ADVERTISEMENT

ಸಹಕಾರ ಸಂಘಗಳು ರೈತರ ಪ್ರಗತಿಯ ಕೊಂಡಿಯಾಗಲಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 13:32 IST
Last Updated 1 ಜುಲೈ 2019, 13:32 IST
ನೂತನ ಅಧ್ಯಕ್ಷ ಆರ್.ಮಂಜುನಾಥ್‌ರನ್ನು ನಿರ್ದೇಶಕರು ಅಭಿನಂದಿಸಿದರು.
ನೂತನ ಅಧ್ಯಕ್ಷ ಆರ್.ಮಂಜುನಾಥ್‌ರನ್ನು ನಿರ್ದೇಶಕರು ಅಭಿನಂದಿಸಿದರು.   

ದೇವನಹಳ್ಳಿ: ರೈತರ ಪ್ರಗತಿಗಾಗಿ ಆರಂಭಗೊಂಡಿರುವ ವ್ಯವಸಾಯ ಸೇವಾ ಸಹಕಾರ ಸಂಘಗಳು ರೈತರ ಕೊಂಡಿಯಾಗಿ ಕೆಲಸ ಮಾಡಬೇಕು ಎಂದು ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಮುನೇಗೌಡ ಹೇಳಿದರು.

ಇಲ್ಲಿನ ಕಾರಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ಆರ್.ಮಂಜುನಾಥ್‌ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸರ್ಕಾರ ಸಹಕಾರ ಸಂಘಗಳ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಪೂರ್ಣಗೊಂಡು ರೈತರು ಋಣ ಮುಕ್ತರಾಗಲಿದ್ದಾರೆ. ಸಾಲ ಮನ್ನಾ ಒಂದು ಅಶಾದಾಯಕ ಯೋಜನೆಯಾದರೂ ನಿರಂತರವಾಗಿರಲಿದೆ ಎಂದು ಹೇಳಲಿಕ್ಕಾಗದು’ ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ದೇವರಾಜ್ ಮಾತನಾಡಿ, ‘ವ್ಯವಸಾಯ ಸೇವಾ ಸಹಕಾರ ಸಂಘ ರೈತರ ಸ್ವತ್ತು. ಸಹಕಾರ ಸಂಘದ ಸದಸ್ಯರ ಮತ್ತು ರೈತರ ಶ್ರಮದ ಬೆವರಿನ ಫಲದಿಂದ ಸಂಘದ ಪ್ರಗತಿ ಎಂಬುದನ್ನು ಯಾರು ಮರೆಯಬಾರದು. ರೈತರಿಗೆ ಯಾವುದೇ ರೀತಿಯಿಂದ ತೊಡಕಾಗದಂತೆ ಸಂಘದ ಆಡಳಿತ ಮಂಡಳಿ ಎಚ್ಚರ ವಹಿಸಬೇಕು’ ಎಂದು ಹೇಳಿದರು.

ನೂತನ ಅಧ್ಯಕ್ಷ ಆರ್.ಮಂಜುನಾಥ್ ಮಾತನಾಡಿ, ‘ಪ್ರಸ್ತುತ ಸಹಕಾರ ಸಂಘದಲ್ಲಿ ₹ 1.2 ಕೋಟಿ ಸಾಲ ಮನ್ನಾ ಆಗಿದೆ. ಉಳಿಕೆ ರೈತರ ಸಾಲ ಮನ್ನಾ ಮಾಡುವ ಪ್ರಕ್ರಿಯೆಯಲ್ಲಿದೆ. ಮರುಪಾವತಿಯಾದರೆ ನೂತನವಾಗಿ ರೈತರಿಗೆ ಸಾಲ ನೀಡಲು ಅನುಕೂಲವಾಗುತ್ತದೆ. ತೋಟಗಾರಿಕೆ ಮತ್ತು ಕೃಷಿ ಚುಟವಟಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು’ ಎಂದು ಹೇಳಿದರು.

‘ಸಹಕಾರ ಸಂಘ ಆನೇಕ ವರ್ಷಗಳಿಂದ ಏಳು ಬೀಳುಗಳ ನಡುವೆ ಪ್ರಗತಿಯ ಹೆಜ್ಜೆ ಇಡುತ್ತಿದೆ. ಇನ್ನಷ್ಟು ಅಶಾದಾಯಕ ಬೆಳವಣಿಗೆಗೆ ಈ ಹಿಂದಿನ ಮಾಜಿ ಅಧ್ಯಕ್ಷರು ಮತ್ತು ನಿರ್ದೇಶಕರು ಸಹಕಾರ ನೀಡಬೇಕು’ ಎಂದು ಕೋರಿದರು.

ವ್ಯವಸಾಯ ಸೇವಾ ಸಹಕಾರ ಸಂಘದ ಉಪಾಧ್ಯಕ್ಷೆ ಲಕ್ಷ್ಮಮ್ಮ, ಮಾಜಿ ಅಧ್ಯಕ್ಷ ರಾಜೇಂದ್ರ, ತಾಲ್ಲೂಕು ಪಂಚಾಯಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.