ADVERTISEMENT

ದೊಡ್ಡಬಳ್ಳಾಪುರ | ಎಂಎನ್‌ಸಿ ಹಿಡಿತ ಕೃಷಿ: ಅಪಾಯ

ಮರೆಯಾದ ವ್ಯಕ್ತಿ-ಮರೆಯಲಾಗದ ನೆನಪು ವಿಚಾರ ಗೋಷ್ಠಿಯಲ್ಲಿ । ಪೂರ್ಣ ಪ್ರಮಾಣದಲ್ಲಿ ಕೃಷಿ ನಡೆಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 2:16 IST
Last Updated 17 ನವೆಂಬರ್ 2025, 2:16 IST
​ದೊಡ್ಡಬಳ್ಳಾಪುರದಲ್ಲಿ ನಡೆದ ವಿಚಾರ ಗೋಷ್ಠಿಯಲ್ಲಿ ಹಿರಿಯ ರೈತ ಮುಖಂಡ ಕೆ.ಟಿ.ಗಂಗಾಧರ್, ಕೃಷಿ ವಿಜ್ಞಾನಿ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ, ವಿಜ್ಞಾನ ಲೇಖಕ ಎ.ಓ.ಆವಲಮೂರ್ತಿ, ಕೆ.ಸುಲೋಚನಮ್ಮ ಭಾಗವಹಿಸಿದ್ದರು
​ದೊಡ್ಡಬಳ್ಳಾಪುರದಲ್ಲಿ ನಡೆದ ವಿಚಾರ ಗೋಷ್ಠಿಯಲ್ಲಿ ಹಿರಿಯ ರೈತ ಮುಖಂಡ ಕೆ.ಟಿ.ಗಂಗಾಧರ್, ಕೃಷಿ ವಿಜ್ಞಾನಿ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ, ವಿಜ್ಞಾನ ಲೇಖಕ ಎ.ಓ.ಆವಲಮೂರ್ತಿ, ಕೆ.ಸುಲೋಚನಮ್ಮ ಭಾಗವಹಿಸಿದ್ದರು   

ದೊಡ್ಡಬಳ್ಳಾಪುರ: ಆಹಾರ ಉತ್ಪನ್ನ ಬೇಡಿಕೆಯು ದೊಡ್ಡ ಮಟ್ಟದ ಮಾರುಕಟ್ಟೆ ಹುಟ್ಟಿಹಾಕಿದೆ, ಇದನ್ನೇ ಬಂಡವಾಳವಾಗಿಟ್ಟುಕೊಂಡು ಬಹುರಾಷ್ಟ್ರೀಯ ಕಂಪನಿಗಳು ಕೃಷಿ ಕ್ಷೇತ್ರವನ್ನು ಒಂದೊಂದಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿವೆ. ಹೀಗಾಗಿ ರೈತರು ಪೂರ್ಣ ಪ್ರಯಾಣದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ರಾಜ್ಯ ರೈತ ಸಂಘದ ಸಂಸ್ಥಾಪಕ ಸದಸ್ಯ ಕೆ.ಟಿ.ಗಂಗಾಧರ್ ಹೇಳಿದರು.

ಡಾ.ಎನ್.ವೆಂಕಟರೆಡ್ಡಿ ಬಳಗದ ವತಿಯಿಂದ ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ಮರೆಯಾದ ವ್ಯಕ್ತಿ-ಮರೆಯಲಾಗದ ನೆನಪು’ ವಿಚಾರ ಗೋಷ್ಠಿಯಲ್ಲಿ ಕೃಷಿ ಕಸುಬು ಪೂರಕವೋ ? ಪ್ರಧಾನವೋ ? ಸವಾಲು ಮತ್ತು ಅವಕಾಶದ ಹಾದಿ ವಿಷಯ ಕುರಿತು ಮಾತನಾಡಿದರು.

ಎಂಎನ್‌ಸಿ ಹಿಡಿತಕ್ಕೆ ಕೃಷಿ ಕ್ಷೇತ್ರ ಸಿಲುಕಂತೆ ಎಲ್ಲರೂ ಎಚ್ಚರವಹಿಸಬೇಕಿದೆ. ಅರೆಕಾಲಿಕ ಕೃಷಿ ಬಿಟ್ಟು, ಕೃಷಿಯೇ ನಮಗೆ ಪ್ರಧಾನವಾಗಬೇಕು. ನಮ್ಮಲ್ಲೇ ಬೀಜಜ್ಞಾನ, ಕೃಷಿ ತಂತ್ರಜ್ಞಾನ ಇದೆ. ಯಾವುದೇ ಕಾರಣಕ್ಕೂ ನಾವು ಇದಕ್ಕೆ ಆಸ್ಪದ ನೀಡದೇ ಕೃಷಿಯನ್ನು ಪ್ರಧಾನ ಕಾಯಕವಾಗಿರಿಸಿಕೊಳ್ಳಬೇಕು. ಕೃಷಿಯಲ್ಲಿ ರೈತರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು. 

