ADVERTISEMENT

ಸರ್ಕಾರಿ ಶಾಲೆಗಳು ಬಲಗೊಳ್ಳಲಿ

ಸಂಘ –ಸಂಸ್ಥೆ, ಖಾಸಗಿ ಕಂಪನಿ, ದಾನಿಗಳು ಕೈಜೋಡಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 2:03 IST
Last Updated 5 ಮಾರ್ಚ್ 2021, 2:03 IST
ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಸಮೀಪದ ಟಿ.ಗೊಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಟ್ರೋಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವತಿಯಿಂದ ನಿರ್ಮಿಸಿರುವ ನೂತನ ಸಭಾಂಗಣವನ್ನ ಸಂಸ್ಥೆಯ ವ್ಯವಸ್ಥಾಪಕ ಎಸ್.ಮೋಹನ್ ಉದ್ಘಾಟಿಸಿದರು
ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಸಮೀಪದ ಟಿ.ಗೊಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಟ್ರೋಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವತಿಯಿಂದ ನಿರ್ಮಿಸಿರುವ ನೂತನ ಸಭಾಂಗಣವನ್ನ ಸಂಸ್ಥೆಯ ವ್ಯವಸ್ಥಾಪಕ ಎಸ್.ಮೋಹನ್ ಉದ್ಘಾಟಿಸಿದರು   

ಆನೇಕಲ್: ದೇಶದಲ್ಲಿ ಉನ್ನತ ಹುದ್ದೆಗಳಲ್ಲಿರುವ ಬಹುತೇಕ ಮಂದಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಉತ್ತಮ ಸ್ಥಾನಗಳಲ್ಲಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಗಳ ಬಗೆಗಿನ ತಾತ್ಸಾರ ಮನೋಭಾವನೆ ಪೋಷಕರು ತೊಡೆದು ಹಾಕಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು ಎಂದು ಮೂಗ್‌ ಕಂಟ್ರೋಲ್ಸ್‌ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆ ವ್ಯವಸ್ಥಾಪಕ ಎಸ್‌.ಮೋಹನ್‌ ಅವರು
ತಿಳಿಸಿದರು.

ಅವರು ತಾಲ್ಲೂಕಿನ ಹೆಬ್ಬಗೋಡಿ ಸಮೀಪದ ಟಿ.ಗೊಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪನಿ ವತಿಯಿಂದ ನಿರ್ಮಿಸಿರುವ ನೂತನ ಸಭಾಂಗಣ ಉದ್ಘಾಟಿಸಿ ಮಾತನಾಡಿದರು.

ನುರಿತ ಮತ್ತು ಉನ್ನತ ವ್ಯಾಸಂಗ ಮಾಡಿರುವ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಸಂಘ –ಸಂಸ್ಥೆಗಳು, ಕಂಪನಿಗಳು, ದಾನಿಗಳು ಕೈಜೋಡಿಸಿದರೆ ಸರ್ಕಾರಿ ಶಾಲೆಗಳ ಬಲವರ್ಧನೆಯಾಗಲಿದೆ ಎಂದರು.

ADVERTISEMENT

ದೇಶದ ಭವಿಷ್ಯ ಶಾಲೆಗಳಲ್ಲಿ ರೂಪಿತವಾಗುತ್ತದೆ ಎಂಬ ಮಾತಿದೆ. ಹಾಗಾಗಿ ಭವಿಷ್ಯ ರೂಪಿಸುವ ಶಾಲೆಗಳನ್ನು ಬಲಪಡಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಗ್ಗೂಡಿ ಈ ಕಾರ್ಯದಲ್ಲಿ ಯಶಸ್ವಿಯಾಗಬೇಕು ಎಂದರು.

