ADVERTISEMENT

ಇಂದಿನಿಂದ ಮಾಕಳಿ ಬೆಟ್ಟದಲ್ಲಿ ಔಷಧಿ ಸಮೀಕ್ಷೆ

ಬೇರು ಹುಡುಕುವುದು ಹಾಗೂ ಸಿಕ್ಕ ಮಾಹಿತಿ ಸಂಗ್ರಹಿಸುವುದು ಇದರ ಉದ್ದೇಶ

ನಟರಾಜ ನಾಗಸಂದ್ರ
Published 20 ಜುಲೈ 2019, 19:12 IST
Last Updated 20 ಜುಲೈ 2019, 19:12 IST
ಮಾಕಳಿ ಬೆಟ್ಟ
ಮಾಕಳಿ ಬೆಟ್ಟ   

ದೊಡ್ಡಬಳ್ಳಾಪುರ: ಇತಿಹಾಸ ಪ್ರಸಿದ್ಧ ಮಾಕಳಿ ಬೆಟ್ಟ ಪಾಳೆಗಾರರ ಆಳ್ವಿಕೆ ಕೇಂದ್ರವಷ್ಟೇ ಆಗಿರದೆ ಔಷಧಿಯ ಸಸ್ಯ ವೈವಿಧ್ಯಕ್ಕೂ ಪ್ರಸಿದ್ಧಿ ಪಡೆದಿದೆ. ಈ ಬೆಟ್ಟದಲ್ಲಿ ದೊಡ್ಡಬಳ್ಳಾಪುರ ವಲಯ ಅರಣ್ಯ ಇಲಾಖೆ, ಏಟ್ರಿ ಸಂಸ್ಥೆ ಸಹಯೋಗದೊಂದಿಗೆ ಔಷಧಿ ಸಸ್ಯೆಗಳಲ್ಲೇ ಬಹು ಮಹತ್ವ ಪಡೆದಿರುವ ಮಾಕಳಿ ಬೇರಿನ ಸಮೀಕ್ಷೆ ಜುಲೈ 21ರಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಲಿದೆ.

ಮಾಕಳಿ ಬೇರಿನ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು, ಬೆಟ್ಟದಲ್ಲಿ ಸಂಚರಿಸುವ ಮಾರ್ಗವನ್ನು ತಿಳಿದುಕೊಂಡು ಬೇರು ಹುಡುಕುವುದು ಹಾಗೂ ಸಿಕ್ಕ ಮಾಹಿತಿ ಸಂಗ್ರಹಿಸುವುದು ಸಮೀಕ್ಷೆ ಉದ್ದೇಶ ಎಂದು ಯುವ ಸಂಚಲನದ ಅಧ್ಯಕ್ಷ ಚಿದಾನಂದ್‌ ತಿಳಿಸಿದ್ದಾರೆ.

‘ಮಾಕಳಿ ಬೇರು’ ಎಂಬ ಸಸ್ಯ ಹೆಚ್ಚಾಗಿ ಈ ಬೆಟ್ಟದಲ್ಲಿ ದೊರೆಯುತ್ತಿದ್ದುದರಿಂದಲೇ ಈ ಹೆಸರು ಬಂದಿದೆ. ಈಚೆಗೆ ಹೆಸರು ಮಾತ್ರ ಉಳಿದಿದ್ದು ಮಾಕಳಿ ಬೇರನ್ನು ಕಳೆದು ಬಿಟ್ಟಿದ್ದೇವೆ. ಬೆಟ್ಟದಲ್ಲಿ ಬೇರಿಗೆ ಜೀವಂತಿಕೆ ಕೊಡುವ ಯೋಜನೆ ಹೊಂದಲಾಗಿದೆ. ಈಗಾಗಲೇ ಬೇರಿನ ಸಸ್ಯದ ಬೀಜಗಳನ್ನು ಮಲೆಮಹದೇಶ್ವರ ಬೆಟ್ಟ ಸೇರಿದಂತೆ ಇತರೆಡೆಗಳಿಂದ ಸಂಗ್ರಹಿಸಿ ತಂದು ಸಸಿಗಳನ್ನು ಬೆಳೆಸುವ ಪ್ರಯತ್ನ ನಡೆದಿದೆ ಎಂದರು.

ADVERTISEMENT

ಮಾಗಳಿ ಆಸ್‍ಕ್ಲಿಪಿಯಡೇಸೀ ಕುಟುಂಬಕ್ಕೆ ಸೇರಿದ ಈ ವನ ಸಸ್ಯ ಮಾಕಳಿ ಬೇರಿನ ಪರ್ಯಾಯ ನಾಮ. ಇದರ ಶಾಸ್ತ್ರೀಯ ನಾಮ ಡೆಕಾಲೆಪಿಸ್ ಹ್ಯಾಮಿಲ್‍ಟೋನಿಸೈಸ್‌ ಬೇರು. ದಕ್ಷಿಣ ಭಾರತದಲ್ಲೆಲ್ಲ ವ್ಯಾಪಕವಾಗಿ ಬೆಳೆಯುವ ಇದು ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಸಾಮಾನ್ಯ. ಇದು ಬಳ್ಳಿಯಂತೆ ಹಬ್ಬುವ ಪೊದೆ.

