ADVERTISEMENT

ವಿಜಯಪುರ: ಚಿಕ್ಕಬಳ್ಳಾಪುರ ಬಸ್‌ಗಾಗಿ ಕಾಯಬೇಕು ಗಂಟೆಗಟ್ಟಲೇ!

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 2:43 IST
Last Updated 6 ನವೆಂಬರ್ 2025, 2:43 IST
ವಿಜಯಪುರ ಪಟ್ಟಣದಲ್ಲಿ ಚಿಕ್ಕಬಳ್ಳಾಪುರಕ್ಕೆ ತೆರಳಲು ಪ್ರಯಾಣಿಕರು ಕೆಎಸ್‍ಆರ್‍ಟಿಸಿ ಬಸ್‍ಗೆ ಮುಗಿಬಿದ್ದರು. 
ವಿಜಯಪುರ ಪಟ್ಟಣದಲ್ಲಿ ಚಿಕ್ಕಬಳ್ಳಾಪುರಕ್ಕೆ ತೆರಳಲು ಪ್ರಯಾಣಿಕರು ಕೆಎಸ್‍ಆರ್‍ಟಿಸಿ ಬಸ್‍ಗೆ ಮುಗಿಬಿದ್ದರು.    

ವಿಜಯಪುರ (ದೇವನಹಳ್ಳಿ): ಪಟ್ಟಣದಿಂದ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ಪ್ರಯಾಣಿಸುವ ಪ್ರಯಾಣಿಕರು ಬಸ್‍ಗಳಿಗೆ ಗಂಟೆ ಗಂಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಎಸ್‍ಆರ್‌ಟಿಸಿ ಬಸ್‍ಗಳ ಸಂಖ್ಯೆ ಹೆಚ್ಚಿಸಲು, ಬಿಎಂಟಿಸಿ ಬಸ್ ಸೌಲಭ್ಯ ಒದಗಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿ ಬಳಿಕ ಸರ್ಕಾರಿ ಬಸ್‍ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ಇದರಿಂದ ಪ್ರತಿ ನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸೇರಿದಂತೆ ಇತರರು ನಾನಾ ಸಮಸ್ಯೆ ಎದುರಿಸುವಂತಾಗಿದೆ.

ವಿಜಯಪುರ ಪಟ್ಟಣದ ಮಾರ್ಗವಾಗಿ ಚಿಕ್ಕಬಳ್ಳಾಪುರದಿಂದ ಕೋಲಾರಕ್ಕೆ ಕೆಎಸ್‍ಆರ್‌ಟಿಸಿ ಬಸ್‍ಗಳು ಸಂಚರಿಸುತ್ತವೆ. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ನೂರಾರು ವಿದ್ಯಾರ್ಥಿಗಳು, ನೌಕರರು, ರೈತರು, ಇತರೆ ಪ್ರಯಾಣಿಕರು ಪಟ್ಟಣದಿಂದ ಚಿಕ್ಕಬಳ್ಳಾಪುರಕ್ಕೆ ತೆರಳಲು ಸಮಯಕ್ಕೆ ಸರಿಯಾಗಿ ಸರ್ಕಾರಿ ಬಸ್ ಬಾರದೆ ಪರದಾಡುತ್ತಿದ್ದಾರೆ.

ADVERTISEMENT

ಪಟ್ಟಣದಿಂದ ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರದ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸಕ್ಕೆ ತೆರಳುತ್ತಾರೆ. ಬೆಳಗ್ಗೆ ವೇಳೆಯಲ್ಲಿ ಬಸ್ ಬಾರದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ತೊಂದರೆ ಅನುಭವಿಸುತ್ತಿದ್ದಾರೆ. ನಿತ್ಯ ವಿವಿಧ ನೌಕರಿಗಳಿಗಾಗಿ ಪಟ್ಟಣದಿಂದ ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರಕ್ಕೆ ಹೋಗಲು ಸಂಕಷ್ಟ ಪಡುವಂತಾಗಿದೆ.

ವಿಜಯಪುರ ಪಟ್ಟಣದಿಂದ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಕಡೆಗೆ ಪ್ರಯಾಣಿಕರು ಸಂಚರಿಸಲು ಬೆಳಗ್ಗೆ ಮತ್ತು ಸಂಜೆ ವೇಳೆ ಕೆಎಸ್‍ಆರ್‌ಟಿಸಿ ಬಸ್‍ಗಳ ಸಂಖ್ಯೆ ಹೆಚ್ಚಿಸಬೇಕು. ಈ ಮಾರ್ಗವಾಗಿ ಬಿಎಂಟಿಸಿ ಬಸ್ ಸೌಲಭ್ಯ ಒದಗಿಸಬೇಕೆಂದು ಸಾರಿಗೆ ಅಧಿಕಾರಿಗಳಿಗೆ ಪ್ರಯಾಣಿಕರು ಮನವಿ ಮಾಡಿದ್ದಾರೆ.

ವಿಜಯಪುರ ಪಟ್ಟಣದಿಂದ ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರಕ್ಕೆ ತೆರಳಲು ಪ್ರಯಾಣಿಕರು ಗಂಟೆ ಗಂಟಲೇಕಾದರೂ ಕೆಎಸ್‍ಆರ್‌ಟಿಸಿ ಬಸ್‍ಗಳು ಬರುವುದಿಲ್ಲ. ಸಿಗುವ ಬಸ್ಸಿನಲ್ಲಿ ಸೀಟ್ ಸಿಗುವುದಿರಲಿ ನಿಲ್ಲುವುದಕ್ಕೂ ಜಾಗ ಇರುವುದಿಲ್ಲ
–ಮಧುಕುಮಾರ್, ಪ್ರಯಾಣಿಕ
ವಿಜಯಪುರ ಪಟ್ಟಣದಿಂದ ಚಿಕ್ಕಬಳ್ಳಾಪುರಕ್ಕೆ ಹೋಗಲು ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ತೆರಳಲು ಮತ್ತು ಹಿಂದಿರುಗಲು ಕೆಎಸ್‍ಆರ್‌ಟಿಸಿ ಬಸ್‍ ನೆಚ್ಚಿಕೊಂಡಿದ್ದಾರೆ. ಬಸ್‍ ಕೊರತೆ ಸಕಾಲಕ್ಕೆ ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗಳಿಗೆ ತೊಂದರೆ ಆಗಿದೆ.
–ಚಂದನಾ, ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.