ದೇವನಹಳ್ಳಿ: ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಕೃಷಿ ಭೂಮಿಯನ್ನು ಸ್ವಾಧೀನದಿಂದ ಕೈಬಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿ ಮೂರು ತಿಂಗಳಾರೂ ಅಧಿಕೃತ ಆದೇಶ ಹೊರಬಿದ್ದಿಲ್ಲ.
ಸರ್ಕಾರ ಕೂಡಲೇ ಭೂಸ್ವಾಧೀನ ರದ್ದು ಆದೇಶ ಹೊರಡಿಸಿದ್ದರೆ ಮತ್ತೆ ಹೋರಾಟ ಆರಂಭಿಸುವುದಾಗಿ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಕೈಗಾರಿಕಾ ವಲಯ ಸ್ಥಾಪನೆಗೆ 1,777 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಕೆಐಎಡಿಬಿ ಅಧಿಸೂಚನೆ ಹೊರಡಿಸಿತ್ತು. ಅದನ್ನು ವಿರೋಧಿಸಿ ರೈತರು ಸಾವಿರಕ್ಕೂ ಹೆಚ್ಚು ದಿನ ಹೋರಾಟ ನಡೆಸಿದ್ದರು.
ರೈತರ ಹೋರಾಟಕ್ಕೆ ಮಣಿದ ಸರ್ಕಾರವು ಭೂಸ್ವಾಧಿನಕ್ಕೆ ಕೆಐಎಡಿಬಿ ಹೊರಡಿಸಿದ್ದ ಅಧಿಸೂಚನೆ ರದ್ದು ಪಡಿಸಿ, ಭೂಸ್ವಾಧೀನ ಕೈಬಿಡುವುದಾಗಿ ಇದೇ ಜುಲೈ15 ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಘೋಷಿಸಿದ್ದರು. ಆದರೆ, ಅದು ಇನ್ನೂ ಜಾರಿಯಾಗಿಲ್ಲ ಎಂದು ರೈತ ಮುಖಂಡ ಮಾರೇಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಈ ತೀರ್ಮಾನ ದೇಶವ್ಯಾಪಿ ಸುದ್ದಿಯಾಗಿತ್ತು. ಸರ್ಕಾರವು ಕೂಡಾ ಇದನ್ನು ರೈತಪರ ನಿಲುವು ಎಂದು ವ್ಯಾಪಕವಾಗಿ ಪ್ರಚಾರ ಪಡೆದಿತ್ತು. ಆದರೆ ಸರ್ಕಾರ ಮೂರು ತಿಂಗಳಿಂದಲೂ ಮೌನವಹಿಸಿದೆ. ಉದ್ದೇಶಪೂರ್ವಕವಾಗಿ ಕಾಲಹರಣ ಮಾಡುತ್ತಿರುವುದು ರೈತರನ್ನು ಒಡೆಯುವ ಉದ್ದೇಶವಲ್ಲದೆ ಮತ್ತೇನು ಅಲ್ಲ. ಈ ರೀತಿಯ ಪ್ರಯತ್ನಗಳು ಫಲ ನೀಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಸರ್ಕಾರ ಕೂಡಲೇ ಭೂಸ್ವಾಧೀನ ಆದೇಶ ರದ್ದುಪಡಿಸುವ ಮೂಲಕ ರೈತರು ನೆಮ್ಮದಿಯಾಗಿ ಕೃಷಿ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಡಬೇಕು. ಮುಖ್ಯಮಂತ್ರಿ 19 ರಂದು ಜಿಲ್ಲೆಗೆ ಆಗಮಿಸುವ ಮುನ್ನ ಭೂಸ್ವಾಧೀನ ರದ್ದುಪಡಿಸಿರುವ ಆದೇಶ ಹೊರಡಿಸಬೇಕು ಎಂದು ದಸಂಸ ಮುಖಂಡ ಕಾರಹಳ್ಳಿ ಶ್ರೀನಿವಾಸ್ ಆಗ್ರಹಿಸಿದರು.
ನಾಳೆ ಹರಳೂರು ಕೈಗಾರಿಕಾ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಸಚಿವರಾದ ಎಂ.ಬಿ. ಪಾಟೀಲ ಮತ್ತು ಕೆ.ಎಚ್.ಮುನಿಯಪ್ಪ ಅವರನ್ನು ಭೇಟಿ ಮಾಡಿ ಭೂ ಸ್ವಾಧೀನ ರದ್ದುಪಡಿಸಿರುವ ಆದೇಶವನ್ನು ಕೂಡಲೇ ಹೊರಡಿಸಬೇಕೆಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ನಲ್ಲಪನಹಳ್ಳಿ ನಂಜಪ್ಪ, ಅಶ್ವತ್ತಪ್ಪ, ಜಯರಾಮೇಗೌಡ, ಸುಬ್ರಮಣಿ, ಕೃಷ್ಣಪ್ಪ, ವೆಂಕಟಮ್ಮ, ಪಿಳಪ್ಪ, ವೆಂಕಟೇಶ್, ಗೋಪಾಲಗೌಡ, ಮಂಜುನಾಥ್, ಗೋಪಿನಾಥ್, ಗೋಪಾಲಪ್ಪ, ವೆಂಕಟೇಶ್, ಅಶ್ವತ್ತಪ್ಪ, ಚೀಮಾಚನಹಳ್ಳಿ ರಮೇಶ್, ಪ್ರಮೋದ್ ಇದ್ದರು.
ಮತ್ತೊಂದು ಸುತ್ತಿನ ಹೋರಾಟದ ಎಚ್ಚರಿಕೆ
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಕೂಡಲೇ ಭೂ ಸ್ವಾಧೀನ ರದ್ದುಗೊಳಿಸುವ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚಿಸಬೇಕು. ಇಲ್ಲವಾದರೆ ಸಂಯುಕ್ತ ಹೋರಾಟ ಮತ್ತು ಇತರೆ ಸಮಾನ ಮನಸ್ಕ ಸಂಘಟನೆಗಳ ಜೊತೆ ಮತ್ತೊಂದು ಸುತ್ತಿನ ತೀವ್ರ ತರದ ಹೋರಾಟಕ್ಕೆ ಮುನ್ನಡೆಯುತ್ತೇವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪ್ರಭಾ ಬೆಳವಂಗಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.