
ಹೊಸಕೋಟೆ: ತಾಲ್ಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಮಾರನಗೆರೆ ಗ್ರಾಮದಲ್ಲಿ ಗೃಹಿಣಿಯರು ಮತ್ತು ಮಕ್ಕಳು ಟಿ.ವಿ ಮತ್ತು ಮೊಬೈಲ್ ಗೀಳು ದೂರ ಮಾಡಿಕೊಳ್ಳಲು ಗ್ರಾಮಸ್ಥರು ಕೋಲಾಟದ ಮೊರೆ ಹೋಗಿದ್ದಾರೆ.
ಮಕ್ಕಳು, ಯುವಕ–ಯುವತಿಯರು ಮಾತ್ರವಲ್ಲ ಹಿರಿಯರು ಸೇರಿ ಎಲ್ಲರೂ ಮೊಬೈಲ್ ಹಿಂದೆ ಬಿದ್ದಿದ್ದಾರೆ. ಬೆಳಗ್ಗೆ ಎದಕ್ಷಣಾ, ಶೌಚಾಲಯ, ಊಟ, ಪ್ರಯಾಣ, ಕೆಲಸ ಹಾಗೂ ಮಲಗುವ ವೇಳೆಯಲ್ಲೂ ಜನರಿಗೆ ಬೇಕೇ ಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಹೀಗೆ ಆವರಿಸಿಕೊಂಡಿರುವ ಮೊಬೈಲ್ ಗೀಳು ದೂರು ಮಾಡಲು ಮಾರನಗೆರೆ ಗ್ರಾಮಸ್ಥರು ಜಾನಪದ ಕಲೆ ಮೊರೆ ಹೋಗಿದೆ. ಗ್ರಾಮದ ಮಕ್ಕಳು, ಯುವ ಸಮುದಾಯ ಮತ್ತು ಗೃಹಿಣಿಯರಿಗೆ ಕೋಲಾಟ ಕಲಿಸುವ ಮೂಲಕ ಮೊಬೈಲ್ ಚಟ ಬಿಡಿಸುವ ಪಯತ್ನ ಮಾಡಿದ್ದಾರೆ.
ಒಮ್ಮೆ ಬಾಗುರಿನ ಕೋಲಾಟ ಕಲಾ ತಂಡವೊಂದು ಗಣೇಶನ ಹಬ್ಬದ ದಿನದಂದು ಕೋಲಾಟ ಪ್ರದರ್ಶನವನ್ನು ನೀಡಿತ್ತು. ಅದನ್ನು ನೋಡಿದ ಗ್ರಾಮಸ್ಥರು ನಮ್ಮೂರಲ್ಲೂ ನಮ್ಮ ಮಕ್ಕಳಿಗೆ ಏಕೆ ಕೋಲಾಟ ಕಲಿಸಬಾರದು ಎಂದು ನಿರ್ಧರಿಸಿದರು. ಇದರಿಂದ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬಹುದು. ಮಕ್ಕಳು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಂತೆ ಆಗುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವು ವೃದ್ಧಿಸುತ್ತದೆ ಎಂದು ಕೋಲಾಟದ ಗುರು ಚಂದಾಪುರದ ಲಕ್ಷ್ಮೀ ರಮೇಶ್ ಅವರಿಂದ ತರಬೇತಿ ಆರಂಭಿಸಿದರು.
ಐದಾರು ತಿಂಗಳ ತರಬೇತಿ ಅವಧಿಯಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡಿ, ಗೃಹಿಣಿಯರು ಮತ್ತು ಮಕ್ಕಳು ಕೋಲಾಟ ಕಲಿತಿದ್ದಾರೆ. ಈಚೆಗೆ ಗ್ರಾಮದಲ್ಲಿ ನಡೆದ ಗೆಜ್ಜೆ ಪೂಜೆಯಲ್ಲಿ ಅದ್ಬುತವಾದ ಕೋಲಾಟ ಪ್ರದರ್ಶನ ನೀಡುವ ಮೂಲಕ ನೋಡುಗರಲ್ಲಿಯೂ ಆಸಕ್ತಿ ಮೂಡಿಸಿದ್ದಾರೆ.
