ADVERTISEMENT

ಕೋಕಿಲ ಕಂಠದ ‘ರತ್ನ ಕಲೆ’

ವಿಶ್ವ ರಂಗಭೂಮಿ ದಿನ: ರಂಗಸಾಧಕರತ್ತ ಒಂದು ಕಿರುನೋಟ, ‘ಕೋಕಿಲ ಕಂಠಾಭರಣ’ ಬಿರುದಾಂಕಿತ ಮುರಾರಾಚಾರ್‌

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 16:09 IST
Last Updated 27 ಮಾರ್ಚ್ 2019, 16:09 IST
ಡಿ.ಮುರಾರಾಚಾರ್
ಡಿ.ಮುರಾರಾಚಾರ್   

ದೊಡ್ಡಬಳ್ಳಾಪುರ: ಪೌರಾಣಿಕ ನಾಟಕಗಳ ಕಲಿಕೆ, ಪ್ರದರ್ಶನಕ್ಕೆ ತಾಲ್ಲೂಕಿನಲ್ಲಿ ದಶಕಗಳ ಇತಿಹಾಸ ಇದೆ. ಇಲ್ಲಿನ ರಂಗಭೂಮಿ ಇಂದಿಗೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿ, ಪ್ರತಿ ವರ್ಷ ಘಾಟಿ ಕ್ಷೇತ್ರದಲ್ಲಿ ನಡೆಯುವ ರಥೋತ್ಸವದ ಸಂದರ್ಭದ ನಾಟಕೋತ್ಸವ ಸ್ಪರ್ಧೆಯಲ್ಲಿ ಹತ್ತಾರು ನಾಟಕ ತಂಡಗಳು ಭಾಗವಹಿಸುತ್ತವೆ.

ಇದಲ್ಲದೆ ಪ್ರತಿ ವರ್ಷ ಫೆಬ್ರುವರಿಯಿಂದ ಹವ್ಯಾಸಿ ಕಲಾವಿದರು ಪ್ರತಿ ಗ್ರಾಮಗಳಲ್ಲೂ ಪೌರಾಣಿಕ ನಾಟಕಗಳನ್ನು ಕಲಿತು ಅಭಿನಯಿಸುತ್ತಾರೆ. ಮಳೆಗಾಲ ಪ್ರಾರಂಭದ ವೇಳೆಗೆ ಸುಮಾರು 150ಕ್ಕೂ ಹೆಚ್ಚು ನಾಟಕಗಳ ಪ್ರದರ್ಶನ ನಡೆಯುತ್ತದೆ. ಒಂದು ನಾಟಕ ಪ್ರದರ್ಶನಕ್ಕೆ ₹60 ಸಾವಿರಗಳಿಂದ ₹1 ಲಕ್ಷದವರೆಗೂ ಖರ್ಚಾಗಲಿದೆ. ಈ ಎಲ್ಲ ಹಣವನ್ನು ಕಲಾವಿದರೇ ಭರಿಸಿಕೊಂಡು ಉಚಿತವಾಗಿ ಪ್ರದರ್ಶನ ನೀಡುತ್ತಾರೆ.

ಈ ರೀತಿಯ ನಾಟಕದ ಆಸಕ್ತಿಯನ್ನು ಹೊಂದಿರುವ ತಾಲ್ಲೂಕಿನ ಕಲಾವಿದರ ಪೈಕಿ ‘ಕೋಕಿಲ ಕಂಠಾಭರಣ’ ಎನ್ನುವ ಬಿರುದನ್ನು ಹೊಂದಿದ್ದ ಡಿ.ಮುರಾರಾಚಾರ್ ಅವರ ಹೆಸರು ನಾಟಕ ಹಾಗೂ ಕನ್ನಡ ಚಲನ ಚಿತ್ರ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ.

ADVERTISEMENT

ಕರ್ನಾಟಕ ನಾಟಕ ಪ್ರಪಂಚದಲ್ಲಿ ನಾಟಕ ರತ್ನ ಗುಬ್ಬಿ ವೀರಣ್ಣನವರ ಹೆಸರು ಅಜರಾಮರ. ಹಾಗೆಯೇ ತಮ್ಮದೇ ಆದ ನಟನಾ ಶೈಲಿ, ಅತಿ ಮಧುರ ಕಂಠ, ಸ್ತ್ರೀ ಪುರುಷ ಪಾತ್ರಗಳೆರಡರಲ್ಲೂ ಪ್ರತಿಭೆ ಹೊಂದಿದ್ದ ಮುರಾರಾಚಾರ್ ಸಹ ಈ ಕಂಪನಿಯಲ್ಲಿದ್ದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದರು.

