ADVERTISEMENT

ಅನಗೊಂಡನಹಳ್ಳಿ | ಇಚ್ಛಾಸಕ್ತಿ ಕೊರತೆ: ಅವಸಾನದತ್ತ ಮಲ್ಲಸಂದ್ರ ಕೆರೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 1:50 IST
Last Updated 1 ಸೆಪ್ಟೆಂಬರ್ 2025, 1:50 IST
ಹೊಸಕೋಟೆ ತಾಲೂಕಿನ ಸಮೇತನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೆ. ಮಲ್ಲಸಂದ್ರ ಕೆರೆ ಏರಿಯ ಮೇಲೆ ಗಿಡಗಂಟಿ ಬೆಳೆದಿರುವುದು
ಹೊಸಕೋಟೆ ತಾಲೂಕಿನ ಸಮೇತನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೆ. ಮಲ್ಲಸಂದ್ರ ಕೆರೆ ಏರಿಯ ಮೇಲೆ ಗಿಡಗಂಟಿ ಬೆಳೆದಿರುವುದು   

ಅನಗೊಂಡನಹಳ್ಳಿ(ಹೊಸಕೋಟೆ): ಒತ್ತುವರಿ ಕಾಟ, ಕೆರೆ ಅಂಗಳದಲ್ಲೇ ಕಸ ವಿಲೇವಾರಿ, ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ...

–ಇವುಗಳಿಂದ ಹೊಸಕೋಟೆ ತಾಲ್ಲೂಕಿನ ಅನಗೊಂಡನಹಳ್ಳಿ ಹೋಬಳಿಯ ಸಮೇತನಹಳ್ಳಿ ಪಂಚಾಯಿತಿ ವ್ಯಾಪ್ತಿ ವ್ಯಾಪ್ತಿಯ ಕೆ.ಮಲ್ಲಸಂದ್ರದ ಕೆರೆ ನಲುಗಿ ಹೋಗಿದ್ದು, ಜೀವನಾಡಿಯ ಅಸ್ತಿತ್ವಕ್ಕೆ ಕುತ್ತು ಬಂದಿದೆ.

ಒತ್ತುವರಿ ಹಾವಳಿ ಒಂದೆಡೆಯಾದರೆ ಕೆರೆ ಅಂಗಳದಲ್ಲಿ ಗಿಡಗೆಂಟಿ ಬೆಳೆದು ಕೆರೆ ಸ್ವರೂಪವೇ ಹಾಳಾಗಿದೆ. ಕೆರೆ ನೀರು ಹಸಿರು ಬಣ್ಣಕ್ಕೆ ತಿರುಗಿ ದುರ್ನಾತ ಬೀರುತ್ತಿದೆ. ಕೆರೆ ಏರಿ ಮೇಲೆ ಕಸ ಸುರಿಯುವುದರಿಂದ ಆ ಕಸವೆಲ್ಲ ಕೆರೆ ನೀರಿಗೆ ಸೇರು ಕೊಳೆಯುತ್ತಿದ್ದು, ಸಂಪೂರ್ಣವಾಗಿ ಕುಲುಷಿತವಾಗಿದೆ. ಒಂದು ಕಾಲದಲ್ಲಿ ಈ ಭಾಗದ ಜೀವನಾಡಿಯಾಗಿದ್ದ ಕೆರೆ ಈಗ ಅವಸಾನದತ್ತ ಮುಖ ಮಾಡಿದೆ.

ADVERTISEMENT
ಕೆರೆಯ ಕೊಡಿಯ ಬಳಿ ನೀರು ಹಸಿರು ಬಣ್ಣಕ್ಕೆ ತಿರುಗಿ ದುರ್ನಾತ ಬೀರುತ್ತಿದೆ

ಭಕ್ತರಹಳ್ಳಿ ರಸ್ತೆಗೆ ಹೊಂದಿಕೊಂಡ ಮತ್ತು ಕೆರೆ ಕೊಡಿಯ ಭಾಗ ಒತ್ತುವರಿಯಾಗಿತ್ತಿದೆ. ಬಿಲ್ಡರ್, ರಿಯಲ್ ಎಸ್ಟೇಟ್ ದಂಧೆಕೋರರ ಹಾವಳಿಗೆ ತುತ್ತಾಗಿ ವಿಲ್ಲಾ, ಅಪಾರ್ಟ್‌ಮೆಂಟ್‌, ಖಾಸಗಿ ಕಂಪನಿಗಳು ತಲೆ ಎತ್ತುತ್ತಿದ್ದರು. ನೋಡಿಯೂ ನೋಡದಂತೆ ಅಧಿಕಾರಿಗಳು ಜಾನ ಕುರುಡತನ ಪ್ರದರ್ಶಿಸುತ್ತಿದ್ದಾರೆ. 

