ADVERTISEMENT

ಆದರ್ಶ ಬದುಕು: ಶಿಕ್ಷಕರಿಗೆ ಸಲಹೆ

ಜಿಲ್ಲಾಡಳಿತದಿಂದ ಸರ್ವೆಪಲ್ಲಿ ರಾಧಾಕೃಷ್ಣನ್‌ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 3:00 IST
Last Updated 7 ಸೆಪ್ಟೆಂಬರ್ 2022, 3:00 IST
ದೇವನಹಳ್ಳಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು
ದೇವನಹಳ್ಳಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು   

ದೇವನಹಳ್ಳಿ: ‘ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದುದು. ಗ್ರಾಮೀಣ ಭಾಗದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ವಿಶೇಷ ಸ್ಥಾನಮಾನವಿದೆ. ಅವರ ಮಾತುಗಳನ್ನು ಗ್ರಾಮೀಣರು ಮತ್ತು ವಿದ್ಯಾರ್ಥಿಗಳು ಕೇಳುತ್ತಾರೆ. ಆದ್ದರಿಂದ ಶಿಕ್ಷಕರು ಆದರ್ಶ ಗುಣಗಳಿಂದ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್‌ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದ್ರೋಣಾಚಾರ್ಯ ಮತ್ತು ಏಕಲವ್ಯನ ಗುರು– ಶಿಷ್ಯರ ಸಂಬಂಧದಂತೆ ಶಿಕ್ಷಕರು ವಿದ್ಯಾರ್ಥಿಗಳನ್ನು ಕಾಣಬೇಕಿದೆ. ಗುರು ಮತ್ತು ವಿದ್ಯಾರ್ಥಿಗಳ ನಡುವೆ ಶಾಶ್ವತವಾದ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯಿಂದ ಕೂಡಿದ ಸಂಬಂಧ ಏರ್ಪಡಬೇಕು ಎಂದು ಆಶಿಸಿದರು.

ADVERTISEMENT

‘ನಾನು ಕೂಡ ಶಿಕ್ಷಕರ ಕುಟುಂಬದಿಂದ ಬಂದಿದ್ದು, ನಮ್ಮ ತಂದೆ ಶಿಕ್ಷಕರಾಗಿದ್ದರು. ಆದ್ದರಿಂದ ಶಿಕ್ಷಕರ ಸ್ಥಿತಿಗತಿ ಮತ್ತು ಸಮಸ್ಯೆಗಳ ಪರಿಚಯವಿದೆ. ಹಿಂದಿನ ಕಾಲದ ಶಿಕ್ಷಕರಿಗಿಂತ ಸ್ವಾಭಿಮಾನದಿಂದ ಬದುಕುವಷ್ಟು ಪರಿಸ್ಥಿತಿ ಈಗ ಸುಧಾರಿಸಿದೆ’ ಎಂದು ಹೇಳಿದರು.

ಶಿಕ್ಷಕ ದೇಶದ ರಾಷ್ಟ್ರಪತಿ ಆಗಬಹುದು ಎಂಬುದನ್ನು ರಾಧಾಕೃಷ್ಣನ್ ತೋರಿಸಿಕೊಟ್ಟಿದ್ದಾರೆ. ದೇಶದ ಎಲ್ಲೆಡೆ ಶಿಕ್ಷಕರ ದಿನ ಆಚರಿಸಲಾಗುತ್ತಿದೆ. ದೇಶದಲ್ಲಿ ಶಿಕ್ಷಕರ ಕಾರ್ಯ ಸಾಕಷ್ಟು ಮಹತ್ವ ಪಡೆದಿದೆ. ಈ ಮೊದಲು ಶಿಕ್ಷಣ ಕೇವಲ ಕಲಿಕೆಗೆ ಮಾತ್ರ ಸೀಮಿತವಾಗಿತ್ತು. ಜಾಗತೀಕರಣದ ನಂತರ ವಿಶ್ವದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ವಿಶ್ವ ಮಾನವನಾಗಿ ಬೆಳೆಯಬಹುದಾಗಿದೆ ಎಂದು
ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಸಕ್ತ ಸಾಲಿನಡಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಕಿರಿಯ ಪ್ರಾಥಮಿಕ ಶಾಲಾ ವಿಭಾಗದ 4 ಶಿಕ್ಷಕರು, ಹಿರಿಯ ಪ್ರಾಥಮಿಕ ಶಾಲಾ ವಿಭಾಗದ 4 ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದ 6 ಮುಖ್ಯಶಿಕ್ಷಕರನ್ನು ಸನ್ಮಾನಿಸಲಾಯಿತು.

ದೇವನಹಳ್ಳಿ ಪುರಸಭೆ ಅಧ್ಯಕ್ಷೆ ಡಿ. ಗೋಪಮ್ಮ, ಉಪಾಧ್ಯಕ್ಷೆ ಕೆ. ಗೀತಾ ಶ್ರೀಧರ್, ಜಿಲ್ಲಾಧಿಕಾರಿ ಆರ್. ಲತಾ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರೇವಣಪ್ಪ, ತಹಶೀಲ್ದಾರ್ ಶಿವರಾಜ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವಸಂತಕುಮಾರ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಶ್ರೀಕಂಠ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.