ADVERTISEMENT

ರೈತರಿಗೆ ಕೆವಿಕೆ ಮಾರುಕಟ್ಟೆ ಮಳಿಗೆ: ಡಾ.ಎಸ್.ರಾಜೇಂದ್ರಪ್ರಸಾದ್

ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 2:08 IST
Last Updated 24 ಮಾರ್ಚ್ 2021, 2:08 IST
ಗ್ರಾಮೀಣ ಮಾರುಕಟ್ಟೆ ಉದ್ಘಾಟನೆ ಸಂದರ್ಭದಲ್ಲಿ ಕಂಪನಿ ಸಿಇಒ ಎಂ.ಚೈತ್ರಾ ಹಾಗೂ ಕಂಪನಿಯ ನಿರ್ದೇಶಕರು ಹಾಜರಿದ್ದರು
ಗ್ರಾಮೀಣ ಮಾರುಕಟ್ಟೆ ಉದ್ಘಾಟನೆ ಸಂದರ್ಭದಲ್ಲಿ ಕಂಪನಿ ಸಿಇಒ ಎಂ.ಚೈತ್ರಾ ಹಾಗೂ ಕಂಪನಿಯ ನಿರ್ದೇಶಕರು ಹಾಜರಿದ್ದರು   

ದೊಡ್ಡಬಳ್ಳಾಪುರ: ರೈತರ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ರೈತರ ಮಾರುಕಟ್ಟೆ ಮಳಿಗೆಗಳ ಸ್ಥಾಪನೆ ಅಗತ್ಯವಾಗಿದೆ. ಕೃಷಿ ವಿಜ್ಞಾನ ಕೇಂದ್ರಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ರೈತರಿಗೆ ಮಾಹಿತಿ ನೀಡುತ್ತಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಾಜೇಂದ್ರಪ್ರಸಾದ್ ಹೇಳಿದರು.

ತಾಲ್ಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆ 15ನೇ ವಾರ್ಷಿಕೋತ್ಸವ ಹಜ್ಜೆ ಗುರುತು ಸಮಾರಂಭದಲ್ಲಿ ಮಾತನಾಡಿದರು.

ರೈತರು ಸಮಗ್ರ ಕೃಷಿ ಅಳವಡಿಸಿಕೊಳ್ಳುವ ಮೂಲಕ ಕೃಷಿ ಲಾಭದಾಯಕವಾಗಿಸಿಕೊಳ್ಳಬೇಕಿದೆ. ಸಹಜವಾದ ಕೃಷಿಯೊಂದಿಗೆ ಹೂ, ತರಕಾರಿ ಬೆಳೆಯುವುದು,ಕೋಳಿ, ಕುರಿ ಸಾಕಾಣಿಕೆ ಹಾಗೂ ಹೈನುಗಾರಿಕೆ ಅಳವಡಿಸಿಕೊಳ್ಳಬೇಕಿದೆ. ಇಂದಿನ ಯುವಕರು ಕೃಷಿಯತ್ತ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರಗಳಿಂದ ಕಾರ್ಯಕ್ರಮ ರೂಪಿಸಿ, ಯುವಕರನ್ನು ಕೃಷಿಗೆ ಹುರಿದುಂಬಿಸಿ ಅಗತ್ಯ ತರಬೇತಿ ನೀಡಲಾಗುತ್ತಿದೆ ಎಂದರು.

ADVERTISEMENT

ಕೃಷಿ ವಿಜ್ಞಾನ ಕೇಂದ್ರಗಳು ಹೊಸತಂತ್ರಜ್ಞಾನ ಅಳವಡಿಸಿಕೊಂಡು ನೀರು, ಮಣ್ಣು ಮೊದಲಾಗಿ ನೈಸರ್ಗಿಕ ಸಂಪತ್ತು ಉಳಿಸಿಕೊಳ್ಳುವ ದಿಸೆಯಲ್ಲಿ ರೈತರಿಗೆ ಪ್ರಾಯೋಗಿಕ ಕಾರ್ಯಕ್ರಮ ರೂಪಿಸುತ್ತಾ ಮಾದರಿಯಾಗಿದೆ ಎಂದು ಹೇಳಿದರು.

ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ವಿ.ವೆಂಕಟಸುಬ್ರಮಣಿಯನ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯಾಗಿದ್ದು, ಕೃಷಿಯಲ್ಲಿ ನೂತನ ಆವಿಷ್ಕಾರ ನಿರಂತರವಾಗಿ ನಡೆಯುತ್ತಿದೆ. ರೈತರು ಕೃಷಿ ಉತ್ಪನ್ನಗಳಷ್ಟೇ ಅಲ್ಲದೇ ಉಪ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡುವತ್ತ ಗಮನ ಹರಿಸಬೇಕು ಎಂದರು.

ಮುಧೋಳದ ನಾಯಿ ತಳಿ ಕುರಿತಾಗಿ ಪ್ರಧಾನಿ ಅವರು ಆಡಿದ ಮಾತಿಗೆ ಈಗ ಬೇಡಿಕೆ ಹೆಚ್ಚಾಗಿದೆ. ಕಿಸಾನ್ ಆ್ಯಪ್‍ಗಳಲ್ಲಿ ತಮ್ಮ ಉತ್ಪನ್ನಗಳ ಕುರಿತಾಗಿ ಪ್ರಚಾರ ಕೈಗೊಳ್ಳಬೇಕು. ರಾಮನಗರದ ರೈತರ ಉತ್ಪನ್ನಗಳು ಕೇರಳದಲ್ಲಿ ಮಾರಾಟವಾಗುತ್ತಿರುವುದನ್ನು ಕಂಡಿದ್ದೇನೆ. ಕೃಷಿ ವಿಜ್ಞಾನ ಕೇಂದ್ರಗಳು ಸ್ವಾಭಾವಿಕ ಸಂಪನ್ಮೂಲಗಳ ಸದ್ಬಳಕೆಯಾಗುವಲ್ಲಿ ಹೆಚ್ಚಿನ ಕಾರ್ಯಕ್ರಮ ರೂಪಿಸಿಕೊಳ್ಳಬೇಕು. ರೈತರ ಆರ್ಥಿಕ ಸ್ವಾವಲಂಬನೆಗೆ ಒತ್ತಾಸೆಯಾಗಿ ನಿಲ್ಲಬೇಕು ಎಂದು ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನಗೌಡ ಪ್ರಸ್ತಾವಿಕವಾಗಿ ಮಾತನಾಡಿದರು. ಬೆಂಗಳೂರು ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಎಂ.ಬೈರೇಗೌಡ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.

ಸಮಾರಂಭದಲ್ಲಿ ಕೃಷಿ ವಿವಿ ವಿಶ್ರಾಂತ ವಿಸ್ತರಣಾ ನಿರ್ದೇಶಕರು, ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆ ನಿರ್ದೇಶಕರು, ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದ ಮುಖ್ಯಸ್ಥರು ಹಾಗೂ ವಿಜ್ಞಾನಿಗಳು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಎಚ್.ಅಪ್ಪಯ್ಯ, ಕೃಷಿ ವಿವಿಯ ಮುಖ್ಯಸ್ಥರಾದ ಸಾವಿತ್ರಮ್ಮ ಸೇರಿದಂತೆ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.