೆಗಾಗಿ 2021ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ₹25 ಲಕ್ಷ ಪ್ರೋತ್ಸಾಹ ಧನ ನೀಡಿದ್ದರು.
ಡಿ.5 ರಂದು ಕೊರಮಂಗಲದಲ್ಲಿ ರಷ್ಯಾ ಸಹಭಾಗಿತ್ವದಲ್ಲಿ ನಡೆದ 58 ಕೆ.ಜಿ ಮಿಕ್ಸಡ್ ಮಾರ್ಷಲ್ ಆರ್ಟ್ ವಿಭಾಗದಲ್ಲಿ ಅಂಟೋನಿ ಪಿಟೀಸ್ ಫೈಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಗೆದ್ದು ಅಮೆರಿಕದಲ್ಲಿ ಮುಂದಿನ ತಿಂಗಳು ನಡೆಯಲಿರುವ ಆಲ್ಟಿಮೇಟ್ ಫೈಟಿಂಗ್ ಚಾಂಪಿಯನ್ ಶಿಪ್‌ಗೆ ಆಯ್ಕೆಯಾಗಿದ್ದಾರೆ. 58 ಕೆ.ಜಿ ಮಿಕ್ಸಡ್ ಮಾರ್ಷಲ್ ಆರ್ಟ್ ವಿಭಾಗದಲ್ಲಿ ಫೈಟ್ ಮಾಡಲಿದ್ದಾರೆ.
ಈ ಪಂದ್ಯಾವಳ್ಳಿಯ ಒಂದು ಕುಸ್ತಿಯಲ್ಲಿ ಗೆದ್ದರೆ ₹25 ಲಕ್ಷ ಬಹುಮಾನ ಸಿಗಲಿದೆ. ಸಮಗ್ರವಾಗಿ ಪ್ರಥಮ, ದ್ವಿತೀಯ ಸ್ಥಾನ ಬಂದರೆ ₹3, ₹2 ಕೋಟಿ ನಗದು ಬಹುಮಾನವಾಗಿ ಸಿಗಲಿದೆ ಎನ್ನುತ್ತಾರೆ ಕಿಶೋರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.