ADVERTISEMENT

ದೇವಾಲಯ ಸಾಮರಸ್ಯದ ಕೇಂದ್ರಗಳಾಗಲಿ

ಮುತ್ಯಾಲಮ್ಮ, ಮುನೇಶ್ವರಸ್ವಾಮಿ ದೇವಾಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 19:45 IST
Last Updated 26 ಆಗಸ್ಟ್ 2019, 19:45 IST
ವಿಜಯಪುರ ಸಮೀಪದ ದೊಡ್ಡಕುರುಬರಹಳ್ಳಿ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಮುತ್ಯಾಲಮ್ಮ, ಮುನೇಶ್ವರಸ್ವಾಮಿ ದೇವಾಲಯಗಳ ಉದ್ಘಾಟನಾ ಕಾರ್ಯದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಭಾಗವಹಿಸಿ ಪೂಜೆ ಸಲ್ಲಿಸಿದರು
ವಿಜಯಪುರ ಸಮೀಪದ ದೊಡ್ಡಕುರುಬರಹಳ್ಳಿ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಮುತ್ಯಾಲಮ್ಮ, ಮುನೇಶ್ವರಸ್ವಾಮಿ ದೇವಾಲಯಗಳ ಉದ್ಘಾಟನಾ ಕಾರ್ಯದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಭಾಗವಹಿಸಿ ಪೂಜೆ ಸಲ್ಲಿಸಿದರು   

ವಿಜಯಪುರ: ದೇವಾಲಯಗಳು ಸರ್ವ ಜನಾಂಗದಲ್ಲಿ ಸಾಮರಸ್ಯ ಮೂಡಿಸುವ ಕೇಂದ್ರಗಳಾಗಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಸಮೀಪದ ದೊಡ್ಡಕುರುಬರಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮುತ್ಯಾಲಮ್ಮ ದೇವಾಲಯ ಹಾಗೂ ಮುನೇಶ್ವರಸ್ವಾಮಿ ದೇವಾಲಯಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿ ಹಳ್ಳಿಗೊಂದು ದೇವಾಲಯ, ಸಮುದಾಯ ಭವನಗಳಿರಬೇಕು. ದೇವಾಲಯಗಳು ಜನರನ್ನು ಒಟ್ಟುಗೂಡಿಸಿ ಸಾಮರಸ್ಯ ಮೂಡಿಸಿದರೆ ಸಮುದಾಯ ಭವನಗಳು ಹಳ್ಳಿಗಳಲ್ಲಿ ನಡೆಯುವಂತಹ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಿಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

ADVERTISEMENT

ದೇವಾಲಯಗಳನ್ನು ನಿರ್ಮಾಣ ಮಾಡಿದ ಮಾತ್ರಕ್ಕೆ ಯಾವ ಜನಾಂಗದವರೂ ಅಭಿವೃದ್ಧಿಯಾಗುವುದಿಲ್ಲ. ಭಕ್ತಿ ಮಾರ್ಗದಲ್ಲಿ ನಡೆದು ಉತ್ತಮ ಗುಣ ನಡತೆಯುಳ್ಳವರಾದರೆ ಮಾತ್ರ ಜನರ ಏಳಿಗೆ ಸಾಧ್ಯವಾಗುತ್ತದೆ. ಇಂತಹ ಕಾರ್ಯಕ್ರಮಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು. ಯುವಜನರನ್ನು ದೇವರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿಕ್ಕೆ ಪ್ರೇರಣೆಯಾಗಬೇಕು ಎಂದರು.

ಪ್ರಧಾನ ಅರ್ಚಕ ಮುನಿಯಪ್ಪ ಮಾತನಾಡಿ, ‘ಮಾನವನಲ್ಲಿ ನಾನು ನನ್ನದು ಎನ್ನುವ ಅಹಂಕಾರ ತೊಲಗಬೇಕು. ಸಮಾಜಕ್ಕಾಗಿ ನಾವು ಎನ್ನುವ ಭಾವನೆ ಮೂಡಬೇಕು. ಈಚೆಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗುತ್ತಿರುವ ಯುವಜನರು ನಮ್ಮ ದೇಶದ ಸಂಸ್ಕೃತಿ, ಧರ್ಮದ ಆಚರಣೆ, ಪರೋಪಕಾರ, ಎಲ್ಲವನ್ನೂ ಮರೆಯುತ್ತಿದ್ದಾರೆ. ಅವರನ್ನು ಧರ್ಮದ ಕಾರ್ಯಗಳತ್ತ ಸೆಳೆಯುವಂತಹ ಕಾರ್ಯ ಮಾಡಲು ಇಂತಹ ದೇವಾಲಯಗಳ ನಿರ್ಮಾಣವಾಗಬೇಕು’ ಎಂದರು.

ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಗಂಗೆಪೂಜೆ, ಗಣಪತಿ ಪೂಜೆ, ಪ್ರವೇಶ, ಪುಣ್ಯಾಹನಾಂದಿ, ನವಗ್ರಹ ಪೂಜೆ, ಅಷ್ಟಲಕ್ಷ್ಮೀ ಪೂಜೆ, ಸಪ್ತಸಭಾವಧಿತ ಪೂಜೆ, ನವಗ್ರಹ, ಶಾಂತಿ, ಸಕಲ ದೇವತಾಪೂಜೆ, ಕಲಶಾರೋಹಣ, ಪಂಚ ಕಳಶಾರಾಧನೆ, ಮಹಾ ಮೃತ್ಯಂಜಯ ಹೋಮ, ಅಷ್ಟದಿಕ್ಫಾಲಕ ಪೂಜೆ. ಕಾರ್ಯಗಳನ್ನು ಮಾಡಿದರು.

ದೇವಾಲಯಕ್ಕೆ ಬಂದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ಮುನಿರಾಜು, ಮುಖಂಡರಾದ ರಾಮೇಗೌಡ, ರಂಗಪ್ಪ, ನರಸಿಂಹಪ್ಪ, ನಾಗರಾಜ್, ದಿನೇಶ್, ವಿಜಯಕುಮಾರ್, ಗಂಗಪ್ಪ, ಶ್ರೀರಾಮಪ್ಪ, ರತ್ನಮ್ಮ ಅರ್ಚಕ ಮಂಜುನಾಥ್ ಆರಾಧ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.