
ಹೊಸಕೋಟೆ: ಗಾಂಧೀಜಿ ಹುತಾತ್ಮದ ಪ್ರಯುಕ್ತ ‘ಶಾಂತಿ ಮತ್ತು ಸೌಹಾರ್ದ ಚಿರಾಯುವಗಲಿ’ ಎಂಬ ಧ್ಯೇಯದೊಂದಿಗೆ ನಗರದಲ್ಲಿ ಸೌಹಾರ್ದ ಕರ್ನಾಟಕ ತಾಲ್ಲೂಕು ಘಟಕ ಮತ್ತು ತಾಲ್ಲೂಕಿನ ಪ್ರಗತಿಪರ ಸಂಘಟನೆಗಳು ನಗರದಲ್ಲಿ ಜಾಥಾ ನಡೆಸಿ, ಮಾನವ ಸರಪಳಿ ರಚಿಸಿದವು.
ಕೆಇಬಿ ಸರ್ಕಲ್ ನಿಂದ ತಾಲ್ಲೂಕು ಕಚೇರಿಯ ಗಾಂಧಿ ಪ್ರತಿಮೆವರೆಗೆ ಜಾಥಾ ಮತ್ತು ಮಾನವ ಸರಪಳಿ ರಚಿಸಲಾಗಿತ್ತು.
‘ಕೋಮು ದಳ್ಳುರಿಗಳು ಗಾಂಧಿಯನ್ನು ಗುಂಡಿಟ್ಟು ಕೊಂದಿರಬಹುದು, ಆದರೆ ಅವರ ಚಿಂತನೆಗಳನ್ನು ಯಾರಿಂದಲೂ ಕೊಲ್ಲಲು ಆಗುವುದಿಲ್ಲ. ಏಕೆಂದರೆ ಇಂದು ಅವರನ್ನು ಜಗತ್ತಿನಲ್ಲಿ ಪ್ರೀತಿಸದವರೇ ಇಲ್ಲ ಎನ್ನುವ ಹಾಗಿಲ್ಲ. ಆದರೆ ದೇಶದಲ್ಲಿ ಮಾತ್ರ ಇಂದು ಕರೆನ್ಸಿಗೊ, ಮೂರ್ತಿಗೊ ಮಾತ್ರ ಸೀಮಿತಗೊಳಿಸಿ ಅವರ ಅದರ್ಶಗಳನ್ನು ಗಾಳಿಗೆ ತೂರಿದ್ದೇವೆ’ ಎಂದು ಕಲಾಂ ಶಾಲೆಯ ಸಂಸ್ಥಾಪಕ ಸಮೀರ್ ಹೇಳಿದರು.
‘ಅಷ್ಟಕ್ಕೇ ನಿಲ್ಲದೆ ಕೆಲ ಕೋಮುವಾದಿಗಳು ಇಂದಿನ ಯುವ ಪೀಳಿಗೆಯಲ್ಲಿ ಗಾಂಧಿ ವಿರೋಧಿ ಭಾವನೆ ಬಿತ್ತುತ್ತಿರುವುದನ್ನು ನಾವೆಲ್ಲ ಒಕ್ಕೊರಲಿನಿಂದ ಪ್ರತಿಭಟಿಸಿಲ್ಲ ಎಂದರೆ ಮುಂದೆ ನಮಗೂ ಸಮಾನತೆಯ ಸ್ವಾಯತ್ತ ಬದುಕು ಸಿಗುವುದಿಲ್ಲ’ ಎಂದರು.
