ADVERTISEMENT

ಗ್ರಾಹಕರಿಗೆ ತಪ್ಪಲಿಲ್ಲ ಸಂತೆ ಕಿರಿಕಿರಿ !

ಶತಮಾನದ ಬುಧವಾರದ ತರಕಾರಿ ಮಾರುಕಟ್ಟೆಗಿಲ್ಲ ಜಾಗ, ಎಲ್ಲೆಲ್ಲೂ ದುರ್ವಾಸನೆ ನಡುವೆ ಖರೀದಿ

ವಡ್ಡನಹಳ್ಳಿ ಬೊಜ್ಯನಾಯ್ಕ
Published 17 ಜುಲೈ 2018, 16:14 IST
Last Updated 17 ಜುಲೈ 2018, 16:14 IST
ದೇವನಹಳ್ಳಿಯ ಹಳೆ ಬಸ್ ನಿಲ್ದಾಣದ ಬಳಿ ವಾರದ ಸಂತೆಯಲ್ಲಿ ಗ್ರಾಹಕರ ಪರದಾಟ
ದೇವನಹಳ್ಳಿಯ ಹಳೆ ಬಸ್ ನಿಲ್ದಾಣದ ಬಳಿ ವಾರದ ಸಂತೆಯಲ್ಲಿ ಗ್ರಾಹಕರ ಪರದಾಟ   

ದೇವನಹಳ್ಳಿ: 'ಗಾಡಿ ಇಲ್ಲಿ ನಿಲ್ಲಿಸಬೇಡ, ವ್ಯಾಪಾರ ಮಾಡುತ್ತಿರುವುದು ಕಾಣಲ್ವ, ಆ ಕಡೆ ಸರಿದುಕೊಳ್ಳಮ್ಮ , ಏಯ್ ಆ ಕಡೆ ಹೋಗಬೇಡ ಲಾರಿ ಬರ್ತೈತೆ ನೋಡು, ಏನ್ ಸಂತೆನೋ ಇದು' ಎಂದು ಶಪಿಸಿತ್ತಲೇ ಬರುವ ಗ್ರಾಹಕರಿಗೆ ವಾರದ ಸಂತೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಕಿರಿಕಿರಿ.

ಇದು ದೇವನಹಳ್ಳಿ ತಾಲ್ಲೂಕು ಕೇಂದ್ರದಲ್ಲಿನ ಬುಧವಾರದ ಸಂತೆಯ ಕತೆ– ವ್ಯಥೆ.

ಅರ್ಧ ಶತಮಾನ ಕಳೆದಿರುವ ಪುರಸಭೆ ಈವರೆಗೂ ತನ್ನ ವ್ಯಾಪ್ತಿಯಲ್ಲಿ ಸಂತೆಗಾಗಿ ಸ್ವಂತ ಜಾಗ ಪಡೆದುಕೊಂಡಿಲ್ಲ. ದೇವನಹಳ್ಳಿಯಲ್ಲಿ ಕನಿಷ್ಠ ದಿನನಿತ್ಯ ಮಾರುಕಟ್ಟೆ ಮಳಿಗೆಗೆ ಜಾಗವಿಲ್ಲ. ರಸ್ತೆಯ ಬದಿಗಳೇ ಸಂತೆಗೆ ಕಾಯಂ ಜಾಗ ಎನಿಸಿವೆ. 50 ವರ್ಷಗಳಿಂದ ಆಯ್ಕೆಗೊಳ್ಳುತ್ತಿರುವ ಪುರಸಭೆ ಸದಸ್ಯರಿಗೆ ಇಚ್ಛಾಶಕ್ತಿ ಇಲ್ಲ ಎಂಬ ಆರೋಪಗಳು ಎಲ್ಲೆಡೆ ಕೇಳಿಬರುತ್ತಿವೆ.

ADVERTISEMENT

ಸಾರ್ವಜನಿಕ ಸಂತೆಗಾಗಿ ಪುರಸಭೆ ಮತ್ತು ಕಂದಾಯ ಇಲಾಖೆ ಈವರೆಗೆ ಕನಿಷ್ಠ ಒಂದು ಎಕರೆ ಜಾಗ ಗುರುತಿಸಿಲ್ಲ. ಪ್ರಸ್ತುತ ನಡೆಯುವ ವಾರದ ಸಂತೆ ಜಾಗ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ಒಳಪಟ್ಟಿರುವ ಮುಜರಾಯಿ ಇಲಾಖೆಗೆ ಸೇರಿದೆ. ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಅಂಗಡಿಗಳಿಗೆ ₹ 5 ರಿಂದ ₹ 25 ರವರೆಗೆ ಸುಂಕವನ್ನು ಪುರಸಭೆ ವತಿಯಿಂದ ವಸೂಲಿ ಮಾಡುತ್ತಾರೆ. ಸಂತೆಯ ಒಳಭಾಗದಲ್ಲಿ ಮಾರಾಟ ಮಾಡುವ ಪ್ರತಿ ಅಂಗಡಿಗಳಿಂದ ಶ್ರೀ ರಂಗನಾಥ ಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯರು ಹಣ ಪಡೆಯುತ್ತಾರೆ. ಊರ ಹಬ್ಬದಲ್ಲಿ ಉಂಡೋನೆ ಜಾಣ ಎಂಬಂತಾಗಿದೆ ಸಂತೆಯ ಪರಿಸ್ಥಿತಿ ಎಂದು ದೂರುತ್ತಾರೆ ಸ್ಥಳೀಯ ಮುಖಂಡ ರಮೇಶ್ ಬಾಬು.

