ದೊಡ್ಡಬಳ್ಳಾಪುರ: ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿವಾರಸು ಮಾಲೀಕತ್ವವನ್ನು ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಖಾತೆ ಬದಲಾವಣೆಗೆ ಕಂದಾಯ ಇಲಾಖೆ ಅಧಿಕಾರಿಗಳು ರೈತರ ಮನೆ ಬಾಗಿನಲ್ಲೇ ಕೆಲಸ ಮಾಡಿಕೊಡುವ ಪೌತಿ ಖಾತಾ ಆಂದೋಲನ ಆರಂಭಿಸಲಾಗಿದ್ದು, 45 ದಿನಗಳಲ್ಲಿ ಜಿಲ್ಲೆಯಲ್ಲಿ ಪೌತಿಖಾತೆ ಆಂದೋಲನ ಮುಗಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
ಕೃಷಿ ಜಮೀನಿನ ಮಾಲೀಕತ್ವ(ಆರ್‌ಟಿಸಿ) ಮೃತ ವ್ಯಕ್ತಿಗಳ ಹೆಸರಿನಲ್ಲಿ ಇದ್ದರೆ ಅಂತಹ ಜಮೀನುಗಳ ಸ್ವಾಧೀನಾನುಭವ ಹೊಂದಿದ್ದರೂ ಸಹ, ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿಪಡಿಸಲು ಸಾಲ ಸೌಕರ್ಯ ಸೇರಿದಂತೆ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಪ್ರಕೃತಿ ವಿಕೋಪದಂತಹ ಅಚಾತುರ್ಯಗಳಿಂದಾಗಿ ಫಸಲು ನಾಶವಾದಾಗ ರೈತರಿಗೆ ಸರ್ಕಾರದಿಂದ ನೀಡಲಾಗುವ ವಿಮೆ, ಪರಿಹಾರವನ್ನು ಪಡೆಯುವುದು ದುಸ್ತರವಾಗುತ್ತದೆ. ರೈತರಿಗೆ ಈ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಡುವ ಸಲುವಾಗಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲೂ ಪೌತಿ ಖಾತೆ ಆಂದೋಲನ ಆರಂಭಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯನಿರ್ವಹಣೆ ಸಂಧರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಮರಣ ಹೊಂದಿರುವ ಭೂ ಮಾಲೀಕತ್ವದ 65,730 ರೈತರನ್ನು ಗುರುತಿಸಿದ್ದಾರೆ. ಹಾಗೆಯೇ ಕೆಲವು ಪ್ರಕರಣಗಳಲ್ಲಿ ಕೃಷಿ ಜಮೀನಿನ ಮಾಲೀಕರು ಜೀವಂತವಾಗಿದ್ದರು ಮರಣ ಹೊಂದಿದ್ದಾರೆ ಎಂದು ಗುರುತು ಮಾಡಿರುವ ಪ್ರಕರಣಗಳು ಗಮನಕ್ಕೆ ಬಂದಿವೆ.
ಈ ಹಿನ್ನೆಲೆಯಲ್ಲಿ ಪೌತಿಖಾತೆ ಆಂದೋಲನ ನಡೆಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಹೋಬಳಿಯಲ್ಲಿನ ನಾಡಕಚೇರಿಗಳಲ್ಲಿ ಪೌತಿಖಾತೆಗೆ ಒಳಪಡುವ ಜಮೀನುಗಳ ಸರ್ವೆ ನಂಬರ್‌ಗಳ ಪಟ್ಟಿ, ಗ್ರಾಮ ಆಡಳಿತಾಧಿಕಾರಿ, ಉಪತಹಶೀಲ್ದಾರ್‌ಗಳ ಮೊಬೈಲ್ ಸಂಖ್ಯೆ ಹಾಗೂ ಗ್ರಾಮಗಳಲ್ಲಿ ಪೌತಿ ಖಾತಾ ಆಂದೋಲನ ನಡೆಯುವ ದಿನಾಂಕವನ್ನು ಕರಪತ್ರಗಳನ್ನು ಹಂಚುವ ಮೂಲಕ ಪ್ರಚಾರ ಮಾಡಲಾಗಿದೆ ಎಂದರು.ಎರಡು ಮೂರು ತಲೆಮಾರುಗಳ ಅಂದರೆ ತಾತಾಮುತ್ತಾತನ ಹೆಸರಿನಲ್ಲೇ ಉಳಿದಿರುವ ಕೃಷಿ ಜಮೀನುಗಳ ಖಾತೆಯನ್ನು ಹೊಂದುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ಆಂದೋಲನದಲ್ಲಿ ಈ ಸಮಸ್ಯೆಗೆ ಪರಿಹಾರ ದೊರೆಯುವ ನಿರೀಕ್ಷೆ ಇದೆ.
