ADVERTISEMENT

ಆನೇಕಲ್ ಸಮೀಪ ಚಿರತೆ ಓಡಾಟ: ಜನರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 20:49 IST
Last Updated 1 ಏಪ್ರಿಲ್ 2024, 20:49 IST
ಆನೇಕಲ್‌ಗೆ ಸಮೀಪದ ಕಾವಲಹೊಸಹಳ್ಳಿಯ ಎಸ್ಆರ್ಆರ್ ಬಡಾವಣೆಯಲ್ಲಿ ಚಿರತೆಯ ಹೆಜ್ಜೆ ಹುಡುಕಾಟದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ
ಆನೇಕಲ್‌ಗೆ ಸಮೀಪದ ಕಾವಲಹೊಸಹಳ್ಳಿಯ ಎಸ್ಆರ್ಆರ್ ಬಡಾವಣೆಯಲ್ಲಿ ಚಿರತೆಯ ಹೆಜ್ಜೆ ಹುಡುಕಾಟದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ   

ಆನೇಕಲ್: ಪಟ್ಟಣಕ್ಕೆ ಸಮೀಪದ ಕಾವಲಹೊಸಹಳ್ಳಿಯ ಎಸ್‌ಆರ್‌ಆರ್‌ ಬಡಾವಣೆಯಲ್ಲಿ ಭಾನುವಾರ ರಾತ್ರಿ ಚಿರತೆ ಕಾಣಿಸಿಕೊಂಡಿದ್ದು, ಬಡಾವಣೆಯ ನಿವಾಸಿಗಳು ಮನೆಯಿಂದ ಹೊರಗೆ ಕಾಲಿಡಲು ಆತಂಕ ಪಡುವಂತಾಗಿದೆ. 

ಎಸ್‌ಆರ್‌ಆರ್‌ ಬಡಾವಣೆಯಲ್ಲಿ ಭಾನುವಾರ ರಾತ್ರಿ 7.30 ಸುಮಾರಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಸ್ಥಳೀಯ ನಿವಾಸಿ ಪಾಂಡರಂಗ ಎಂಬುವವರಿಗೆ ಚಿರತೆ ಕಾಣಿಸಿಕೊಂಡಿದೆ. ಈ ಚಿರತೆಯು ಕಾವಲಹೊಸಹಳ್ಳಿಯಿಂದ ಸಿಡಿಹೊಸಕೋಟೆಯ ಸಮೀಪದ ಅಗ್ನಿಶಾಮಕ ಠಾಣೆಯ ಹಿಂಭಾಗದಲ್ಲಿನ ನಿವಾಸಿಯೊಬ್ಬರಿಗೂ ಕಾಣಿಸಿಕೊಂಡಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ.

ಎಸ್‌ಆರ್‌ಆರ್‌ ಬಡಾವಣೆಯ 8ನೇ ಕ್ರಾಸ್‌ನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ದ್ವಿಚಕ್ರ ವಾಹನದಲ್ಲಿ ಸಂಜೆ 7.30ರ ಸುಮಾರಿನಲ್ಲಿ ಚಿರತೆಯು ಕಾಂಪೌಂಡ್‌ ಹಾರಿತ್ತು. ಚಿರತೆಯ ಓಡಾಟದಿಂದಾಗಿ ಬಡಾವಣೆಯ ನಿವಾಸಿಗಳು ಭಯಭೀತಗೊಂಡಿದ್ದಾರೆ.

ADVERTISEMENT

ಚಿರತೆ ಓಡಾಟದ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಬಡಾವಣೆಯಲ್ಲಿ ಚಿರತೆ ನಾಯಿಯನ್ನು ಬೇಟೆಯಾಡಿರುವ ಕುರಿತು ಮಾಹಿತಿ ಪಡೆದರು. ನಾಯಿಯ ಅರ್ಧ ದೇಹವನ್ನು ಚಿರತೆ ಹೊತ್ತೊಯ್ದಿದೆ.

ಅರಣ್ಯ ಇಲಾಖೆಯ ಮಾಹಿತಿಯಂತೆ ಚಿರತೆಯು ಸಿಡಿಹೊಸಕೋಟೆ ಮಾರ್ಗದಲ್ಲಿ ಹೋಗಿರುವ ಸಾಧ್ಯತೆಯಿದೆ. ಈ ಭಾಗದಲ್ಲಿ ನೀಲಗಿರಿ ತೋಪುಗಳು ಮತ್ತು ಪೊದೆಗಳು ಹೆಚ್ಚಾಗಿರುವುದರಿಂದ ಚಿರತೆಯು ಬಂದಿರುವ ಸಾಧ್ಯತೆಯಿದೆ. ಅರಣ್ಯ ಇಲಾಖೆಯ ವತಿಯಿಂದ ಗಸ್ತು ನಿಯೋಜಿಸಲಾಗುವುದು. ಸಾರ್ಜನಿಕರು ರಾತ್ರಿ ಮತ್ತು ಮುಂಜಾನೆ ಓಡಾಟವನ್ನು ನಿಲ್ಲಿಸಬೇಕು. ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ತಿಳಿಸಿದರು.

ಆನೇಕಲ್‌ ತಾಲ್ಲೂಕಿನಲ್ಲಿ ಇತ್ತೀಚಿಗೆ ಚಿರತೆ ವಿವಿಧ ಗ್ರಾಮಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಜನವರಿ ತಿಂಗಳಿನಲ್ಲಿ ಚಿರತೆಯು ಹೆಬ್ಬಗೋಡಿ, ಕಮ್ಮಸಂದ್ರ, ಗಟ್ಟಹಳ್ಳಿ, ಗೋಪಸಂದ್ರ, ಹೀಲಲಿಗೆ, ಹುಸ್ಕೂರು ಗ್ರಾಮಗಳಲ್ಲಿ ಕಂಡು ಬಂದಿತ್ತು.

ಇದೀಗ ಪಟ್ಟಣಕ್ಕೆ ಸಮೀಪದ ಬಡಾವಣೆಯೊಂದರಲ್ಲಿ ಚಿರತೆಯ ಓಡಾಟ ಸಾರ್ವಜನಿರಲ್ಲಿ ಆತಂಕ ಮೂಡಿಸಿದೆ ಮತ್ತು ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ  ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.