ADVERTISEMENT

ಸಾರ್ವಜನಿಕರು ಸಹಕರಿಸದಿದ್ದರೆ ಲಾಕ್‌ ಡೌನ್‌ ಯಥಾಸ್ಥಿತಿ 

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 13:45 IST
Last Updated 7 ಏಪ್ರಿಲ್ 2020, 13:45 IST
ಕೊರೊನಾ ಕಡಿವಾಣಕ್ಕೆ ಸಲಹೆ ನೀಡಿದ ಸಿಇಒ ಎನ್.ಎಂ.ನಾಗರಾಜ್ 
ಕೊರೊನಾ ಕಡಿವಾಣಕ್ಕೆ ಸಲಹೆ ನೀಡಿದ ಸಿಇಒ ಎನ್.ಎಂ.ನಾಗರಾಜ್    

ದೇವನಹಳ್ಳಿ: ಸರ್ಕಾರ ಕೊರೊನಾ ವೈರಸ್ ತಡೆಗಟ್ಟಲು ಲಾಕ್ ಡೌನ್ ಮಾಡಿ ಶತಪ್ರಯತ್ನ ಮಾಡುತ್ತಿದೆ. ಆದರೆ, ಸಾರ್ವಜನಿಕರು ಸಹಕಾರ ನೀಡದಿದ್ದರೆ ಲಾಕ್ ಡೌನ್ ಯಥಾಸ್ಥಿತಿ ಮುಂದುವರಿಯುವುದು ಅನಿರ್ವಾಯವಾಗಲಿದೆ ಎಂದು ಸಿಇಒ ಎನ್.ಎಂ.ನಾಗರಾಜ್ ಹೇಳಿದರು.

ಇಲ್ಲಿನ ಕನ್ನಮಂಗಲ, ಜಾಲಿಗೆ ಮತ್ತು ಅರದೇಶನಹಳ್ಳಿ ಗ್ರಾಮಗಳಿಗೆ ತೆರಳಿ ಸ್ಥಳೀಯ ಸಂಸ್ಥೆಗಳಿಗೆ ಉಚಿತ ಸ್ಯಾನಿಟೈಜರ್ ವಿತರಣೆ ಮತ್ತು ಕೊರೊನಾ ವೈರಸ್ ಕಡಿವಾಣ ಕುರಿತು ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಸ್ಥಳೀಯ ಆರೋಗ್ಯ ಸಹಾಯಕರಿಗೆ ಮತ್ತು ಸಿಬ್ಬಂದಿಗೆ ಮಾಹಿತಿ ನೀಡಿ ಮಾತನಾಡಿದರು.

ಜಿಲ್ಲೆಯ 105 ಗ್ರಾಮ ಪಂಚಾಯಿತಿ, ಎರಡು ನಗರಸಭೆ, ಮೂರು ಪುರಸಭೆಗೆ ಸ್ಯಾನಿಟೈಜರ್‌ ವಿತರಿಸಲಾಗಿದೆ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ಮಾತನಾಡಿ, ನಗರ ಪ್ರದೇಶದಲ್ಲಿ ಲಾಕ್ ಡೌನ್ ಯಶಸ್ವಿಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿನ ಸಾರ್ವಜನಿಕರು ನಿರ್ಭಯವಾಗಿ ಸಂಚರಿಸುತ್ತಿರುವುದು ದಿಗಿಲು ಹುಟ್ಟಿಸಿದೆ. ಕೊರೊನಾ ಗ್ರಾಮೀಣ ಭಾಗದಲ್ಲಿ ಉಲ್ಬಣಿಸಿದರೆ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಲಿದೆ ಎಂಬುದನ್ನು ಸ್ಥಳೀಯರು ಅರ್ಥ ಮಾಡಿಕೊಂಡು ನಿಗದಿಪಡಿಸಿರುವ ಲಾಕ್ ಡೌನ್ ಅವಧಿಯವರೆಗೆ ಮನೆಯಿಂದ ಹೊರ ಬಾರದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.

ಕನ್ನಮಂಗಲ, ಅಣ್ಣೇಶ್ವರ ಮತ್ತು ಜಾಲಿಗೆ ಗ್ರಾಮ ಪಂಚಾಯಿತಿಗಳು ವಿಮಾನ ನಿಲ್ದಾಣಕ್ಕೆ ಸಮೀಪ ಇವೆ. ಈ ಪಂಚಾಯಿತಿಗಳು ಬೆಂಗಳೂರು ನಗರಕ್ಕೆ ಹೊಂದಿಕೊಂಡಿವೆ. ಕಟ್ಟುನಿಟ್ಟಿನ ಪಾಲನೆ ಅಗತ್ಯ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.