ಪೌತಿಖಾತೆ ಆಂದೋಲನ ಯಶಸ್ವಿಯಾಗಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಂದಾಯ ಅಧಿಕಾರಿಗಳಿಗೆ ಅಗತ್ಯ ಸಹಕಾರ ನೀಡಲು ಸೂಚಿಸಲಾಗಿದೆ.ಕೆ.ಎನ್.ಅನುರಾಧಾ ಸಿಇಒ
ಎರಡು ಮೂರು ತಲೆಮಾರುಗಳ ಅಂದರೆ ತಾತಾಮುತ್ತಾತನ ಹೆಸರಿನಲ್ಲೇ ಉಳಿದಿರುವ ಕೃಷಿ ಜಮೀನುಗಳ ಖಾತೆಯನ್ನು ಹೊಂದುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ಆಂದೋಲನದಲ್ಲಿ ಈ ಸಮಸ್ಯೆಗೆ ಪರಿಹಾರ ದೊರೆಯುವ ನಿರೀಕ್ಷೆ ಇದೆ.ಸುನಿಲ್ ರೈತ ಮಣ್ಣೆ ಗ್ರಾಮ
ವಂಶವೃಕ್ಷ ಮರಣ ಪತ್ರ ಇಲ್ಲದಿದ್ದರೆ ಏನ್ ಮಾಡಬೇಕು?
ವಂಶ ವೃಕ್ಷ ಮರಣ ಪತ್ರ ಅಥವಾ ಮರಣ ಪತ್ರ ಲಭ್ಯ ಇಲ್ಲದಿದ್ದಲ್ಲಿ ಗ್ರಾಮ ಆಡಳಿತಾಧಿಕಾರಿಯಿಂದ ಮಹಜರ್ ವರದಿ ತಯಾರಿಸಿ ಗ್ರಾಮದಲ್ಲಿಯೇ ಎಲ್ಲರ ಸಮ್ಮುಖದಲ್ಲಿ ಓದಿ ತಿಳಿಸಿ ಪ್ರಮುಖರ ಸಹಿಯನ್ನು ಪಡೆಯಲಿದ್ದಾರೆ. ನಾಡ ಕಚೇರಿಯಿಂದ ಪಡೆದ ವಂಶವೃಕ್ಷ ಇಲ್ಲದಿದ್ದಲ್ಲಿ ವಾರಸುದಾರರಿಂದ ₹100 ಬೆಲೆಯ ನೋಂದಣಿ ಪ್ರಮಾಣಪತ್ರ ಪಡೆದು ವಾರಸುದಾರರ ಆಧಾರ್ ಕಾರ್ಡ್‌ನೊಂದಿಗೆ ಗ್ರಾಮ ಆಡಳಿತಾಧಿಕಾರಿಯು ಸ್ಥಳದಲ್ಲಿಯೇ ಮಹಜರ್ ವರದಿ ನೀಡಿ ನಾಡಕಚೇರಿ ತಂತ್ರಾಂಶದಲ್ಲಿ ವಂಶವೃಕ್ಷಕ್ಕಾಗಿ ಅರ್ಜಿಯನ್ನು ದಾಖಲಿಸಿ ವಂಶವೃಕ್ಷವನ್ನು ನೀಡಲಿದ್ದಾರೆ. ಕೃಷಿ ಜಮೀನು ವಾರಸುದಾರರ ಆಧಾರ್ ಇ–ಕೆವೈಸಿಯನ್ನು ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಬಸವರಾಜು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.