‘ಈ ದೇಶಕ್ಕೆ ಸ್ವಾತಂತ್ರ ಬಂದು 79 ವರ್ಷ ಕಳೆದರೂ ಇನ್ನೂ ನಮಗೇಕೆ ಎಂದು ನಾವು ಸುಮ್ಮನಿದ್ದರೆ ಇಂದು ಸಂವಿಧಾನ ನಾಳೆ ನಮ್ಮ ಹರಣ ಆಗುವುದಿಲ್ಲ ಎಂಬ ಗ್ಯಾರೆಂಟಿ ಇದೆಯೇ? ಎಂಬುದು ಎಲ್ಲರಲ್ಲೂ ಕಾಡಬೇಕಿದೆ. ಸ್ವಾತಂತ್ರ್ಯ ಎಂಬುದು ಹಾಗೆ ಬಂದಂತಹದ್ದಲ್ಲ ಹಿಂದೂ, ಮುಸ್ಲಿಂ, ಸಿಖ್, ಪಾರಸಿ, ಬೌದ್ದ, ಜೈನ ಎಲ್ಲಾ ಧರ್ಮದವರ ತ್ಯಾಗ ಬಲಿದಾನಗಳ ಫಲ ಎಂಬುದನ್ನು ಅರ್ಥ ಮಾಡಿಸುವ ಸ್ಥಿತಿ ತಲುಪಿದ್ದೇವೆ. ಹೇಗೆ ನಮ್ಮನ್ನು ನಾವೇ ನಿರ್ಲಕ್ಷಿಸಿಕೊಂಡರೆ ಮನುವಾದಿಗಳ ಸರ್ವಾಧಿಕಾರಿತನ ಎಲ್ಲೆಡೆ ರಾರಾಜಿಸುತ್ತದೆ’ ಅಖಿಲ ಭಾರತ ವಕೀಲರ ರಾಜ್ಯಾಧ್ಯಕ್ಷ ಹರಿಂದ್ರ ಹೇಳಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ರಮೇಶ್, ಡಿವೈಎಫ್ ತಾಲ್ಲೂಕು ಮುಖಂಡ ಮೋಹನ್ ಬಾಬು ಮಾತನಾಡಿದರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ಕರ್ನಾಟಕ ಪ್ರಾಂತ್ಯ ರೈತ ಸಂಘಟನೆ, ದಲಿತ ಹಕ್ಕುಗಳ ಸಮಿತಿ, ಭಾರತ ಪ್ರಜಾಸಾತ್ಮಕ ಯುವಜನ ಪೇಡರೇಷನ್, ತಾಲ್ಲೂಕು ವಕೀಲರ ಸಂಘ, ಅಲ್ ಇಂಡಿಯಾ ಲಾಯರ್ ಯೂನಿಯನ್, ಭೀಮ್ ಸೇವಾ ಸಮಿತಿ, ಬಹುಜನ ಸಮಾಜವಾದಿ ಪಕ್ಷದ ತಾಲ್ಲೂಕು ಘಟಕ ಮತ್ತಿತರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ತಾಲ್ಲೂಕಿನಲ್ಲಿ ಗಾಂಧಿ ಪ್ರತಿಮೆ ಅನಾವರಣ ಮಾಡಲು ಹಲವು ವರ್ಷಗಳ ಹೋರಾಟ ಮಾಡುವಂತಹ ದುಸ್ಥಿತಿಗೆ ತಲುಪಿದ್ದೇವೆ ಎಂದರೆ ನಮ್ಮ ಸ್ಥಿತಿ ದೇಶದಲ್ಲಿ ಹೇಗಿದೆ ಎಂಬುದನ್ನು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕಿದೆವಾರದಪುರ ನಾಗರಾಜ ಸಾಮಾಜಿಕ ಕಾರ್ಯಕರ್ತ
ಗಾಂಧಿ ರಾಜಕಾರಣದ ವಸ್ತುವಲ್ಲ ಜಗತ್ತಿನ ಮಾನವತ್ವದ ಅಡಿಗಲ್ಲು. ಅದನ್ನು ಅಲುಗಾಡಿಸಲು ಹೊರಟರೆ ನಮ್ಮ ಅಂತ್ಯದ ದಿನಗಳು ಸಮೀಪಿಸುತ್ತಿವೆ ಎಂಬುದಷ್ಟೇ ಅಲ್ಲ ಸಮಸ್ತ ಜೀವರಾಶಿಯ ನಾಶದ ಸಂಕೇತ ಎಂಬುದನ್ನು ಮನುಷ್ಯಕುಲ ಅರ್ಥಮಾಡಿಕೊಳ್ಳಬೇಕಿದೆವೆಂಕಟರಾಜು ಸಿಐಟಿಯು ಮುಖಂಡ
ಯಾರಿಗೂ ಗಾಂಧಿ ಬೇಕಿಲ್ಲವೆ?
ಗಾಂಧಿಯ ಶಾಂತಿ ಮತ್ತು ಸೌಹಾರ್ದತೆಯಿಂದ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ಜನತೆಗೆ ತಿಳಿಸುವ ಉದ್ದೇಶದಿಂದ ಸೌಹಾರ್ದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ನಗರದ ನಾಗರಿಕರ ನೀರಸ ಪ್ರತಿಕ್ರಿಯೆ ನೋಡಿದರೆ ಗಾಂಧಿ ಯಾರಿಗೂ ಬೇಕಿಲ್ಲವಾ ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದು ಭೀಮ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವಣ್ ಬೇಸರಿಸಿದರು. ಮಹಿಳೆ ದಲಿತ ಹಿಂದುಳಿದ ವರ್ಗಗಳು ಉಸಿರಾಡುತ್ತಿವೆ ಎಂದರೆ ಅದಕ್ಕೆ ಗಾಂಧಿ–ಅಂಬೇಡ್ಕರ್ ಕಾರಣಕರ್ತರು. ಆದರೆ ಅಂತಹ ಮಹಾತ್ಮರ ಸ್ಮರಿಸುವ ಕಾರ್ಯಕ್ರಮಕ್ಕೆ ನೀರಸ ಪ್ರತಿಕ್ರಿಯೆ ತೋರಿದರೆ ಹೇಗೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.