ನಗರದ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಪ್ರತಿಷ್ಠಿತ ಕಂಪನಿಗಳು ನಿರ್ಮಾಣ ಮಾಡುತ್ತಿರುವ ಅಪಾರ್ಟ್‌ಮೆಂಟ್‌ಗಳ ಕಟ್ಟಡ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ. ಅವರೆಲ್ಲರಿಗೆ ಮತ್ತು ನಗರದ ಸ್ಥಳೀಯರಿಗೆ ಬುಧವಾರ ಸಂತೆ ಅತಿ ಮುಖ್ಯ. ಸಂತೆ ದಿನ ಮಧ್ಯಾಹ್ನದ ನಂತರ ಹೆಜ್ಜೆ ಇಡುವುದೇ ಕಷ್ಟಕರ. ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್ ಜತೆಗೆ ವಿಪರೀತ ಜನಸಂದಣಿ ಮಧ್ಯೆ ಮಹಿಳೆಯರು, ವಯೋವೃದ್ಧರು, ಜನಸಮೂಹದ ಇಕ್ಕಟ್ಟಿನ ನಡುವೆ ನುಸುಳಿಕೊಂಡೇ ಸಾಗಬೇಕು. ಈ ವ್ಯವಸ್ಥೆ ಯಾವಾಗ ಬದಲಾಗುತ್ತೆ ದೇವರೇ ಕಾಪಾಡಬೇಕು ಎನ್ನುತ್ತಾರೆ ಸಂತೆಗೆ ಬಂದಿದ್ದ ಜಯಮ್ಮ.

ಸಣ್ಣ ಪ್ರಮಾಣದಲ್ಲಿ ಮಳೆ ಬಂದರೆ ಸಂತೆಯ ಸ್ಥಿತಿ ಅಯೋಮಯ. ಶಿಸ್ತಿನ ಮಾರಾಟವಿಲ್ಲದ ಸಂತೆಯಲ್ಲಿ ಕೊಳೆತ ತರಕಾರಿ ಮತ್ತು ಕೆಸರಿನಲ್ಲಿ ತಳ್ಳಿಕೊಂಡು ಹೋಗಿ ತರಕಾರಿ ಖರೀದಿಸಬೇಕು. ಸಂತೆ ಒಳಭಾಗದಲ್ಲಿ ಬಯಲಲ್ಲೆ ಮಲಮೂತ್ರ ವಿಸರ್ಜನೆ ಮಾಡುವುದರಿಂದ ಮಿತಿ ಮೀರಿದ ದುರ್ವಾಸನೆ ನಡುವೆ ಮೂಗು ಮುಚ್ಚಿಕೊಂಡೆ ತರಕಾರಿಗಳ ಮೇಲೆ ಕಣ್ಣು ಹಾಯಿಸಬೇಕು ಎಂಬ ಬೇಸರ ಜನರದು.

ಪ್ರತಿ ವಾರ ಸಂತೆಯಿಂದ ಹಳೆ ಬಸ್ ನಿಲ್ದಾಣದಲ್ಲಿ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ. ತಾಸುಗಟ್ಟಲೆ ವಾಹನಗಳು ನಿಲುಗಡೆಯಾಗುವುದರಿಂದ ಪ್ರಯಾಣಿಕರಿಗೂ ತೊಂದರೆ. ಇದಕ್ಕೆ ಕಡಿವಾಣ ಹಾಕಿ ಗ್ರಾಹಕರಿಗೆ ಕಿರಿಕಿರಿ ತಪ್ಪಿಸಲು ಪ್ರಸ್ತುತ ಸಂತೆ ನಡೆಯುತ್ತಿರುವ ಹಿಂಭಾಗದಲ್ಲಿರುವ ಮುಜರಾಯಿ ಇಲಾಖೆಯ ವ್ಯಾಪ್ತಿಯ ಜಾಗದಲ್ಲಿ ಅವಕಾಶ ಕಲ್ಪಿಸಬೇಕು.ಸರ್ಕಾರದ ಮಟ್ಟದಲ್ಲಿ ಜಾಗವನ್ನು ಪೌರಾಡಳಿತ ಇಲಾಖೆ ವ್ಯಾಪ್ತಿಗೆ ಪಡೆದರೆ ಇದು ಸಾಧ್ಯವೆಂಬುದು ಸಾರ್ವಜನಿಕರ ಅಭಿಪ್ರಾಯ.

ಈ ಕುರಿತು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳುವಂತೆ, ‘ಸಾರ್ವಜನಿಕರಿಗೆ ಅಗತ್ಯವಿರುವ ಮೀಸಲು ಜಾಗ ಪುರಸಭೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೆಲ್ಲಿದೆ ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ. ಹಳೆಯ ಬಸ್ ನಿಲ್ದಾಣದ ಪಕ್ಕದಲ್ಲಿ ನಡೆಯುತ್ತಿರುವ ಸಂತೆಯಿಂದ ಗ್ರಾಹಕರಿಗೆ ಕಿರಿಕಿರಿ ಎಂಬುದು ಗೊತ್ತಿದೆ. ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇನೆ’ ಎನ್ನುತ್ತಾರೆ.

ಆಯ್ಕೆಗೊಳ್ಳುವ ಜನಪ್ರತಿನಿಧಿಗಳ ಕುಟುಂಬದವರು ಇಂತಹ ಸಂತೆಗೆ ಬಂದರೆ ಇಲ್ಲಿನ ಸಂಕಷ್ಟ ಅರ್ಥವಾಗುತ್ತದೆ.
- ಪಾರ್ವತಮ್ಮ,ಗ್ರಾಹಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.