ADVERTISEMENT

ಗೋ ಹತ್ಯೆ ನಿಷೇಧ: ತೊಂದರೆ ಹೆಚ್ಚು

ರಾಜ್ಯ ಸರ್ಕಾರದ ನಡೆಗೆ ರೈತ ಸಂಘಟನೆಗಳ ಅಸಮಾಧಾನ

ಎಂ.ಮುನಿನಾರಾಯಣ
Published 12 ಡಿಸೆಂಬರ್ 2020, 7:24 IST
Last Updated 12 ಡಿಸೆಂಬರ್ 2020, 7:24 IST
ಮಳ್ಳೂರು ಶಿವಣ್ಣ
ಮಳ್ಳೂರು ಶಿವಣ್ಣ   

ವಿಜಯಪುರ: ರಾಜ್ಯ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವ ಕರ್ನಾಟಕ ಜಾನುವಾರು ವಧೆ, ಸಂರಕ್ಷಣಾ ಮತ್ತು ಪ್ರತಿಬಂಧಕ ಮಸೂದೆ ಬಗ್ಗೆ ರೈತ ಮುಖಂಡರು, ವಿವಿಧ ಸಂಘಟನೆಯ ಮುಖಂಡರು ಸೇರಿದಂತೆ ಗೋ ಮಾಂಸ ಮಾರಾಟಗಾರರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.

ರೈತ ಸಂಘದ ಮುಖಂಡ ಮಳ್ಳೂರು ಶಿವಣ್ಣ ಮಾತನಾಡಿ, ಪ್ರಾಕೃತಿಕವಾಗಿ ಒಂದೊಂದು ಪ್ರಾಣಿಯು ತನ್ನ ಆಹಾರಕ್ಕಾಗಿ ಮತ್ತೊಂದು ಪ್ರಾಣಿಯನ್ನು ಅವಲಂಬಿಸಿದೆ. ಅದರಂತೆ ಮನುಷ್ಯ ಕೂಡ ತನಗೆ ಬೇಕಾಗಿರುವ ಆಹಾರ ತಿನ್ನುವುದು ಸಂವಿಧಾನಬದ್ಧ ಹಕ್ಕು. ಗೋ ಮಾಂಸ ಭಕ್ಷಣೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಶ್ರಮಿಕ ವರ್ಗದವರು ಮಾಡುತ್ತಾರೆ. ಅದರಿಂದ ಅವರ ದೇಹಕ್ಕೆ ಬೇಕಾಗಿರುವ ಪೌಷ್ಟಿಕಾಂಶಗಳು ಸಿಗುತ್ತವೆ. ಗೋಹತ್ಯೆ ನಿಷೇಧ ಮಾಡು ವುದರಿಂದ ಪೌಷ್ಟಿಕ ಆಹಾರ ಸೇವನೆ ಮಾಡುವ ಹಕ್ಕಿನಿಂದ ಶ್ರಮಿಕರು ವಂಚಿತರಾಗುತ್ತಾರೆ. ಇದು ಸಂವಿಧಾನಕ್ಕೆ ವಿರುದ್ಧವಾದುದು’ ಎಂದು ಪ್ರತಿಕ್ರಿಯಿಸಿದರು.

