ADVERTISEMENT

ಜನಪರ ಯೋಜನೆ ಮತದಾರರಿಗೆ ತಿಳಿಸಿ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 2:24 IST
Last Updated 24 ಸೆಪ್ಟೆಂಬರ್ 2020, 2:24 IST
ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವಿವಿಧ ಘಟಕದ ಪದಾಧಿಕಾರಿಗಳು ಇದ್ದರು
ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವಿವಿಧ ಘಟಕದ ಪದಾಧಿಕಾರಿಗಳು ಇದ್ದರು   

ದೇವನಹಳ್ಳಿ: ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಮತದಾರರಿಗೆ ಮನವರಿಕೆ ಮಾಡಿ ತಿಳಿಸಿ ಎಂದು ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷೆ ಸೌಮ್ಯಾ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಡೆದ ಮಹಿಳಾ ಮೊರ್ಚಾ ವಿವಿಧ ಘಟಕಗಳ ಪದಾಧಿಕಾರಿಗಳ ಪರಿಚಯ ಮತ್ತೆ ನೂತನ ಮೊರ್ಚಾದ ಮೊದಲ ಸಭೆ ಉದ್ಘಾಟಿಸಿ ಮಾತನಾಡಿದರು.

‘ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಕಳೆದ ಆರೂವರೆ ವರ್ಷಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು, 128 ವರ್ಷಗಳಿಂದ ನ್ಯಾಯಾಲಯದಲ್ಲಿದ್ದ ರಾಮ ಜನ್ಮಭೂಮಿ ಪ್ರಕರಣ ಇತ್ಯರ್ಥ್ಯಗೊಂಡು ರಾಮಮಂದಿರ ನಿರ್ಮಾಣದಂತಹ ಐತಿಹಾಸಿಕ ಯೋಜನೆಗಳಿಗೆ ಒತ್ತು ನೀಡಿದ್ದಾರೆ. ಜನಧನ ಯೋಜನೆ, ಮಹಿಳಾ ಸಬಲೀಕರಣಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ನೂತನ ಪದಾಧಿಕಾರಿಗಳು ಪಕ್ಷದ ಸಂಘಟನೆಗೆ ಒತ್ತು ನೀಡಬೇಕು’ ಎಂದು ಹೇಳಿದರು.

ADVERTISEMENT

ಮಹಿಳಾ ಮೊರ್ಚಾ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ನಾಗವೇಣಿ ಮಾತನಾಡಿ, ‘ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ, ಅನಾಥ ಮಕ್ಕಳಿಗೆ ಮತ್ತು ತೀರ ಬಡ ಕುಟುಂಬದ 10 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ನೋಂದಾಯಿಸುವುದಾಗಿದೆ. ಈ ಯೋಜನೆಯಡಿ ಮಕ್ಕಳಿಗೆ 12 ವರ್ಷದವರಿಗೆ ಉಚಿತ ಊಟ, ತಿಂಡಿ, ಶಿಕ್ಷಣ, ಬಟ್ಟೆಗಳನ್ನು ನೀಡಲಾಗುತ್ತದೆ. ಇದನ್ನು ಪ್ರತಿ ಪದಾಧಿಕಾರಿಗಳು ತಾಲ್ಲೂಕಿಗೆ ಕನಿಷ್ಠ 25ರಂತೆ ಜಿಲ್ಲೆಗೆ 100 ಮಕ್ಕಳನ್ನು ನೋಂದಾಯಿಸಲೇಬೇಕು. ಹುಟ್ಟಹಬ್ಬ ಆಚರಿಸುವ ಶ್ರೀಮಂತರ ಮನವೊಲಿಸಿ ದತ್ತು ರೀತಿಯಲ್ಲಿ ಸಹಾಯ ಮಾಡಲು ತಿಳಿಸಬೇಕು ಎಂದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ‍್ಯಕ್ಷ ನಾರಾಯಣಗೌಡ, ಹಿರಿಯ ಮುಖಂಡ ಜಿ.ಚಂದ್ರಣ್ಣ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸುಂದರೇಶ್ ಮತ್ತು ದೇ.ಸೂ. ನಾಗರಾಜ್ ಮಾತನಾಡಿದರು. ಮಹಿಳಾ ಮೊರ್ಚಾ ತಾಲ್ಲೂಕು ಘಟಕ ಅಧ್ಯಕ್ಷ ವಿಮಲಾ, ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮಿಗೋಪಿ, ವಿನೋದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.