ದೊಡ್ಡಬಳ್ಳಾಪುರ: ಲೋಕಾಯುಕ್ತದಲ್ಲಿ ಸುಳ್ಳು ದೂರು ದಾಖಲಿಸಿ ನ್ಯಾಯಾಲಯದ ಸಮಯ ವ್ಯರ್ಥ ಮಾಡಿದರೆ ಶಿಕ್ಷೆಯಾಗಲಿದೆ. ಲೋಕಾಯುಕ್ತದ ನಿಯಮಗಳನ್ನು ಜನರು ಅರಿತು ದೂರುಗಳನ್ನು ದಾಖಲಿಸುವ ಮೂಲಕ ನ್ಯಾಯ ಪಡೆಯಬೇಕು ಎಂದು ಅಧಿಕಾರಿಗಳಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.
ದೇವನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ಲೋಕಾಯುಕ್ತ ಸಂಸ್ಥೆಯಲ್ಲಿ ಬಾಕಿ ಇರುವ ದೊಡ್ಡಬಳ್ಳಾಪುರ ತಾಲ್ಲೂಕಿನ ದೂರು ವಿಚಾರಣೆ ಹಾಗೂ ಪ್ರಕರಣ ವಿಲೇವಾರಿ ಸಭೆಯಲ್ಲಿ ಮಾತನಾಡಿದರು.
ಸುಳ್ಳು ದೂರುಗಳಿಂದ ಅನ್ಯಾಯಕ್ಕೆ ಒಳಗಾದವರ ದೂರುಗಳ ವಿಲೇವಾರಿ ವಿಳಂಬವಾಗುತ್ತಿವೆ. ಇದರಿಂದ ನಿಷ್ಠಾವಂತ ಅಧಿಕಾರಿಗಳು ಕೆಲಸ ಕಾರ್ಯಗಳಿಗೆ ತೊಂದರೆ ಆಗುತ್ತಿವೆ. ಸುಳ್ಳು ದೂರು ದಾಖಲಿಸಿದರೆ ನಿರ್ದಾಕ್ಷಿಣ್ಯವಾಗಿ ಶಿಕ್ಷೆ ನೀಡಲಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರಿ ತೋಪನ್ನು ಖಾಸಗಿ ವ್ಯಕ್ತಿಯೊಬ್ಬರ ಹೆಸರಿಗೆ ಕರಾರು ನೋಂದಣಿ ಮಾಡಿಕೊಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಉಪನೋಂದಣಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಉಪಲೋಕಾಯುಕ್ತ ನ್ಯಾಯಮೂರ್ತಿಗಳು, ಬೇರೊಬ್ಬರ ಜಿಪಿಎ ಅಥವಾ ನೋಂದಣಿ ಮಾಡಿಕೊಟ್ಟಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ತಿಯನ್ನು ನೋಂದಣಿ ಮಾಡಿರುವ ಆಸ್ತಿಗಳನ್ನು ಸರ್ವೇ ಮಾಡಿ ವರದಿ ನೀಡುವಂತೆ ಮತ್ತು ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎನ್.ಅನುರಾಧ, ಎಸ್‌ಪಿ ಸಿ.ಕೆ. ಬಾಬಾ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಉಪನಿಬಂಧಕ ಎನ್.ವಿ. ಅರವಿಂದ್, ಜಿಲ್ಲಾ ಮಟ್ಟದ ಅಧಿಕಾರಿಗಳು, ದೂರುದಾರರು ಇದ್ದರು.
ಬದಲಾದ ದೂರುದಾರರು: ಗೊಂದಲ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ವಿಚಾರಣೆ ವೇಳೆ ದೂರುದಾರರ ಹೆಸರು ಕೂಗಿದಾಗ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದ ಅದೇ ಹೆಸರಿನ ಮಹಿಳೆ ಹಾಜರಾಗಿ ವಾದ ಮಂಡಿಸಿದರು. ಆದರೆ ದೂರಿನಲ್ಲಿ ಇರುವ ಮಾಹಿತಿಗೂ ವಾದ ಮಾಡುತ್ತಿದ್ದ ಮಹಿಳೆ ಹೇಳುತ್ತಿದ್ದ ಮಾಹಿತಿಗೂ ಹೊಂದಾಣಿಕೆಯಾಗದೆ ಅಧಿಕಾರಿಗಳು ಐದಾರು ನಿಮಿಷಗಳ ಕಾಲ ದೂರಿನಲ್ಲಿನ ದಾಖಲೆ ಪತ್ರಗಳನ್ನು ತಿರುವಿ ಹಾಕಿದರು. ವಾದ ಮಾಡುತ್ತಿರುವ ಮಹಿಳೆಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎಂದು ನಂತರ ತಿಳಿಯಿತು. ತನ್ನ ಹೆಂಡತಿಯ ಹೆಸರಿನಲ್ಲಿ ದೂರು ದಾಖಲಿಸಿ ವಿಚಾರಣೆಗೆ ಹಾಜರಾದ ವ್ಯಕ್ತಿಗೆ ಎಚ್ಚರಿಕೆ ನೀಡಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ‘ಬೇರೊಬ್ಬರ ಹೆಸರಿನಲ್ಲಿ ದೂರು ದಾಖಲಿಸಲು ದೂರುದಾರಾರಿಂದ ಲಿಖಿತ ಅನುಮತಿ ಪಡೆಯಬೇಕು. ಇದು ಲೋಕಾಯುಕ್ತಕ್ಕೆ ಮಾತ್ರ ಅನ್ವಯ ಅಲ್ಲ ಎಲ್ಲಾ ಹಂತದ ನ್ಯಾಯಾಲಯಗಳಿಗೂ ಅನ್ವಯವಾಗಲಿದೆ. ಈ ಬಗ್ಗೆ ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.