ಗೋ ಮಾಂಸ ಮಾರಾಟಗಾರ ಅಮ್ಜದ್ ಮಾತನಾಡಿ, ‘ನಾವಾಗಿ ಹೋಗಿ ದನಗಳನ್ನು ಖರೀದಿ ಮಾಡಿಕೊಂಡು ಬರುವುದಿಲ್ಲ. ದುಡಿಮೆ ಮಾಡಲು ಶಕ್ತಿಯಿಲ್ಲದ ಜಾನುವಾರುಗಳನ್ನು ರೈತರು ತಂದು ಮಾರಾಟ ಮಾಡುತ್ತಾರೆ. ದುಡಿಮೆ ಮಾಡಲು ಶಕ್ತಿಯಿಲ್ಲದ ಗೋವುಗಳ ಪೋಷಣೆ ಮಾಡುವುದು ರೈತರಿಗೆ ಅಸಾಧ್ಯ. ಇಂತಹ ಸಂದರ್ಭದಲ್ಲಿ ಅವರು ಮಾರಾಟ ಮಾಡಲೇಬೇಕು. ಚರ್ಮದಿಂದ ಬಹಳಷ್ಟು ವಸ್ತುಗಳು ತಯಾರಾಗುತ್ತವೆ. ಗೋ ಹತ್ಯೆ ನಿಷೇಧದಿಂದಾಗಿ ಈ ವಸ್ತುಗಳ ತಯಾರಿಕೆ ಮಾಡುವವರು ಬೀದಿಗೆ ಬರುವಂತಾಗುತ್ತದೆ. ಇದನ್ನೆ ನಂಬಿಕೊಂಡಿ ರುವ ನಮ್ಮ ಕುಟುಂಬಗಳು ಅತಂತ್ರವಾಗುತ್ತವೆ’ ಎಂದರು.

ADVERTISEMENT

ಜಾಮೀಯಾ ಮಸೀದಿ ಅಧ್ಯಕ್ಷ ಎ.ಆರ್. ಹನೀಪುಲ್ಲಾ ಮಾತನಾಡಿ, ಗೋಹತ್ಯೆ ನಿಷೇಧ ಸಂವಿಧಾನಬಾಹಿರ. ಕೇವಲ ಒಂದು ಕೋಮಿನವರನ್ನು ಗುರಿ ಮಾಡಿದ್ದಾರೆ. ಅರಬ್ ರಾಷ್ಟ್ರಗಳಿಗೆ ಗೋ ಮಾಂಸ ರಫ್ತು ಮಾಡಲು ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ಸಾಧ್ಯವಿಲ್ಲ. ಮೊದಲು ರಫ್ತು ಮಾಡುವುದನ್ನು ನಿಲ್ಲಿಸಲಿ ಎಂದರು.

ವಯಸ್ಸಾದ ಗೋವುಗಳನ್ನು ಏನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು. ಸರ್ಕಾರದ ಈ ಮಸೂದೆ ರೈತರಿಗೆ ಮರಣಶಾಸನದಂತಿದೆ. ಕೃಷಿ ನೀತಿಯನ್ನು ಹಾಳು ಮಾಡಿದ್ದಾರೆ. ಈಗ ರೈತರನ್ನೂ ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಮುಖಂಡ ಕನಕರಾಜು ಮಾತನಾಡಿ, ಸರ್ಕಾರ ಸೂಕ್ತ ನಿರ್ಧಾರಕೈಗೊಂಡಿದೆ. ಗೋವಿನಿಂದ ನಾವು ಅನೇಕ ಪ್ರಯೋಜನ ಪಡೆದುಕೊಂಡಿರುತ್ತೇವೆ. ಗೋವುಗಳನ್ನು ಭಾವನಾತ್ಮಕವಾಗಿ ಕಾಣುತ್ತೇವೆ. ವಯಸ್ಸಾದ ಗೋವುಗಳನ್ನು ಪೋಷಣೆ ಮಾಡಲಿಕ್ಕಾಗಿ ಗೋಶಾಲೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.

ಮಾನವ ಹಕ್ಕುಗಳ ಜಾಗೃತಿ ವೇದಿಕೆಯ ಹೋಬಳಿ ಘಟಕದ ಅಧ್ಯಕ್ಷ ಎಸ್. ಮಂಜುನಾಥ್ ಮಾತನಾಡಿ, ಗೋವುಗಳನ್ನು ಗೋ ಶಾಲೆಗಳಿಗೆ ಬಿಡುತ್ತಾರೆ. ಬಿಟ್ಟಿರುವಂತಹ ಎಷ್ಟು ದನ–ಕರುಗಳು ಸುರಕ್ಷಿತವಾಗಿವೆ. ಅವು ಸತ್ತ ಮೇಲೆ ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಯಾರಲ್ಲೂ ಮಾಹಿತಿ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.