
ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಮಾವಿನ ಗಿಡಗಳಲ್ಲಿ ಹೆಚ್ಚು ಹೂ ಬಿಟ್ಟಿರುವುದು, ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.
ತಾಲ್ಲೂಕಿನಲ್ಲಿ 1,250 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಿದೆ. ಮುಂಗಾರಿನಲ್ಲಿ ಉತ್ತಮ ಮಳೆ ಆಗಿದ್ದು, ಮಾವಿಗೆ ಬೇಕಾದ ಪೂರಕ ವಾತಾವರಣವಿದೆ. ಮುಂದೆ ಯಾವುದೇ ರೀತಿಯ ಪ್ರಕೃತಿ ವಿಕೋಪ ಆಗದಿದ್ದರೆ ಮಾವಿನ ಹೇರಳ ಫಸಲು ನಿರೀಕ್ಷಿಸಬಹುದು ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ಎಂ.ವಿಜಯಕುಮಾರ್ ಹೇಳಿದರು.
ಬಾದಾಮಿ ಇಲ್ಲಿನ ಪ್ರಮುಖ ತಳಿ. ಶೇ 80ರಷ್ಟು ಬೆಳೆಗಾರರು ಈ ತಳಿಯನ್ನು ನೆಟ್ಟಿದ್ದಾರೆ. ಉಳಿದಂತೆ ಮಲ್ಲಿಕಾ, ರಸಪುರಿ, ತೋತಾಪುರಿ ತಳಿಗಳಿವೆ. ರೈತರ ಸಾಧ್ಯವಾದಷ್ಟು ಸ್ಥಳೀಯವಾಗಿಯೇ ತೋಟದ ಲೆಕ್ಕದಲ್ಲಿ ಹೂ ಕಚ್ಚುವ ಹಂತದಲ್ಲಿಯೇ ಮಾರಾಟ ಮಾಡುತ್ತಾರೆ. ಇನ್ನು ಹೆಚ್ಚಿನ ಆಸಕ್ತಿ ಹಾಗೂ ಲಾಭದ ನಿರೀಕ್ಷೆಯ ರೈತರು ಹಾಪ್‌ಕಾಮ್ಸ್ ಮಳಿಗೆಗಳು, ಮಾವು ಮೇಳಗಳು ಹಾಗೂ ಮಾವು ಅಭಿವೃದ್ಧಿ– ಮಾರುಕಟ್ಟೆ ನಿಗಮ ಅಡಿಯಲ್ಲಿ ಮಾರಾಟ ಮಾಡುತ್ತಾರೆ. ರಾಸಾಯನಿಕ ಬಳಸಿ ಕೃತಕವಾಗಿ ಹಣ್ಣು ಮಾಡಿಸುವುದಕ್ಕಿಂತ, ನೈಸರ್ಗಿಕವಾಗಿ ಹಣ್ಣು ಮಾಡಿಸಿದರೆ ಉತ್ತಮ ಬೆಲೆ ಸಿಗುತ್ತದೆ ಎಂದು ತಿಳಿಸಿದರು.
ಮಾವು ಬೆಳಗಾರರು ಪ್ರಕೃತಿ ವಿಕೋಪದಿಂದಾಗುವ ತೊಂದರೆಗೆ ಪರಿಹಾರ ಪಡೆಯಲು ಬೆಳೆ ವಿಮೆ ಮಾಡಿಸಿಕೊಂಡರೆ ಒಳ್ಳೆಯದು. ಕಳೆದ ಬಾರಿ ತಾಲ್ಲೂಕಿನಲ್ಲಿ ಸುಮಾರು 4,000 ಟನ್ ಮಾವು ಬಂದಿತ್ತು. ಈ ಬಾರಿ 6,500 ಟನ್ ಬರುವ ನೀರಿಕ್ಷೆ ಇದೆ ಎಂದು ಹೇಳಿದರು.
ಮಾವಿನ ಗಿಡಗಳಿಗೆ ಬೆಳೆ ಹಾಳಾಗದಂತೆ ತಡೆಯಲು ರಾಸಾಯನಿಕ ಔಷಧಿ ಸಿಂಪಡಣೆ ಮಾಡುತ್ತಾರೆ. ಇದರಿಂದ ಕೆಟ್ಟ ವಾಸನೆ ಜೊತೆಗೆ ಅಕ್ಕಪಕ್ಕದ ಮನೆ ತೋಟಗಳಿಗೂ ಹಾನಿಯಾಗುತ್ತಿದೆ’ ಎಂದು ರೈತ ಶಿವಕುಮಾರ್ ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.