ದಾಬಸ್ ಪೇಟೆ: ಮೇಕೆ ಮತ್ತು ಕುರಿಗಳನ್ನು ತುಂಬಿದ್ದ ಲಾರಿ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ರಾಷ್ಟ್ರೀಯ ಹೆದ್ದಾರಿ 48ರ ಗುಂಡೇನಹಳ್ಳಿ ಬಳಿ ಶನಿವಾರ ಬೆಳಗ್ಗಿನ ಜಾವ 3:30 ಗಂಟೆ ಸಮಯದಲ್ಲಿ ಅಪಘಾತ ಸಂಭವಿಸಿದ್ದು, ಮೂವರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.
ಲಾರಿಯಲ್ಲಿದ್ದ ಸೀನಪ್ಪ (50), ನಜೀರ್ ಅಹ್ಮದ್ (36) ಮತ್ತು ಆನಂದ್ (42) ಮೃತರು.
ಲಾರಿಯು ಮೇಕೆ ಮತ್ತು ಕುರಿಗಳನ್ನು ತುಂಬಿಕೊಂಡು ಮುಧೋಳದಿಂದ ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆಗೆ ತೆರಳುತ್ತಿತ್ತು. ಲಾರಿಯ ಟೈಯರ್ ಪಂಚರ್ ಆಗಿದ್ದರಿಂದ ರಸ್ತೆ ಬದಿ ನಿಲ್ಲಿಸಲಾಗಿತ್ತು.
ಇನ್ನು ಎದುರಿನಿಂದ ಬಂದ ಕೆಎಸ್ಆಟ್ಟಿಸಿ ಬಸ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಲಾರಿ ಮುಂಭಾಗ ನಜ್ಜುಗುಜ್ಜಾಗಿ ಅದರಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ.
ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತದೇಹಗಳನ್ನು ಹೊರತೆಗೆದು ರಸ್ತೆ ಸಂಚಾರ ಸುಗಮಗೊಳಿಸಿದರು.
ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಸಂಭವಿಸಿದ ಭಾಗದಲ್ಲಿ ಅಪಾಯಕಾರಿ ತಿರುವು ಇರುವುದರಿಂದ ಈ ರೀತಿಯ ಘಟನೆಗಳು ಸಂಭವಿಸುತ್ತಿವೆ ಎಂದು ಸ್ಥಳೀಯರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.