‘ದೊಡ್ಡಬಳ್ಳಾಪುರ ಅಕ್ಕಸಾಲಿಗರ ಬೀದಿಯಲ್ಲಿ ವಾಸವಾಗಿದ್ದ ಮುರಾರಾಚಾರ್ ಅವರ ತಂದೆ ಸಂಗೀತ ಬಲ್ಲವರಾಗಿದ್ದರು. ಮಾತ್ರವಲ್ಲ ನಾಟಕಾಭಿನಯದಲ್ಲೂ ಸೈ ಎನಿಸಿಕೊಂಡಿದ್ದರು. ‘ಕಾಳಿದಾಸ’ ನಾಟಕದಲ್ಲಿ ಮುರಾರಾಚಾರ್‌ರವರು ವೇಶ್ಯೆ ‘ರತ್ನ ಕಲೆ’ ಎಂಬ ಸ್ತ್ರೀ ಪಾತ್ರ ಅಭಿನಯಿಸಿದ್ದರು. ಅವರ ಅಭಿನಯ ಹಾಗೂ ಕಂಠ ಮಾಧುರ್ಯಕ್ಕೆ ಮಾರು ಹೋದ ವೀರಣ್ಣನವರು ಮುರಾರಾಚಾರ್‌ರವರನ್ನು ತಮ್ಮ ಕಂಪನಿಯಲ್ಲಿ ನಟನೆಗೆ ತೆಗೆದುಕೊಂಡರು’ ಎನ್ನುತ್ತಾರೆ ಕಲಾಭಿಮಾನಿಗಳು.

ಆರು ದಶಕಗಳಲ್ಲಿ ಗುಬ್ಬಿ ಕಂಪನಿ ಚೆನ್ನೈ, ಕೊಯಮತ್ತೂರು, ಕುಂಭಕೋಣ, ಮದುರೆ, ಎಟ್ಟಾಪುರಂ ಮುಂತಾದ ಕಡೆಗಳಲ್ಲಿ ಮೊಕ್ಕಾಂ ಹೂಡಿ ಅನೇಕ ಕನ್ನಡ ನಾಟಕಗಳನ್ನು ಪ್ರದರ್ಶಿಸಿ ಅಲ್ಲಿನ ಕಲಾಭಿಮಾನಿಗಳ ಮೆಚ್ಚುಗೆ ಪಡೆಯಿತು. ಎಟ್ಟಾಪುರಂ ಯುವರಾಜರು ಮುರಾರಾಚಾರ್‌ರವರ ಹಾಡುಗಾರಿಕೆ, ಪಾತ್ರ, ನಟನಾಕೌಶಲಅದರಲ್ಲೂ ಸ್ತ್ರೀ ಪಾತ್ರ ನಿರ್ವಹಣೆಯನ್ನು ಮೆಚ್ಚಿ ಸಾವಿರ ರೂಪಾಯಿಯ ಜರತಾರಿ ಸೀರೆ ಮತ್ತು ಬಂಗಾರದ ಪದಕವನ್ನು ಬಹುಮಾನವಾಗಿ ಕೊಟ್ಟಿದ್ದರು.

ಮುರಾರಾಚಾರ್‌‌ರವರು ನಾಟಕ ರಂಗವಲ್ಲದೆ ಚಿತ್ರರಂಗದಲ್ಲೂ ತಮ್ಮ ಸೇವೆ ಸಲ್ಲಿಸಿದ್ದಾರೆ. ಎಂ.ವಿ.ಸುಬ್ಬಯ್ಯನಾಯ್ಡು ಮತ್ತು ಆರ್. ನಾಗೇಂದ್ರರಾಯರು ನಿರ್ಮಿಸಿದ ‘ಭಕ್ತ ಕಬೀರ’ ಚಿತ್ರದಲ್ಲಿ ಕಬೀರರ ತಂದೆಯ ಪಾತ್ರವನ್ನು, ಹೊನ್ನಪ್ಪ ಭಾಗವತರ್‌ರವರ ‘ಭಕ್ತ ಕುಂಬಾರ’ ಚಿತ್ರದಲ್ಲಿ ನಾಮದೇವ ಪಾತ್ರವನ್ನು ಮತ್ತು ನಾಟಕ ರತ್ನ ಗುಬ್ಬಿ ವೀರಣ್ಣನವರ ‘ಸದಾರಮೆ’ ಚಿತ್ರದಲ್ಲಿ ನಾಯಕನ ಪಾತ್ರವನ್ನೂ ನಿಭಾಯಿಸಿದ್ದರು.

ಮೈಸೂರು ಮಹಾರಾಜರಾಗಿದ್ದ, ಕಲಾ ಪ್ರೋತ್ಸಾಹಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮುರಾರಾಚಾರ್‌ರ ಅದ್ಬುತ ಹಾಡುಗಾರಿಕೆ, ನಟನೆ, ಸಂಭಾಷಣೆಯ ಸ್ಫುಟತ್ವವನ್ನು ಮೆಚ್ಚಿ ‘ಶಾಲು ಹೊದಿಸಿ’ ಬಹುಮಾನ ಇತ್ತು ‘ಕೋಕಿಲ ಕಂಠಾಭರಣ’ ಎಂಬ ಬಿರುದು ನೀಡಿ ಗೌರವಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.