ಕಂಪನಿ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಪ್ರಕಾಶ್‌ ಮಾತನಾಡಿ, ಕಂಪನಿಯ ಸಿಎಸ್‌ಆರ್‌ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗಿದೆ. ಈ ಹಿಂದೆ ಗೊಲ್ಲಹಳ್ಳಿ ಶಾಲೆಗೆ ಕಟ್ಟಡ ನಿರ್ಮಿಸಿ ಕೊಡಲಾಗಿತ್ತು. ಈ ವರ್ಷ ಸಭಾಂಗಣ ನಿರ್ಮಿಸಿಕೊಡಲಾಗಿದೆ. ಈ ಮೂಲಕ ಶೈಕ್ಷಣಿಕ ಚಟುವಟಿಕೆ ಸುಗಮವಾಗಿ ನಡೆಯಲು ಅನುಕೂಲ ಕಲ್ಪಿಸಲಾಗಿದೆ ಎಂದರು.

ಎಲೆಕ್ಟ್ರಾನಿಕ್‌ಸಿಟಿ ಕೈಗಾರಿಕ ಸಂಘದ ಹಿರಿಯ ವ್ಯವಸ್ಥಾಪಕಿ ಮಮತಾ ಮಾತನಾಡಿ, ಎಲ್ಸಿಯಾ ಸಂಸ್ಥೆ ವತಿಯಿಂದ ವಿವಿಧ ಕಂಪನಿಗಳ ನಡುವೆ ಸಮನ್ವಯ ಸಾಧಿಸಿ ಶಿಕ್ಷಣ, ಆರೋಗ್ಯ, ಕೌಶಲಾಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಶಾಲೆಗಳಿಗೆ ಕಂಪ್ಯೂಟರ್‌ ನೀಡಿಕೆ, ಪೀಠೋಪಕರಣ, ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಸೌಲಭ್ಯ ಕಲ್ಪಿಸಲು ಶ್ರಮಿಸಲಾಗುತ್ತಿದೆ. ಬಿಲ್‌ಫೋರ್ಜ್ ಸಂಸ್ಥೆ ವತಿಯಿಂದ ಗ್ರಂಥಾಲಯ ಸ್ಥಾಪನೆ ಪ್ರಕ್ರಿಯೆ ನಡೆಯುತ್ತಿದೆ. ಬಯೋಕಾನ್‌ ಸಂಸ್ಥೆ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ನೆರವು ನೀಡಿದೆ. ವಿದ್ಯಾರ್ಥಿಗಳಿಗೆ ಪ್ರತಿವರ್ಷ ಸಮವಸ್ತ್ರ, ಶೈಕ್ಷಣಿಕ ಪರಿಕರ ನೀಡಲಾಗುತ್ತಿದೆ. ಈ ಮೂಲಕ ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಪ್ರಯತ್ನ ಮಾಡಲಾಗಿದೆ. ತಿರುಪಾಳ್ಯ ಹಿರಿಯ ಪ್ರಾಥಮಿಕ ಶಾಲೆಗೂ ಎಲ್ಸಿಯಾ ಸಂಸ್ಥೆ ವತಿಯಿಂದ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಮೂಗ್‌ ಕಂಪನಿ ಹಣಕಾಸು ಮುಖ್ಯಸ್ಥ ಅಮಿತ್‌ ಕುಮಾರ್‌ ಮಿಶ್ರಾ, ಶಾಲಾ ಮುಖ್ಯ ಶಿಕ್ಷಕಿ ಸುಮನಾ.ಜಿ.ನಾಯ್ಕ್‌, ಎಲ್ಸಿಯಾ ಸಿಇಒ ರವೀಂದ್ರ ಸಿಂಗ್, ಎಲ್ಸಿಯಾದ ನಿರಂಜನ್, ಬಾಲಾಜಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಶಿವಣ್ಣ, ಪದಾಧಿಕಾರಿ ಶ್ರೀಶೈಲ ಲೋನಿ, ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಲಿಂಗಮೂರ್ತಿ, ಸಂಘಟನಾ ಕಾರ್ಯದರ್ಶಿ ಟಿ.ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.