ADVERTISEMENT

ನಷ್ಟದ ರೈತರಿಗೆ ಆತ್ಮಸ್ಥೈರ್ಯ ತುಂಬಿ: ಶರತ್

ಹೊಸಕೋಟೆ ತಾಲ್ಲೂಕಿನ ಕೆಲ ರೈತರ ತೋಟಗಳಿಗೆ ಭೇಟಿ ನೀಡಿದ ಶಾಸಕ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 16:44 IST
Last Updated 20 ಏಪ್ರಿಲ್ 2020, 16:44 IST
ಹೊಸಕೋಟೆ ತಾಲ್ಲೂಕಿನಲ್ಲಿ ನಷ್ಟಕ್ಕೆ ಒಳಗಾಗಿರುವ ರೈತರನ್ನು ಶಾಸಕ ಶರತ್ ಬಚ್ಚೇಗೌಡ, ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿದರು
ಹೊಸಕೋಟೆ ತಾಲ್ಲೂಕಿನಲ್ಲಿ ನಷ್ಟಕ್ಕೆ ಒಳಗಾಗಿರುವ ರೈತರನ್ನು ಶಾಸಕ ಶರತ್ ಬಚ್ಚೇಗೌಡ, ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿದರು   

ಸೂಲಿಬೆಲೆ: ಹೊಸಕೋಟೆ ತಾಲ್ಲೂಕಿನಲ್ಲಿ ಹೂ, ತರಕಾರಿ, ಹಣ್ಣುಗಳು ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಕೊರೊನಾ ‘ಲಾಕ್ ಡೌನ್’ನಿಂದ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಹಾಗೂ ಬೇಡಿಕೆ ಇಲ್ಲದಿರುವುದರಿಂದ ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ರೈತರನ್ನು ಭೇಟಿ ಮಾಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಕುಂಬಳಹಳ್ಳಿ, ಉಪ್ಪಾರಹಳ್ಳಿ, ಸೂಲಿಬೆಲೆ ಹೋಬಳಿ ಬೆಟ್ಟಹಳ್ಳಿ ಸೇರಿದಂತೆ ಅನೇಕ ಭಾಗದ ರೈತರನ್ನು ಭೇಟಿ ಮಾಡಿದರು. ತಾಲ್ಲೂಕಿನಲ್ಲಿ ರೈತರಿಗೆ ಆಗಿರುವ ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುವುದು. ರೈತರಿಗೆ ಸರ್ಕಾರದಿಂದ ಪರಿಹಾರ ನೀಡುವ ಉದ್ದೇಶದಿಂದ ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ರೈತರ ತೋಟಗಳಿಗೆ ಭೇಟಿ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.

ತೋಟಗಾರಿಕೆ ಬೆಳೆಗಳಾದ ಟೊಮೆಟೊ, ಬೀನ್ಸ್, ಆಲೂಗಡ್ಡೆ, ದೊಣ್ಣೆ ಮೆಣಸಿನಕಾಯಿ ಇತರ ತರಕಾರಿ ಸೇರಿದಂತೆ 3450 ಹೆಕ್ಟೇರ್ ಪ್ರದೇಶದಲ್ಲಿ ಮಾವು, ಸೀಬೆ, ದ್ರಾಕ್ಷಿ, ಇನ್ನಿತರ ಹಣ್ಣಿನ ಬೆಳೆಗಳನ್ನು 3800 ಹೆಕ್ಟೇರ್, ಗುಲಾಬಿ, ಸೇವಂತಿಗೆ, ಚೆಂಡು ಹೂ ಇನ್ನಿತರ ಹೂವಿನ ಬೆಳೆಗಳನ್ನು 1740 ಹೆಕ್ಟೇರ್ ವಿಸ್ತೀರ್ಣ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ರೈತರಿಗೆ ಆಗಿರುವ ನಷ್ಟದ ಬಗ್ಗೆ ತೋಟಗಾರಿಕೆ ಸಚಿವರು ಹಾಗೂ ರೇಷ್ಮೆ ಸಚಿವರಿಗೆ ವರದಿ ನೀಡಿ ಪರಿಹಾರ ಒದಗಿಸಲು ಮನವಿ ಸಲ್ಲಿಸಲಾಗುವುದು ಎಂದರು.

ADVERTISEMENT

ಬೆಟ್ಟಹಳ್ಳಿ ರೈತ ಶ್ರೀನಿವಾಸ್ ಮಾತನಾಡಿ, ತರಕಾರಿ ಕೊಳ್ಳುವ ಕೆಲವು ಸಂಸ್ಥೆಗಳು ಗುಣಮಟ್ಟದ ಹೆಸರಿನಲ್ಲಿ ಶೇಕಡ 80ರಷ್ಟು ಬೆಳೆ ತಿರಸ್ಕರಿಸುತ್ತಾರೆ ಎಂದು ಶಾಸಕರ ಗಮನಕ್ಕೆ ತಂದರು. ಮತ್ತೊಬ್ಬ ರೈತ ಮಾವಿನ ಫಸಲು ಇಳುವರಿ ಬಾರದಿರುವ ಬಗ್ಗೆ ಹಾಗೂ ನೀಲಗಿರಿ ಮರಗಳನ್ನು ತೆರವುಗೊಳಿಸಲು ಮನವಿ ಮಾಡಿಕೊಂಡರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಶಾಂತ್ ಮಾತನಾಡಿ, ಹೂವು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಬೇಡಿಕೆ ಇಲ್ಲದಂತಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದರು.

ತೋಟಗಾರಿಕೆ ಇಲಾಖೆಯ ಸೋಮಶೇಖರ್, ಮುನಿಸ್ವಾಮಿ.ಡಿ, ಜಿಲಾನಿ ಪಾಷ, ಮುಖಂಡ ಸಿ.ಮುನಿಯಪ್ಪ, ರೈತ ಬೆಟ್ಟಹಳ್ಳಿ ಶ್ರೀನಿವಾಸ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.