ADVERTISEMENT

‘ವಿದ್ಯಾರ್ಥಿ ವೇತನ ಸದ್ಬಳಕೆ ಮಾಡಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:44 IST
Last Updated 5 ಜುಲೈ 2022, 4:44 IST
ವಿಜಯಪುರದ ನಗರೇಶ್ವರ ಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ವಿದ್ಯಾರ್ಥಿಗಳಿಗೆ ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ಯುವಕ ಸಂಘ ಹಾಗೂ ಕೋರಮಂಗಲ ರುದ್ರಪ್ಪ ಟ್ರಸ್ಟ್‌ನಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು
ವಿಜಯಪುರದ ನಗರೇಶ್ವರ ಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ವಿದ್ಯಾರ್ಥಿಗಳಿಗೆ ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ಯುವಕ ಸಂಘ ಹಾಗೂ ಕೋರಮಂಗಲ ರುದ್ರಪ್ಪ ಟ್ರಸ್ಟ್‌ನಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು   

ವಿಜಯಪುರ:ಪಟ್ಟಣದ ನಗರೇಶ್ವರಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ಯುವಕ ಸಂಘ ಹಾಗೂ ಕೋರಮಂಗಲ ರುದ್ರಪ್ಪ ಟ್ರಸ್ಟ್‌ನಿಂದ 40 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ ನಡೆಯಿತು.

ಕರ್ನಾಟಕ ರಾಜ್ಯ ಸಹಕಾರ ಮಂಡಳಿಯ ಸಲಹೆಗಾರ ಪಿ. ರುದ್ರಪ್ಪ ಮಾತನಾಡಿ, ‘ನಮ್ಮ ಸಮುದಾಯಕ್ಕೆ ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ. ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರು ನಮಗೆ ನಗರ್ತರ ಪೇಟೆ ಸ್ಥಾಪನೆ ಮಾಡಿಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಭವ್ಯವಾದ ಕಟ್ಟಡ ನಿರ್ಮಿಸಲು ಅಂದಿನ ವಡಿಗೇನಹಳ್ಳಿ (ಈಗಿನ ವಿಜಯಪುರ)ಯ ದಾನಿಗಳು ಸಹಾಯ ಹಸ್ತ ನೀಡಿದ್ದಾರೆ’ ಎಂದು ಸ್ಮರಿಸಿದರು.

ಸಮುದಾಯದವರು ಸಂಘಟಿತರಾಗಿದ್ದಾಗ ಇಂತಹ ಉತ್ತಮ ಕೆಲಸಗಳನ್ನು ಮಾಡಲು ಸಹಕಾರಿಯಾಗುತ್ತದೆ. ನಮ್ಮ ಜನಾಂಗದ ರಾಜಧಾನಿ ವಿಜಯಪುರವಾಗಿದೆ. ಪ್ರಥಮವಾಗಿ ಎನ್. ಚನ್ನಪ್ಪ 1940ರಲ್ಲಿ ಯುವಕ ಸಂಘವನ್ನು ಪಟ್ಟಣದಲ್ಲಿ ಸ್ಥಾಪಿಸಿದರು. ಇಲ್ಲಿನ ಮಹಾದಾನಿಗಳಾದ ಅಂಕಪಟ್ಟಿ ನಂಜುಂಡಪ್ಪ, ಸಾಹುಕಾರ್ ಚಿಕ್ಕವೀರಣ್ಣ, ವಡಿಗೇನಹಳ್ಳಿ ಚೆನ್ನಮ್ಮ ಅವರನ್ನು ಸ್ಮರಿಸುವಂತಹ ಕಾರ್ಯವಾಗಬೇಕು. ಯುವಕರು ಹಿಂದಿನ ಪರಂಪರೆ ಉಳಿಸಿಕೊಂಡು ಬರುತ್ತಿರುವುದು ಸಂತಸ ತಂದಿದೆ ಎಂದರು.

ADVERTISEMENT

ಯುವಕ ಸಂಘದ ಅಧ್ಯಕ್ಷ ಬಿ.ಸಿ. ಸಿದ್ದರಾಜು ಮಾತನಾಡಿ, ತಂದೆ– ತಾಯಿ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಬೇಕು. ಅವರಲ್ಲಿ ಗುರು-ಹಿರಿಯರ ಕುರಿತು ಗೌರವ ಭಾವನೆ ಬೆಳೆಸಬೇಕು. ವಿದ್ಯಾರ್ಥಿಗಳಿಗೆ ಸಿಗುವಂತಹ ವಿದ್ಯಾರ್ಥಿ ವೇತನವನ್ನು ಮುಂದಿನ ಶೈಕ್ಷಣಿಕ ಪ್ರಗತಿಗೆ ಉಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಕ್ಷಣದಿಂದ ಮಾತ್ರವೇ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಸಾಧ್ಯ. ವಿದ್ಯಾರ್ಥಿಗಳು ಕೂಡ ಹೆಚ್ಚು ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು ಎಂದರು.

ಕೋರಮಂಗಲ ರುದ್ರಪ್ಪ ಟ್ರಸ್ಟ್ ಪದಾಧಿಕಾರಿಗಳಾದ ಪಿ. ಮುರಳೀಧರ್ ಮಾತನಾಡಿ, ಕೋರಮಂಗಲ ರುದ್ರಪ್ಪ ತಮ್ಮ ಮನೆಯನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಾನ ಮಾಡಿದರು. ತದನಂತರ 1934ರಲ್ಲಿ ಕೋರಮಂಗಲ ರುದ್ರಪ್ಪ ಟ್ರಸ್ಟ್ ರಚಿಸಿದರು. 1970ರಲ್ಲಿ ಒಬ್ಬ ವಿದ್ಯಾರ್ಥಿಗೆ ವಿದ್ಯಾರ್ಥಿ ವೇತನವಾಗಿ ₹ 10 ಮತ್ತು ನಿರ್ಗತಿಕ ವಿಧವಾ ವೇತನ ₹ 10 ನೀಡುತ್ತಿದ್ದರು ಎಂದು ಸ್ಮರಿಸಿದರು.

ಸಂಘದ ಅಧ್ಯಕ್ಷ ಬಿ.ಸಿ. ಸಿದ್ದರಾಜು ಅಧ್ಯಕ್ಷತೆವಹಿಸಿದ್ದರು. ಗೌರವಾಧ್ಯಕ್ಷ ಸಿ. ಭಾಸ್ಕರ್, ಕಾರ್ಯದರ್ಶಿ ಬಿ. ಅವಿನಾಶ್, ಖಜಾಂಚಿ ಎನ್. ರಾಘವೇಂದ್ರ, ಸಹ ಕಾರ್ಯದರ್ಶಿ ಎ. ಮಧು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.