ADVERTISEMENT

ತಾಯಿಯಿಂದ ದೂರವಿದ್ದು ಬೆಳೆದ ಸಿಂಹದ ಮರಿಗಳು

ಬನ್ನೇರುಘಟ್ಟ ಜೈವಿಕ ಉದ್ಯಾನದ ವೈದ್ಯರ ತಂಡದ ವಿಶೇಷ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 28 ಜುಲೈ 2018, 16:06 IST
Last Updated 28 ಜುಲೈ 2018, 16:06 IST
ಬನ್ನೇರುಘಟ್ಟ ಜೈವಿಕ ಉದ್ಯಾನದ ಸನಾ ಮತ್ತು ಶಂಕರ ಜೋಡಿಗೆ ಜನಿಸಿರುವ ಎರಡು ಮುದ್ದಾದ ಹೆಣ್ಣು ಸಿಂಹದ ಮರಿಗಳು
ಬನ್ನೇರುಘಟ್ಟ ಜೈವಿಕ ಉದ್ಯಾನದ ಸನಾ ಮತ್ತು ಶಂಕರ ಜೋಡಿಗೆ ಜನಿಸಿರುವ ಎರಡು ಮುದ್ದಾದ ಹೆಣ್ಣು ಸಿಂಹದ ಮರಿಗಳು   

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ವೈದ್ಯರ ತಂಡವು ಆಗ ತಾನೇ ಹುಟ್ಟಿದ ಸಿಂಹದ ಮರಿಗಳನ್ನು ತಾಯಿಯಿಂದ ಬೇರ್ಪಡಿಸಿ ಪ್ರತ್ಯೇಕವಾಗಿ ಆಸ್ಪತ್ರೆಯಲ್ಲಿ ಆರೈಕೆ ಮಾಡಿ ಎರಡು ಹೆಣ್ಣು ಮರಿಗಳನ್ನು ಬೆಳೆಸಿರುವುದು ಒಂದು ವಿಶಿಷ್ಟ ದಾಖಲೆಯಾಗಿದೆ.

ಮುದ್ದು ಮುದ್ದಾಗಿರುವ ಮೂರು ತಿಂಗಳ ಮರಿ ಸಿಂಹಿಣಿಗಳು ಉದ್ಯಾನದ ಆಕರ್ಷಣೆಯಾಗಿವೆ. ಜೈವಿಕ ಉದ್ಯಾನದ ಎಂಟು ವರ್ಷದ ಸನಾ ಹಾಗೂ 6 ವರ್ಷದ ಶಂಕರ ಎಂಬ ಸಿಂಹದ ಜೋಡಿಗೆ ಏಪ್ರಿಲ್ ತಿಂಗಳಿನಲ್ಲಿ ನಾಲ್ಕು ಮರಿಗಳು ಹುಟ್ಟಿದ್ದವು. ಮರಿಗಳು ಕಣ್ಣುಬಿಡುವ ಮುಂಚೆಯೇ ತಾಯಿ ಸನಾ ಒಂದು ಮರಿಯನ್ನು ತಿಂದು ಹಾಕಿತು. ಈ ಹಿಂದೆಯೂ ಮರಿಗಳು ಹುಟ್ಟುತ್ತಿದ್ದಂತೆ ಮರಿಗಳನ್ನೇ ತಿಂದು ಹಾಕುವ ಪ್ರವೃತ್ತಿ ಆಕೆಯದಾಗಿತ್ತು.

ಬಳಿಕ ಉದ್ಯಾನದ ಅಧಿಕಾರಿಗಳು ವೈದ್ಯರ ಸಲಹೆ ಪಡೆದು ಮರಿಗಳನ್ನು ತಾಯಿಯಿಂದ ಬೇರ್ಪಡಿಸಿ ಸಿಬ್ಬಂದಿಯೇ ಆರೈಕೆ ಮಾಡುವ ತೀರ್ಮಾನ ಕೈಗೊಂಡರು. ಅದರಂತೆ ಏಪ್ರಿಲ್ 26ರಂದು ಮೂರು ಮರಿಗಳನ್ನು ತಾಯಿಯಿಂದ ಬೇರ್ಪಡಿಸಿ ಉದ್ಯಾನದ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ, ಗಾಯಗೊಂಡಿದ್ದ ಗಂಡು ಮರಿಯೊಂದು ಸತ್ತು ಹೋಯಿತು. ಉಳಿದ ಎರಡು ಮರಿಗಳನ್ನು ಅತ್ಯಂತ ಜತನದಿಂದ ವೈದ್ಯಕೀಯ ಸಿಬ್ಬಂದಿ ಆರೈಕೆ ಮಾಡಿ ಪೋಷಿಸಿದ್ದು ಮರಿಗಳು ಮುದ್ದುಮುದ್ದಾಗಿ ಬೆಳೆಯುತ್ತಿವೆ. ಇದು ಬನ್ನೇರುಘಟ್ಟ ಜೈವಿಕ ಉದ್ಯಾನದ ಸಿಬ್ಬಂದಿಯಲ್ಲಿ ಸಂತಸ ತಂದಿದೆ.

ADVERTISEMENT

ಮರಿಗಳಿಗೆ ನಾಟಿ ಮೇಕೆಗಳ ಹಾಲನ್ನು ನಿಯಮಿತವಾಗಿ ಕುಡಿಸಲಾಯಿತು. ಬೇರಾವುದೇ ಆಹಾರ ನೀಡದೇ ಪೌಷ್ಟಿಕವಾದ ಮೇಕೆ ಹಾಲನ್ನು ನೀಡಿ ಮರಿಗಳನ್ನು ಬೆಳೆಸಲಾಯಿತು. ಎರಡೂವರೆ ತಿಂಗಳ ನಂತರ ಸಣ್ಣ ಚಿಕನ್ ತುಂಡುಗಳನ್ನು ಹಾಲಿನೊಂದಿಗೆ ನೀಡಿ ಮರಿಗಳನ್ನು ಬೆಳೆಸಲಾಗಿದೆ.

ಜೈವಿಕ ಉದ್ಯಾನಗಳ ಇತಿಹಾಸದಲ್ಲಿಯೇ ಕಣ್ಣು ಬಿಡದ ಮರಿಗಳನ್ನು ತಾಯಿಯಿಂದ ಪ್ರತ್ಯೇಕಿಸಿ ಬೆಳೆಸಿರುವುದು ಒಂದು ದಾಖಲೆ ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.