ADVERTISEMENT

ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 7:14 IST
Last Updated 11 ಜನವರಿ 2023, 7:14 IST
   

ದೊಡ್ಡಬಳ್ಳಾಪುರ: ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿ ಹೂತು ಹಾಕಿದ್ದ ಪತಿಗೆ ನಗರದ 4ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ರಮೇಶ ದುರುಗಪ್ಪ ಎಕಬೋಟೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಬಿ.ವಿ. ರಾಜೇಶ್‌ ಶಿಕ್ಷೆಗೊಳಗಾದವರು. 2018ರ ಫೆ. 9ರಂದು ಬೊಮ್ಮನಹಳ್ಳಿಯ ರಾಜೇಶ್‌ ಎಂಬಾತ ತನ್ನ ಪತ್ನಿ ಲಕ್ಷ್ಮೀ ರಾತ್ರಿಯಿಂದ ಕಾಣೆಯಾಗಿದ್ದಾಳೆ ಎಂದು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ.

ಅಂದಿನ ಸರ್ಕಲ್‌ ಇನ್‌ಸ್ಪೆಕ್ಟರ್‌ ಜಿ. ಸಿದ್ದರಾಜು ಮತ್ತು ಸಿಬ್ಬಂದಿ ಕಾಣೆಯಾದ ಮಹಿಳೆಯ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಆರೋಪಿ ರಾಜೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಗ ಪತ್ನಿ ಲಕ್ಷ್ಮೀಯನ್ನು ಗ್ರಾಮ ಸಮೀಪದ ನೀಲಗಿರಿ ತೋಪಿನ ಜಮೀನಿನ ಬಳಿ ಕೊಲೆ ಮಾಡಿ ದೇಹ ಯಾರಿಗೂ ಸಿಗಬಾರದು ಎಂದು ಕತ್ತಿಯಿಂದ ಮೃತದೇಹವನ್ನು ತುಂಡರಿಸಿ ಗುಂಡಸಂದ್ರ ಗ್ರಾಮದ ಕೆರೆ ಅಂಗಳದ ಗುಂಡಿಯಲ್ಲಿ ಹೂತು ಹಾಕಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದ. ಸರ್ಕಾರಿ ಅಭಿಯೋಜಕ ರಂಗಸ್ವಾಮಿ ವಾದಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.