ADVERTISEMENT

‘ದೇಶದಲ್ಲೇ ಮೊದಲಿಗೆ ತೃತೀಯ ಲಿಂಗಿಗಳಿಗೆ ಜಮೀನು ಮಂಜೂರು’

‘ನಮ್ಮನೆ ಸುಮ್ಮನೆ’ ಆಶ್ರಮ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 19:58 IST
Last Updated 2 ನವೆಂಬರ್ 2022, 19:58 IST
ಕಾರ್ಯಕ್ರಮವನ್ನು ಸಚಿವ ಆರ್‌.ಅಶೋಕ ಉದ್ಘಾಟಿಸಿದರು. ಚಿತ್ರದಲ್ಲಿ ಸಾಲುಮರದ ತಿಮ್ಮಕ್ಕ, ಮಂಜಮ್ಮ ಜೋಗತಿ, ಸಂತೋಷ ಭಾರತಿ ಗುರೂಜಿ, ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌, ‘ನಮ್ಮನೆ ಸುಮ್ಮನೆ’ ಸಂಸ್ಥಾಪಕಿ ನಕ್ಷತ್ರ, ಬಿಜೆಪಿ ಮುಖಂಡ ಎಸ್‌.ಮುನಿರಾಜು ಇದ್ದಾರೆ
ಕಾರ್ಯಕ್ರಮವನ್ನು ಸಚಿವ ಆರ್‌.ಅಶೋಕ ಉದ್ಘಾಟಿಸಿದರು. ಚಿತ್ರದಲ್ಲಿ ಸಾಲುಮರದ ತಿಮ್ಮಕ್ಕ, ಮಂಜಮ್ಮ ಜೋಗತಿ, ಸಂತೋಷ ಭಾರತಿ ಗುರೂಜಿ, ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌, ‘ನಮ್ಮನೆ ಸುಮ್ಮನೆ’ ಸಂಸ್ಥಾಪಕಿ ನಕ್ಷತ್ರ, ಬಿಜೆಪಿ ಮುಖಂಡ ಎಸ್‌.ಮುನಿರಾಜು ಇದ್ದಾರೆ   

ನೆಲಮಂಗಲ: ‘ದೇಶದ ಇತಿಹಾಸದಲ್ಲೇ ಮಂಗಳಮುಖಿಯರಿಗೆ ಜಮೀನು ಮಂಜೂರು ಮಾಡಿಲ್ಲ. ‘ನಮ್ಮನೆ ಸುಮ್ಮನೆ’ ನಿರಾಶ್ರಿತರ ಆಶ್ರಮದ ನಕ್ಷತ್ರ ಅವರ ನಿರಂತರ ಪ್ರಯತ್ನ, ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರ ಕಾಳಜಿಯಿಂದ ತೃತೀಯ ಲಿಂಗಿಗಳಿಗೆ 20 ಗುಂಟೆ ಜಮೀನು ಮಂಜೂರು ಮಾಡಿದ್ದೇವೆ’ ಎಂದು ಕಂದಾಯ ಸಚಿವ
ಆರ್‌.ಅಶೋಕ ತಿಳಿಸಿದರು.

ಇಲ್ಲಿಗೆ ಸಮೀಪದ ದಾಸನಪುರ ಹೋಬಳಿ ಗಂಗೊಂಡನಹಳ್ಳಿಯಲ್ಲಿ ತೃತೀಯ ಲಿಂಗಿಯಾದ ನಕ್ಷತ್ರ ಅವರು ಸ್ಥಾಪಿಸಿರುವ ‘ನಮ್ಮನೆ ಸುಮ್ಮನೆ’ ನಿರಾಶ್ರಿತರ ಆಶ್ರಮಕ್ಕೆ ಜಮೀನು ಮಂಜೂರಾಗಿದ್ದು, ಅದರಲ್ಲಿ ಕಟ್ಟಡ ನಿರ್ಮಾಣ ಮಾಡಲು ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ತೃತೀಯ ಲಿಂಗಿಗಳಲ್ಲಿ ಹಲವರು ವಿದ್ಯಾವಂತರಿದ್ದಾರೆ. ಅವರಿಗೂ ಉದ್ಯೋಗ ನೀಡಿದರೆ ಸ್ವಾವಲಂಬಿಗಳಾಗಿ ಬದುಕುತ್ತಾರೆ. ಇವರಿಗೆ ಇನ್ನೂ ಹೆಚ್ಚಿನ ಜಮೀನು ಮಂಜೂರು ಮಾಡಲು ಕ್ರಮ ಕೈಗೊಳ್ಳುತ್ತೇವೆ’ ಎಂದರು.