ADVERTISEMENT

ದೇಶದಲ್ಲಿ ವರ್ಷಕ್ಕೆ 42 ದಶಲಕ್ಷ ಟನ್ ಆಹಾರ ಬೆಳೆಯುತ್ತಿದ್ದರೂ ಸರ್ಕಾರ ರೈತರ ಸಾಲ ಮನ್ನಾ ಮಾಡುತ್ತಿಲ್ಲ. ರೈತರ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಹಾಗೂ ಸೌಲಭ್ಯಗಳು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿಯೇ ರಾಜ್ಯದಲ್ಲಿ ರೈತರ ಚಳವಳಿಗೆ ನಾಂದಿಯಾಗಿ ರೈತರ ಸಂಘ ಅಸ್ತಿತ್ವಕ್ಕೆ ಬಂತು ಎಂದು ಸ್ಮರಿಸಿದರು.

ರೈತರು ಉತ್ತಮ ಬದುಕು ನಡೆಸಿ, ನಗರದಲ್ಲಿ ವಸ್ತುಗಳನ್ನು ಕೊಂಡರೆ ಜಿಡಿಪಿ ದರ ತಾನಾಗಿಯೇ ಏರುತ್ತದೆ. ಆದರೆ ಆರ್ಥಿಕ ತಜ್ಞರು ಇದನ್ನು ಮರೆಮಾಚಿ, ಅಧಿಕಾರಿಗಳ ಬಂಡವಾಳ ಶಾಹಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಡಿಪಿ ಲೆಕ್ಕ ಹಾಕುತ್ತಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ರೈತರ ಹಿತಕ್ಕೆ ದಕ್ಕೆ ಬಂದಾಗ ದನಿ ಎತ್ತಬೇಕು. ಇದಕ್ಕೆ ರೈತ ಹೋರಾಟಗಾರ ಡಾ.ವೆಂಕಟರೆಡ್ಡಿ ಅವರಂತಹವರು ನಮಗೆ ಮಾದರಿಯಾಗಬೇಕು ಎಂದು ಡಾ.ವೆಂಕಟರೆಡ್ಡಿ ಅವರ ಹೋರಾಟಗಳನ್ನು ಸ್ಮರಿಸಿದರು.

ಕೃಷಿ ವಿಜ್ಞಾನಿ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಆಹಾರ ಉತ್ಪನ್ನಗಳ ದಾಸ್ತಾನು ಒಂದು ವಾರಕ್ಕೆ ಸಾಕಾಗುವಷ್ಟು ಮಾತ್ರ ಇತ್ತು. ಈಗ ಆಹಾರದಲ್ಲಿ ಸ್ವಾವಲಂಭಿಯಾಗಿದ್ದೇವೆ. ಆದರೆ ಈಗ ಹಸಿರು ಕ್ರಾಂತಿಯ ಅವಾಂತರಗಳ ಕುರಿತು ಚರ್ಚೆಗಳಾಗುತ್ತಿವೆ. ಕುಲಾಂತರಿ ತಳಿಗಳ ತಂತ್ರಜ್ಞಾನ ಬರುತ್ತಿದ್ದು, ನಾವು ಯಾವ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕೆಂಬ ಗೊಂದಲದಲ್ಲಿದ್ದೇವೆ. ಈಗ ಕುಲಾಂತರಿ ತಳಿ ಹಾಗೂ ಸಾವಯವ ಹೆಸರಿನಲ್ಲಿ ಜೋರಾದ ವ್ಯಾಪಾರಗಳು ನಡೆಯುತ್ತಿವೆ’ ಎಂದರು.

ವಿಜ್ಞಾನ ಲೇಖಕ ಎ.ಓ.ಆವಲಮೂರ್ತಿ ವಿಚಾರ ಗೋಷ್ಠಿಯ ಅಧ್ಯಕ್ಷತೆವಹಿಸಿದ್ದರು. ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಕೆ.ಸುಲೋಚನಮ್ಮ ಡಾ.ವೆಂಕಟರೆಡ್ಡಿ, ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕಾರ್ಯಕ್ರಮದ ಸಂಘಟಕರಾದ ಡಿ.ಆರ್.ನಟರಾಜ್. ಟಿ.ಎಸ್.ತಿಮ್ಮಯ್ಯ ಇದ್ದರು.

ಪಿಜ್ಜಾಗೆ ₹300 ನೀಡುವವರು ಟೊಮೊಟೋ ಈರುಳ್ಳಿ ಬೆಲೆ ಸ್ವಲ್ಪ ಹೆಚ್ಚಾದೂ ಹೌಹಾರುತ್ತಾರೆ. ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರಕಬೇಕು

- ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಕೃಷಿ ವಿಜ್ಞಾನಿ

ರೈತರ ಒಕ್ಕಲೆಬ್ಬಿಸುವ ಗಂಡಾಂತರ 5 ಎಕರೆ ಜಮೀನು ಇದ್ದರೆ ಮನೆಮಂದಿಗೆಲ್ಲಾ ಉದ್ಯೋಗ ದನಕರುಗಳಿಗೆ ಮೇವು ದೊರೆತು ಸ್ವಾವಲಂಭಿಗಳಾಗಿ ಬದುಕಬಹುದು. ಆದರೆ ಬೇರೆಡೆ ಉದ್ಯೋಗ ನೀಡುವ ಆಮೀಷ ಒಡ್ಡಿ ರೈತರ ಜಮೀನನ್ನು ಕಿತ್ತುಕೊಂಡು ಅವರನ್ನು ಒಕ್ಕಲೆಬ್ಬಿಸುವ ಗಂಡಾಂತರವಿದೆ ಎಂದು ರಾಜ್ಯ ರೈತ ಸಂಘದ ಸಂಸ್ಥಾಪಕ ಸದಸ್ಯ ಕೆ.ಟಿ.ಗಂಗಾಧರ್ ಹೇಳಿದರು.

ಕೈಗಾರಿಕೆಗೆ ಕೃಷಿ ಭೂಮಿ ಸ್ವಾಧೀನ ಅವೈಜ್ಞಾನಿಕ ಜಾಗತಿಕವಾಗಿ ನಮಗೆ ಆಹಾರಕ್ಕೆ ಪೂರಕವಾಗಿ ಕೃಷಿ ಉತ್ಪನ್ನಗಳನ್ನು ಬೆಳೆಯಲು ಲಭ್ಯವಿರುವುದು ಶೇ 10ರಷ್ಟು ಭೂಮಿ ಮಾತ್ರ. ಆದರೆ ಕೈಗಾರಿಕೆಗಳನ್ನು ಸ್ಥಾಪಿಸಲು ನಗರ ಪ್ರದೇಶಗಳಿಗೆ ಸಮೀಪವಿರುವ ಕೃಷಿ ಭೂಮಿಗಳನ್ನೇ ಸ್ವಾಧೀನಪಡಿಸಿಕೊಳ್ಳುವುದು ಅವೈಜ್ಞಾನಿಕ. ಈ ಬಗ್ಗೆ ಕೃಷಿಕರನ್ನಷ್ಟೇ ಅಲ್ಲದೇ ಗ್ರಾಹಕರನ್ನು ಸಹ ಎಚ್ಚರಿಸಬೇಕಾದ ಅಗತ್ಯವಿದೆ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಹಾಗೂ ಕೃಷಿ ವಿಜ್ಞಾನಿ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಹೇಳಿದರು. ‘ಕೃಷಿ ಭೂಮಿಯನ್ನು ಕೃಷಿ ಮತ್ತು ಕೃಷಿಕರಲ್ಲಿ ಉಳಿಸುವ ಸವಾಲು’ ಕುರಿತು ಮಾತನಾಡಿ ಕೃಷಿ ಭೂಮಿಯನ್ನು ಸ್ವಾಧೀನಪಡಿಕೊಳ್ಳಲು ಸರ್ಕಾರಕ್ಕೆ ಬೆಂಗಳೂರು ಪಕ್ಕದಲ್ಲಿಯೇ ಇರುವ ಭೂಮಿ ಬೇಕೆ?. ಅದರಲ್ಲಿಯೂ ಅತ್ಯಲ್ಪ ಇರುವ ನೀರಾವರಿ ಜಮೀನುಗಳೇ ಏಕೆ? 5 ಎಕರೆ ಅವಶ್ಯ ವಿರುವ ಕೈಗಾರಿಕೆಗಳಿಗೆ ನೂರಾರು ಎಕರೆ ನೀಡಲಾಗುತ್ತಿದೆ. ಅನಗತ್ಯ ಭೂಸ್ವಾಧೀನದಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ರೈತರಿಗೆ ತಮ್ಮ ಕೃಷಿ ಭೂಮಿ ಬೆಲೆ ತಿಳಿಯುತ್ತಿಲ್ಲ. ರಾಜ್ಯದಲ್ಲಿ 21ಲಕ್ಷ ಎಕರೆಯಷ್ಟು ಬರಡು ಭೂಮಿಯಿದ್ದು ಅದನ್ನು ಕೈಗಾರಿಕೆಗಳಿಗೆ ನೀಡಬಹುದಾಗಿದೆ. ಚೀನಾದಲ್ಲಿ ಕೃಷಿ ಭೂಮಿ ಕಡಿಮೆ ಇದ್ದರೂ ಸಹ ಕೃಷಿ ಆದಾಯ ಹೆಚ್ಚಿದ್ದು ಇದು ನಮಗೆ ಅರಿವಾಗಬೇಕು. ಈ ಬಗ್ಗೆ ರೈತರು ಜಾಗೃತರಾಗಬೇಕಿದೆ. ಕೆಂಟಕಿ ಚಿಕನ್ ಕುಲಾಂತರಿ ತಳಿಗಳ ವಿರುದ್ದ ಹೋರಾಡಿದ್ದ ಡಾ.ವೆಂಕಟರೆಡ್ಡಿ ಅವರ ಹೋರಾಟ ಸ್ಮರಣೀಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.