ಕೆರೆ ಅಂಗಳದಲ್ಲೇ ಕಸ: 

ಮಲ್ಲಸಂದ್ರ ಗ್ರಾಮದ ಪ್ಲಾಸ್ಟಿಕ್, ಕಸ ಮತ್ತು ಚರಂಡಿ ನೀರು ಕೆರೆ ಸೇರುತ್ತಿದೆ. ಇದರಿಂದ ಇಡೀ ಕೆರೆಯೇ ಗಬ್ಬು ನಾರುತ್ತಿದೆ. ಕೆರೆಯ ದಂಡೆ, ಅಂಗಳ, ಕೊಡಿ ಹೀಗೆ ಎಲ್ಲಿ ನೋಡಿದರೂ ಗಲೀಜು ಆವರಿಸಿದೆ. ಇದರಿಂದ ಕೆರೆ ನೀರು ಮಾಲಿನ್ಯವಾಗಿ, ಅಂತರ್ಜಲವು ಕಲುಷಿತಗೊಂಡಿದೆ.

ಕೆರೆಯ ಕೊಡಿಯ ಸೇತುವೆ ಕೆಳಗೆ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕೊಳಚೆ ನೀರು ಶೇಖರಣೆಯಾಗಿರುವುದು

ಕೆರೆ ಹೂಳು ತೆಗೆದು ದಶಕಗಳೇ ಕಳೆದಿದೆ. ಇದರಿಂದ ಹೂಳು ತುಂಬಿಕೊಂಡು, ಗಿಡಗೆಂಟಿ ಬೆಳೆದು ಕೆರೆ ಒಳಗೆ ಪಾಚಿ ಬೆಳೆದಿದೆ. ಇದರಿಂದ ಕೆರೆ ಅಸ್ತಿತ್ವಕ್ಕೆ ಧಕ್ಕೆಯಾಗಿದೆ.

ಕೆರೆ ಏರಿಯ ಮೇಲೆ ಕಸ
ಮಲ್ಲಸಂದ್ರ ಕೆರೆ ಉಳಿಸಿ ಎಂದು ಬೇಡಿಕೊಂಡರು ಯಾವ ರಾಜಕೀಯ ನಾಯಕರು ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಹೀಗಾಗಿ ಅವರಿಗೆ ಕೆರೆಯ ಸ್ಥಿತಿಗತಿ ಹೇಗಿದೆ ಎಂಬುದು ತಿಳಿಯುತ್ತಿಲ್ಲ
ಸಮೇತನಹಳ್ಳಿ ರಾಮಚಂದ್ರ, ರೈತ ಮುಖಂಡ
ತಹಶೀಲ್ದಾರ್‌ ಅವರು ಒತ್ತುವರಿಯಾಗಿರುವ ಕೆರೆ ಜಾಗ ತೆರವುಗೊಳಿಸಿ ಕೆರೆಯ ಸುತ್ತಲೂ ಬೆಲಿ ಹಾಕಿಸಬೇಕು. ಕೆರೆ ಆವರಣದಲ್ಲಿ ಕಸ ಸುರಿಯುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು.
ಎಂ.ಮುನಿರಾಜು, ಕಾರ್ಯದರ್ಶಿ ದಲಿತ ಹಕ್ಕುಗಳ ಸಮಿತಿ
ಸ್ಥಳೀಯರ ಒತ್ತಾಸೆ
ಈ ಕೂಡಲೇ ಕೆರೆ ಅಂಗಳದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು, ಗಿಡಗೆಂಟಿ ಮತ್ತು ತ್ಯಾಜ್ಯ ತೆರವುಗೊಳಿಸಬೇಕು. ಸರ್ವೆ ನಡೆಸಿ, ಒತ್ತುವರಿ ತೆರವುಗೊಳಿಸಬೇಕು. ಕೆರೆ ಜಾಗವನ್ನ ಹದ್ದುಬಸ್ತು ಮಾಡಬೇಕು. ಕೆರೆ ಆವರಣದಲ್ಲಿ ಕಸ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕ್ರಮಗಳನ್ನು ಕೈಗೊಂಡು ಪ್ರವಾಸಿ ತಾಣವಾಗಿಸಬೇಕು. ಮಾದರಿ ಕೆರೆಯಾಗಿ ಅಭಿವೃದ್ಧಿಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮನವಿಗೆ ಸಿಗದ ಸ್ಪಂದನೆ
ಕೆರೆ ಉಳಿವು–ಅಭಿವೃದ್ಧಿಗೆ ಸಾಕಷ್ಟು ಬಾರಿ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವ ಪ್ರಯೋಜನೆ ಆಗಿಲ್ಲ. ನನಾಮಕಾವಾಸ್ತೆ ಎರಡೂ ಬಾರಿ ಮಾತ್ರ ಸರ್ವೇ ಮಾಡಿಸಿದ್ದಾರೆಷ್ಟೇ. ಒತ್ತುವರಿ ತೆರವುಗೊಳಿಸಿ ಬೇಲಿ ಹಾಕಿಲ್ಲ. ಒಂದು ಕಾಲದಲ್ಲಿ ಜೀವನಾಡಿಯಾಗಿ ಎಲ್ಲರನ್ನು ಪೊರೆದ ಈ ಕೆರೆ ಉಳಿಸಿಕೊಳ್ಳಲು ‌ಇಲ್ಲಿನ ಸ್ಥಳೀಯ ರಾಜಕೀಯ ನಾಯಕರು ಮತ್ತು ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದಂತೆ ಕಾಣುತ್ತಿಲ್ಲ ಓಬಳಾಪುರ ವಿರಭದ್ರಯ್ಯ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.