ADVERTISEMENT

ಲಾಕ್ ಡೌನ್ ಆದೇಶ ಪಾಲಿಸಿ: ಎಸ್.ಮಲ್ಲಿಕಾರ್ಜುನ್

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 12:30 IST
Last Updated 10 ಏಪ್ರಿಲ್ 2020, 12:30 IST
ವಿಜಯಪುರದಲ್ಲಿ ಪೊಲೀಸರು ಪಥಸಂಚಲನ ನಡೆಸಿದರು
ವಿಜಯಪುರದಲ್ಲಿ ಪೊಲೀಸರು ಪಥಸಂಚಲನ ನಡೆಸಿದರು   

ವಿಜಯಪುರ: ಲಾಕ್‌ಡೌನ್‌ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಆದೇಶವನ್ನು ಧಿಕ್ಕರಿಸಿ ನಡೆಯುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದು ಖಚಿತ ಎಂದು ಸರ್ಕಲ್ ಇನ್ ಸ್ಪೆಕ್ಟರ್ ಎಸ್.ಮಲ್ಲಿಕಾರ್ಜುನ್ ಹೇಳಿದರು.

ಇಲ್ಲಿ ಗುಡ್‌ಫ್ರೈಡೇ ಅಂಗವಾಗಿ ಸಿಬ್ಬಂದಿಯೊಂದಿಗೆ ಬಜಾರ್ ರಸ್ತೆ, ಗಾಂಧಿ ಚೌಕ, ಚಿಕ್ಕಬಳ್ಳಾಪುರ ರಸ್ತೆ, ಚನ್ನರಾಯಪಟ್ಟಣ ಸರ್ಕಲ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದ ಅವರು, ಸರ್ಕಾರ ಜಾರಿಗೆ ತರುವ ಆದೇಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಯಾವುದೇ ಸಮುದಾಯವರು ಸಹ ಹಬ್ಬಗಳ ಆಚರಣೆಗಳನ್ನು ಸರ್ಕಾರದ ನಿರ್ದೇಶನ ಮೀರಿ ಆಚರಣೆ ಮಾಡಬಾರದು.

ಪ್ರತಿಯೊಬ್ಬರೂ ತಮ್ಮ ಸಮೀಪದ ಅಂಗಡಿಗಳಿಂದ ಅಗತ್ಯ ವಸ್ತುಗಳನ್ನು ಖರೀದಿ ಮಾಡಿಕೊಳ್ಳಬೇಕು. ವಿನಾಕಾರಣ ವಾಹನಗಳಲ್ಲಿ ಸುತ್ತಾಡಬಾರದು. ಜನರು, ಹೊರಗೆ ಸುತ್ತಾಡಬೇಡಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರು ಹೊರಗಡೆ ಬರುವುದನ್ನು ನಿಲ್ಲಿಸಬೇಕಾಗಿದೆ.

ADVERTISEMENT

ಪ್ರತಿಯೊಬ್ಬರ ಪ್ರಾಣ ಅತಿಮುಖ್ಯವಾಗಿದ್ದು, ತಮ್ಮ ಪ್ರಾಣ, ಕುಟುಂಬಸ್ಥರ ಪ್ರಾಣಗಳ ಬಗ್ಗೆ ಚಿಂತಿಸಬೇಕಾಗಿದೆ. ಯುವಜನರು ಹುಡುಗಾಟವನ್ನು ಬಿಟ್ಟು ದೇಶಕ್ಕಾಗಿ ಚಿಂತಿಸಬೇಕು ಎಂದರು.

ಸಬ್ ಇನ್‌ಸ್ಪೆಕ್ಟರ್ ಡಿ.ಮಂಜುನಾಥ್ ಮಾತನಾಡಿ, ‘ದೇಶದ ಕಾನೂನು ಪಾಲನೆ ನಮ್ಮೆಲ್ಲರ ಕರ್ತವ್ಯ. ನಮ್ಮ ಪ್ರಾಣ ರಕ್ಷಣೆ ಮಾತ್ರವಲ್ಲದೆ ಇತರರ ಪ್ರಾಣರಕ್ಷಣೆಯ ಹೊಣೆಗಾರಿಕೆಯೂ ನಮ್ಮದು. ಪ್ರಾರ್ಥನೆ ಮುಂತಾದ ಕಾರ್ಯಕ್ರಮಗಳಿಗೆ ಜನಜಂಗುಳಿ ಸೇರಬಾರದು. ಯಾವುದೇ ಧರ್ಮದವರಿರಲಿ ಪ್ರಾರ್ಥನೆ ಮಾಡಲು ಇರುವ ಸ್ಥಳದಲ್ಲೆ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.