ಈ ಬೇರು ಹಸಿವು, ರಕ್ತ ಶುದ್ಧಿಕಾರಕವೆಂದೂ ಹೆಸರಾಗಿದೆ. ನಿಂಬೆ, ಮಾವು ಮುಂತಾದವುಗಳೊಂದಿಗೆ ಸೇರಿಸಿ ಇಲ್ಲವೆ ಇದನ್ನು ನೇರವಾಗಿ ಉಪ್ಪಿನಕಾಯಿ ಹಾಕುವುದಿದೆ. ಇದರ ಬೇರನ್ನು ನನ್ನಾರಿ ಬೇರಿಗೆ (ಸೊಗದೇಬೇರು) ಬದಲಾಗಿ, ಕಲಬೆರಕೆ ಮಾಡಿ ಬಳಸುವುದೂ ಉಂಟು. ಇಂತಹ ಮಹತ್ವ ಹೊಂದಿರುವ ಸಸ್ಯ ವೃದ್ಧಿಗೆ ಈಗ ಮತ್ತೆ ಚಾಲನೆ ನೀಡಲಾಗುತ್ತಿದೆ ಎನ್ನುತ್ತಾರೆ ವಲಯ ಅರಣ್ಯ ಅಧಿಕಾರಿ ನಟರಾಜ್.

ಐತಿಹಾಸಿಕವಾಗಿಯು ಪ್ರಸಿದ್ಧಿ: ಸಾಸಲು ಹೋಬಳಿ ಗುಂಡಮಗೆರೆ ಸಮೀಪದ ಬೆಟ್ಟ ಹತ್ತಲು ಯಾವುದೇ ಮೆಟ್ಟಿಲುಗಳ ಸೌಲಭ್ಯ ಇಲ್ಲ. ಸುಮಾರು 3 ಕಿ.ಮೀ ಎತ್ತರದ ಬೆಟ್ಟವನ್ನು ಒಂದೂವರೆ ಗಂಟೆ ಸಮಯದಲ್ಲಿ ಹತ್ತಬಹುದು. ಅಷ್ಟೇನು ಕಡಿದಾಗಿಲ್ಲ. ಗುಂಡಮಗೆರೆ ಗ್ರಾಮದ ಕಡೆಯಿಂದ ಬೆಟ್ಟಕ್ಕೆ ಹತ್ತಲು ಒಂದಿಷ್ಟು ಸುಲಭವಾದ ಕಾಲು ದಾರಿ ಇದೆ. ಬೆಟ್ಟಕ್ಕೆ ಹತ್ತುವಾಗ ನವಿಲು, ನರಿ, ಕಾಡು ಕೋಳಿ, ಮೊಲ ಸೇರಿದಂತೆ ಸಣ್ಣಪುಟ್ಟ ಕಾಡು ಪ್ರಾಣಿಗಳು ಕಣ್ಣಿಗೆ ಬೀಳುತ್ತವೆ. ಬೆಟ್ಟದ ಮೇಲೆ ಪಾಳೆಗಾರರ ಕಾಲದಲ್ಲಿ ನಿರ್ಮಿಸಲಾಗಿರುವ ಕೋಟೆ ಇದೆಯಾದರೂ ಈಗ ನಾಶವಾಗಿದೆ. ಮಳೆ ಬಂದರೆ ರಕ್ಷಣೆ ಪಡೆಯಲು ಹಾಗೂ ಅಡುಗೆ ಮಾಡಿಕೊಂಡು ಕುಳಿತು ಊಟ ಮಾಡಲು ಒಂದಿಷ್ಟು ಸ್ಥಳಾವಕಾಶವಿದೆ.

ಬೆಟ್ಟದ ಮೇಲಿರುವ ಕಾಡು ಮಲ್ಲೇಶ್ವರಸ್ವಾಮಿ ಪೂರ್ವಾಭಿಮುಖವಾಗಿ ಮುಖ ಮಾಡಿ ನಿಂತಿದ್ದು ಈ ದೇವಾಲಯ ಮಾರ್ಕಂಡೇಯ ಋಷಿ ಸ್ಥಾಪಿಸಿದ್ದಾರೆ ಎನ್ನುವುದು ಸ್ಥಳದ ಐಹಿತ್ಯ.

ಅಭಿವೃದ್ಧಿಗೆ ಹಣ ಮಂಜೂರು

ಘಾಟಿ, ನಂದಿಬೆಟ್ಟ ಈ ದುರ್ಗಕ್ಕೆ ಹತ್ತಿರವಾಗಿದ್ದು ಪ್ರವಾಸಿ ತಾಣವಾಗಿಸಿದರೆ ಪ್ರವಾಸಿಗರಿಗೆ ಉತ್ತಮ ಪ್ರದೇಶ. ಪ್ರವಾಸೋದ್ಯಮ ಇಲಾಖೆ ವತಿಯಿಂದ ಬೆಟ್ಟದ ಮೇಲಿನ ದೇವಾಲಯದ ಮೂಲ ಸೌಕರ್ಯ ಅಭಿವೃದ್ದಿಗೆ ₹50 ಲಕ್ಷ ಮಂಜೂರು ಮಾಡಿದೆ
-ಮಂಜುನಾಥರೆಡ್ಡಿ,ಅಧ್ಯಕ್ಷ,ಮಾಕಳಿ ಮಲ್ಲೇಶ್ವರಸ್ವಾಮಿ ದೇವಾಲಯ ಅಭಿವೃದ್ದಿ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.