ADVERTISEMENT

ಸ್ವಾಭಿಮಾನದಿಂದ ಬದುಕುವ ಛಲ ಇರಬೇಕು : ಡಾ.ಮಾಲತಿ ಕೆ.ಹೊಳ್ಳ

ಸ್ವಾಮಿ ವಿವೇಕಾನಂದ ಕನ್ನಡ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಾರ್ಷಿಕೋತ್ಸವ ಹಾಗೂ ಜಾನಪದ ಕಲೋತ್ಸವ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 16:11 IST
Last Updated 25 ಡಿಸೆಂಬರ್ 2019, 16:11 IST
ಶಾಲಾ ವಾರ್ಷಿಕೋತ್ಸವ ಹಾಗೂ ಜಾನಪದ ಕಲೋತ್ಸವ-2019 ಅನ್ನು ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು
ಶಾಲಾ ವಾರ್ಷಿಕೋತ್ಸವ ಹಾಗೂ ಜಾನಪದ ಕಲೋತ್ಸವ-2019 ಅನ್ನು ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ‘ನಮ್ಮ ದೇಹಕ್ಕೆ ಅಂಗವಿಕಲತೆ ಇದೆಯೇ ವಿನಾ ಮನಸ್ಸಿಗೆ ಅಂಗವಿಕಲತೆ ಇಲ್ಲ. ಸಾಧಿಸುವ, ಸ್ವಾಭಿಮಾನದಿಂದ ಬದುಕುವ ಛಲ ಮುಖ್ಯ ಎಂದು ಕ್ರೀಡಾಪಟು ಡಾ.ಮಾಲತಿ ಕೆ.ಹೊಳ್ಳ ಹೇಳಿದರು.

ಅವರು ನಗರದ ಸ್ವಾಮಿ ವಿವೇಕಾನಂದ ಕನ್ನಡ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಾರ್ಷಿಕೋತ್ಸವ ಹಾಗೂ ಜಾನಪದ ಕಲೋತ್ಸವ-2019 ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅಂಗವಿಕಲರ ನೋವು ಏನು ಎನ್ನುವುದರ ಅರಿವು ನನಗಿದೆ. ಗ್ರಾಮೀಣ ಪ್ರದೇಶದಲ್ಲಿನ ಪೋಷಕರಿಗೆ ಅಂಗವಿಕಲ ಮಗು ಜನಿಸಿದರೆ ಅದನ್ನು ಸಾಕಿ ಸಲಹುವುದೇ ದೊಡ್ಡ ಸವಾಲಾಗಿದೆ. ಇಂತಹ ಮಕ್ಕಳನ್ನು ಮಾತೃ ಪ್ರತಿಷ್ಠಾನದ ಮೂಲಕ ದತ್ತು ಪಡೆದು ಅವರಿಗೆ ಅಗತ್ಯ ಇರುವ ಉಚಿತ ಶಿಕ್ಷಣ, ಆರೋಗ್ಯ, ವಸತಿ ಸೌಲಭ್ಯಗಳನ್ನು ಕೊಡಿಸಲಾಗುತ್ತಿದೆ. ನಮ್ಮಲ್ಲಿ ಶಿಕ್ಷಣ ಪಡೆದವರಲ್ಲಿ 15 ಜನ ಪದವಿ ಶಿಕ್ಷಣ ಪಡೆದು ಉತ್ತಮ ಹುದ್ದೆಗಳಿಗೆ ಹೋಗಿರುವುದು ಹೆಮ್ಮೆಯ ಸಂಗತಿ’ ಎಂದರು.

ADVERTISEMENT

‘ಸುತ್ತ ಸುಂದರ ಪ್ರಪಂಚ ಇದೆ. ಈ ಪ್ರಪಂಚದ ಪ್ರವೇಶಕ್ಕೆ ಕಠಿಣ ಪರಿಶ್ರಮ ಅಗತ್ಯ. ಯಶಸ್ಸಿನ ಹಿಂದೆ ನಾವು ಹೋಗಬಾರದು. ನಮ್ಮ ಹಿಂದೆ ಯಶಸ್ಸು ಬರುವಂತೆ ಸಾಧನೆ ಮಾಡಬೇಕು. ಇಂಗ್ಲಿಷ್‌ ಕಲಿತರಷ್ಟೇ ಉನ್ನತ ಸ್ಥಾನಕ್ಕೆ ಹೋಗುತ್ತಾರೆ ಎನ್ನುವುದು ತಪ್ಪು ಕಲ್ಪನೆ. ದೇಶದಲ್ಲಿ ಉನ್ನತ ಹುದ್ದೆಗಳಿಗೆ ಹೋಗಿರುವ ಬಹುತೇಕ ಜನ ಮಾತೃಭಾಷೆಗಳಲ್ಲಿ ಕಲಿತು ಸಾಧನೆ ಮಾಡಿದವರೇ ಹೆಚ್ಚಾಗಿದ್ದಾರೆ’ ಎಂದರು.

ಇವತ್ತಿನ ಮಕ್ಕಳು ಮೊಬೈಲ್‌ ಗೀಳು ಬೆಳೆಸಿಕೊಳ್ಳಲು ಪರೋಕ್ಷವಾಗಿ ಪೋಷಕರೇ ಕಾರಣವಾಗುತ್ತಿದ್ದಾರೆ. ಮಕ್ಕಳ ಮುಂದೆ ಅತಿಯಾಗಿ ಮೊಬೈಲ್‌ ಬಳಸುವುದನ್ನು ಕಡಿಮೆ ಮಾಡಬೇಕು. ಮಕ್ಕಳು ಪೋಷಕರ ನಡವಳಿಕೆಯನ್ನು ಸದಾ ಸೂಕ್ಷ್ಮವಾಗಿ ಗಮನಿಸುತ್ತಾರೆ. ನಮ್ಮ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಬೆಳೆಸಬೇಕು ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಮಾತನಾಡಿ, ಕನ್ನಡ ಮಾಧ್ಯಮದ ಶಾಲೆಗಳಿಗೆ ದಾಖಲಾತಿಗಳೇ ಕಡಿಮೆಯಾಗುತ್ತಿರುವ ಈ ದಿನಗಳಲ್ಲೂ ಜಿಲ್ಲೆಗೆ ಅತಿ ಹೆಚ್ಚು ಜನ ನಗರ ಪ್ರದೇಶದಲ್ಲಿ ದಾಖಲಾಗಿರುವುದು ಶ್ಲಾಘನೀಯ ಎಂದರು.

ಸಭೆಗೂ ಮುನ್ನ ವಿವಿಧ ಜಾನಪದ ಕಲಾ ತಂಡಗಳಿಂದ ಪಟದ ಕುಣಿತ, ತಮಟೆ ವಾಧ್ಯ ಸೇರಿದಂತೆ ವಿವಿಧ ಜನಪದ ಪ್ರಕಾರಗಳ ಪ್ರತಿಭಾ ಪ್ರದರ್ಶನ ನಡೆಯಿತು.

ವಿವಿಧ ಕ್ಷೇತ್ರಗಳ ಸಾಧಕರನ್ನು ಅಭಿನಂದಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಬಿ.ಗುರುದೇವ್‌ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಬೈಯ್ಯಪ್ಪರೆಡ್ಡಿ, ಶಾಲೆಯ ಮುಖ್ಯ ಶಿಕ್ಷಕ ಡಾ.ಹುಲಿಕಲ್‌ ನಟರಾಜ್‌ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.