ದೊಡ್ಡಬಳ್ಳಾಪುರ: ಇಲ್ಲಿಯ ಭುವನೇಶ್ವರಿ ನಗರದ ಮುನಿನಂಜಪ್ಪನವರ ಜಮೀನಿನಲ್ಲಿ ಸೋಮವಾರ ಬಣ್ಣ, ಬಣ್ಣದ ತಹರೇವಾರಿ ಗಾಳಿಪಟಗಳು ಆಗಸದಲ್ಲಿ ಚಿತ್ತಾರ ಮೂಡಿಸಿದವು.
ರಾಜ್ಯಮಟ್ಟದ ಗಾಳಿಪಟ ಉತ್ಸವದಲ್ಲಿ ಬೆಂಗಳೂರು, ಮಂಡ್ಯ, ಬೆಳಗಾವಿ ಮೊದಲಾದ ಕಡೆಗಳಿಂದ ಬಂದಿದ್ದ ಗಾಳಿಪಟ ಕಲಾವಿದರು ಭಾಗವಹಿಸಿದ್ದರು.
ಕರ್ನಾಟಕ ಜಾನಪದ ಪರಿಷತ್ತು, ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘ ಜಂಟಿಯಾಗಿ ಗಾಳಿಪಟ ಉತ್ಸವ ಆಯೋಜಿಸಿದ್ದವು. ದೊಡ್ಡಬಳ್ಳಾಪುರ ತಾಲ್ಲೂಕಿನ ಮಕ್ಕಳಿಗೆ ಉಚಿತ ಗಾಳಿಪಟ ತಯಾರಿಕೆ ತರಬೇತಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಉದ್ಘಾಟಿಸಲಾಯಿತು.
ಗಾಳಿಪಟ ಕಲೆಯಲ್ಲಿ ದೊಡ್ಡ ಬಳ್ಳಾಪುರ ಖ್ಯಾತಿ ಹೊಂದಿದೆ. ಗಾಳಿಪಟ ಕಲೆಗೆ ಉತ್ತೇಜನ ನೀಡಲು ಜಾನಪದ ಪರಿಷತ್ತು ಯೋಜನೆ ರೂಪಿಸಬೇಕಿದೆ ಎಂದು ಶಾಸಕ ಧೀರಜ್ ಮುನಿರಾಜು ಸಲಹೆ ಮಾಡಿದರು.
ಜಾನಪದ ಸಂಸ್ಕೃತಿಯಲ್ಲಿ ಜನರ ಭಾವೈಕ್ಯತೆಗೆ ಪೂರಕವಾದ ಗ್ರಾಮೀಣ ಕ್ರೀಡೆಗಳು, ಉತ್ಸವಗಳು ಹಿಂದಿನಿಂದಲೂ ಆಚರಣೆ ಮಾಡುತ್ತಾ ಬರಲಾಗಿದೆ. ಜನರ ಸಾಮೂಹಿಕ ಭಾಗವಹಿಸುವಿಕೆಗೆ ಇಂಬು ನೀಡುತ್ತವೆ. ಇತ್ತೀಚೆಗೆ ಕಬಡ್ಡಿ, ಕೊಕ್ಕೊ ಮೊದಲಾದ ಗ್ರಾಮೀಣ ಕ್ರೀಡೆಗಳು ಕಾರ್ಪೋರೇಟ್ ವ್ಯವಸ್ಥೆಗೆ ಸಿಕ್ಕಿ ಹಣ ಮಾಡಲು ಬಳಸಿಕೊಳ್ಳ ಲಾಗುತ್ತಿದೆ. ಈ ದಿಸೆಯಲ್ಲಿ ಜಾನಪದ ಕಲೆ ಉಳಿಸಿ ಬೆಳೆಸಬೇಕಾದರೆ ಜನರ ಭಾಗವಹಿಸುವಿಕೆ ಮುಖ್ಯ ಎಂದು ಚಿಂತಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ಜಾನಪದ ತಜ್ಞ ಎಚ್.ಎಲ್.ನಾಗೇಗೌಡರ ಪರಿಶ್ರಮದಿಂದ ರೂಪುಗೊಂಡಿರುವ ಕರ್ನಾಟಕ ಜಾನಪದ ಪರಿಷತ್ತು ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಗಾಳಿಪಟದ ಬಗ್ಗೆ ಪ್ರಚುರಪಡಿಸಲು ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಬರುತ್ತಿದೆ ಎಂದರು.
ಎಂ.ವೆಂಕಟರಾಜು (ಡೋಲು ವಾದಕ), ಕೆ.ಪಿ.ಪ್ರಕಾಶ್ (ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ), ಗಂಗಾಧರ (ಯಕ್ಷಗಾನ ಭಾಗವತ), ಪೈಲ್ವಾನ್ ಪಿಳ್ಳಪ್ಪ (ಕ್ರೀಡೆ) ಇವರನ್ನು ಸನ್ಮಾನಿಸಲಾಯಿತು.
ದೊಡ್ಡಬಳ್ಳಾಪುರ ಗಾಳಿಪಟ ಕಲಾಸಂಘದ ಅಧ್ಯಕ್ಷ ಎಲ್.ಎನ್.ಶ್ರೀನಾಥ್, ಆದಿತ್ಯ ನಂಜರಾಜ್, ಆರ್.ಲಕ್ಷ್ಮಿಪತಿ, ಕೆ.ಬಿ.ಮುದ್ದಪ್ಪ, ಎ.ಎನ್.ಪ್ರಕಾಶ್, ಎಸ್.ಮುನಿರಾಜು, ವಿಶ್ವನಾಥ್, ಜೆ.ವಿ.ಸುಬ್ರಹ್ಮಣ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.