ADVERTISEMENT

ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ: ನ್ಯಾಯಾಧೀಶರ ಸಹಿಯೇ ನಕಲು!

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 23:55 IST
Last Updated 22 ಡಿಸೆಂಬರ್ 2025, 23:55 IST
   

ಆನೇಕಲ್: ತಾಲ್ಲೂಕಿನ ಚಿಂತಲಮಡಿವಾಳದ ಮಹಿಳೆಯೊಬ್ಬರಿಗೆ ಸೇರಿದ 14 ಗುಂಟೆ ಜಾಗವನ್ನು ಕಬಳಿಸಲು ನ್ಯಾಯಾಧೀಶರು, ಭೂಮಾಲೀಕ ಮಹಿಳೆ ಮತ್ತು ಅವರ ಮಕ್ಕಳ ಸಹಿಗಳನ್ನು ನಕಲು ಮಾಡಿದ ಆರೋಪದ ಮೇಲೆ ಏಳು ಮಂದಿ ವಿರುದ್ಧ ಆನೇಕಲ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಒಟ್ಟು 16 ಸಹಿಗಳನ್ನು ನಕಲು ಮಾಡಿ ವಂಚಿಸಿದ ಆರೋಪ ಎಫ್‌ಐಆರ್‌ನಲ್ಲಿದೆ. ಪ್ರಮುಖ ಆರೋಪಿ ಹಾಗೂ ಸಹಿ ನಕಲು ಮಾಡಲು ಸಹಕರಿಸಿದ ಆರು ಆರೋಪಿಗಳು ಪರಾರಿಯಾಗಿದ್ದಾರೆ. 

ಸಹಿ ನಕಲು ಮಾಡಿದ ಪ್ರಮುಖ ಆರೋಪಿ ಕೋರಮಂಗಲದ ಮುನಿರಾಜ ರಾಘವ ಅಲಿಯಾಸ್ ಮುರಾರಿ ಮುನೇಶ್ವರ ರಾವ್, ನಕಲಿ ದಾಖಲೆಗೆ ಸಹಕರಿಸಿದ ಆಂಜಿನಪ್ಪ, ಅರುಣಾಕ್ಷಿ, ಪವಿತ್ರ, ಪೂಜಾರಿ ಮತ್ತು ಸುಶ್ಮಿತಾ ತಲೆಮರೆಸಿಕೊಂಡಿದ್ದಾರೆ.

ADVERTISEMENT

‘ಆನೇಕಲ್ ತಾಲ್ಲೂಕಿನ ಚಿಂತಲ ಮಡಿವಾಳ ಗ್ರಾಮದ ಸರ್ವೆ ನಂಬರ್ 43/2ರ 28.8 ಎಕರೆ ಜಮೀನಿನ ಪೈಕಿ 14 ಗುಂಟೆ ಜಾಗವನ್ನು ನಕಲಿ ಸಹಿ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಕೆ ಮಾಡಿದ್ದಾರೆ. ಚಿಂತಲ ಮಡಿವಾಳದ ಸರ್ವೆ ನಂಬರ್ 43/2 ರ ಜಮೀನಿನ ಮಾಲೀಕ ವೆಂಕಟಸ್ವಾಮಿ ಮೃತಪಟ್ಟಿದ್ದರು. ಗೂಳಿಮಂಗಲದ ವೆಂಕಟಸ್ವಾಮಿ ಅವರ ಪತ್ನಿ ಜ್ಯೋತಮ್ಮ ಹೆಸರಿಗೆ ಜಮೀನಿನ ದಾಖಲೆಗಳನ್ನು ಮಾಡಿಕೊಡುತ್ತೇವೆ ಎಂದು ಸಂಬಂಧಿಯಾದ ಮುನಿ ರಾಘವ ಮತ್ತು ತಂಡದವರು ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ವಂಚನೆ ಮಾಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಧೀಶರ ಸಹಿ ನಕಲಿ ಮಾಡಿ ಡಿಕ್ರಿಯ ಮೂಲಕ ಅತ್ತಿಬೆಲೆಯ ಉಪ ನೊಂದಾವಣಾಧಿಕಾರಿ ಕಚೇರಿಯಲ್ಲಿ ಮುನಿರಾಜ ರಾಘವ ಅವರು ತಮ್ಮ ಹೆಸರಿಗೆ ಖಾತೆ ಮಾಡಿಕೊಂಡು ಬಳಿಕ ಶಿವಪ್ರಸಾದ್ ಎಂಬಾತನಿಗೆ ಮಾರಾಟ ಮಾಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಜ್ಯೋತಮ್ಮ ಮತ್ತು ಕುಟುಂಬದವರು ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.