ADVERTISEMENT

ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಮಾತನಾಡಿ, ‘ನಕ್ಷತ್ರ ಅವರು ಪ್ರಥಮ ಬಾರಿ ನನ್ನ ಬಳಿ ಜಾಗ ಕೇಳಲು ಬಂದಾಗ ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ, ಅವರು ಛಲಬಿಡದೆ ಪದೇ ಪದೇ ಬಂದು ತಮ್ಮ ಕೆಲಸಗಳನ್ನು ವಿವರಿಸಿದ್ದರಿಂದ ಅರ್ಜಿ ಸ್ವೀಕರಿಸಿ, ಅಶೋಕ್‌ ಅವರ ಗಮನಕ್ಕೆ ತಂದೆ. ಗ್ರಾಮಸ್ಥರ ನೆರವಿನಿಂದ ಮುಖ್ಯರಸ್ತೆಯಲ್ಲಿ ಜಾಗ ಮಂಜೂರು ಮಾಡಿದ್ದೇವೆ’ ಎಂದರು.

‘ಹಿಂದೆ ಇದ್ದಂತಹ ಯಡಿಯೂರಪ್ಪ ಅವರ ಸರ್ಕಾರ ನಮ್ಮನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿತ್ತು, ಪ್ರಸ್ತುತ ಬೊಮ್ಮಾಯಿ ಸರ್ಕಾರ ನಮಗೆ ಜಾಗ ನೀಡಿದೆ. ತೃತೀಯ ಲಿಂಗಿಗಳ ವೃತ್ತಿಪರ ತರಬೇತಿ, ಆಶ್ರಯ ಹಾಗೂ ಸಮಗ್ರ ಕಲ್ಯಾಣಕ್ಕಾಗಿ 5 ಎಕರೆ ಜಮೀನಿಗಾಗಿ ಮನವಿ ಮಾಡಿದ್ದೆ. ಶೀಘ್ರ ಅದನ್ನು ನೆರವೇರಿಸಿಕೊಡಬೇಕು’ ಎಂದು ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷೆ ಮಂಜಮ್ಮ ಜೋಗತಿ ಕೇಳಿಕೊಂಡರು.

ಸಂಸ್ಥೆಯ ಸಂಸ್ಥಾಪಕಿ ನಕ್ಷತ್ರ ಮನೆಯಿಂದ ಹೊರ ದಬ್ಬಿಸಿಕೊಂಡು ತಾವು ಪಟ್ಟ ಕಷ್ಟಗಳನ್ನು ನೆನೆದರು.

ಬಿಜೆಪಿ ಮುಖಂಡ ಎಸ್‌.ಮುನಿರಾಜು, ಬಿಜೆಪಿ ಮಂಡಲ ಅಧ್ಯಕ್ಷ ಹನುಮಯ್ಯ, ಕೊಳ್ಳಿಗಾನಹಳ್ಳಿ ವೆಂಕಟೇಶ್‌, ಮಾದನಾಯಕನಹಳ್ಳಿ ನಗರಸಭೆ ಆಯುಕ್ತ ಹನುಮಂತೇಗೌಡ, ಸಂತೋಷ ಭಾರತಿ ಗುರೂಜಿ ಇದ್ದರು. ಸಾಲುಮರದ ತಿಮ್ಮಕ್ಕ, ಜಾನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು, ಬಿ.ಆರ್‌.ಹಿರೇಮಠ್‌, ಸಾಹಿತಿ ವೈಬಿಎಚ್‌ ಜಯದೇವ್‌ ಹಾಗೂ ಇನ್ನೂ ಕೆಲ ಸಾಧಕರಿಗೆ ‘ಶ್ರೇಷ್ಠ ಕನ್ನಡಿಗ ಪುನೀತ್‌ ರಾಜ್‌’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.