‘165 ಕುಟುಂಬ ಇರುವ ನಮ್ಮೂರಲ್ಲಿ ಮೊದಲ ಪ್ರಯತ್ನದಲ್ಲೇ ನಾ ಮುಂದು ತಾ ಮುಂದು ಎಂದು ಕೋಲಾಟ ಕಲಿಯಲು ಮುಂದೆ ಬಂದಿದ್ದಾರೆ. ಈಗ 45 ಮಂದಿ ಕೋಲಾಟ ಕಲಿತಿದ್ದಾರೆ. ಈಗ ಮತ್ತೊಂದು ತಂಡ ರೂಪಿಸಿ, ತರಬೇತಿ ಕೊಡಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ನಮ್ಮ ಈ ಪ್ರಯತ್ನ ಅವರಲ್ಲಿ ಬದಲಾವಣೆ ತಂದಿದೆ’ ಎಂದು ಗ್ರಾಮದ ಎಲ್ಲಪ್ಪ ಹರ್ಷ ವ್ಯಕ್ತಪಡಿಸಿದರು.
ಗೃಹಿಣಿಯರು ಕೋಲಾಟ ಪ್ರದರ್ಶನಕ್ಕೆ ಅವರ ಮಕ್ಕಳು ಮನಸೋತು ತಾವು ಕಲಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ತಮಗೂ ತರಬೇತಿ ಕೊಡಿಸಿ ಎಂದು ಸಂಘಟರಿಗೆ ತುಂಬಾಲು ಬೀಳುತ್ತಿದ್ದಾರೆ.
ಮೊದಲೆಲ್ಲ ಮೊಬೈಲ್ ಮತ್ತು ಟಿ.ವಿ ಮುಂದೆ ಕೂರುತ್ತಿದ್ದವರು ಈಗ ಸಂಜೆ ಆಗುತ್ತಿದ್ದಂತೆ ಕೋಲಾಟ ತರಬೇತಿ ಯಾವಾಗ ಆರಂಭವಾಗುತ್ತೆ ಎಂದು ಎದುರು ನೋಡುವಂತಹ ಬದಲಾವಣೆ ಮಕ್ಕಳು, ಯುವ ಸಮುದಾಯ ಮತ್ತು ಗೃಹಿಣಿಯರಲ್ಲಿ ಆಗಿದೆ. ಈ ತರಬೇತಿ ಈಗ ಮುಂದೆವರೆದರೆ ಕೋಲಾಟವನ್ನು ಮೈಗೂಡಿಸಿಕೊಳ್ಳುವ ಜತೆಗೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ವೃದ್ಧಿಸುತ್ತದೆ. ಮೊಬೈಲ್ ಮತ್ತು ಟಿ.ವಿ ಗೀಳಿನಿಂದ ಸಂಪೂರ್ಣವಾಗಿ ಹೊರಬರಬಹುದು ಎಂದು ಕೋಲಾಟ ಗುರು ಚಂದಾಪುರದ ಲಕ್ಷ್ಮಿ ರಮೇಶ್ ಹೇಳುತ್ತಾರೆ.
ಗ್ರಾಮದ ಎಲ್ಲಾ ಮಕ್ಕಳು ಕೋಲಾಟದಲ್ಲಿ ಭಾಗವಹಿಸಲು ಮತ್ತು ತರಬೇತಿ ನೋಡಲು ಅಮ್ಮ ಹೋಮ್ ವರ್ಕ್ ಬೇಗ ಮಾಡಿಸು ಅಂತ ಹಟ ಮಾಡುತ್ತಿದ್ದಾರೆ. ಸಂಜೆ ಆದರೆ ಮಕ್ಕಳೇ ಕೋಲಾಟ ತರಬೇತಿ ಸ್ಥಳವನ್ನು ಸ್ವಚ್ಛಚಗೊಳಿಸಿ ಪ್ರತಿದಿನ ಸಿಂಗಾರ ಮಾಡುತ್ತಿದ್ದಾರೆ. ಈಗ ಮಕ್ಕಳಿಗೆ ಮೊಬೈಲ್ ಕೊಟ್ಟರು ಬೇಡ ಅನ್ನುವಷ್ಟರ ಮಟ್ಟಿಗೆ ಬದಲಾಗಿದ್ದಾರೆ ಎನ್ನುತ್ತಾರೆ ಅವರು.
ಕೋಲಾಟ ಕಲಿತ ಮೊದಲ ಪ್ರದರ್ಶನದ ಗೆಜ್ಜೆಪೂಜೆ ಕಾರ್ಯಕ್ರಮಕ್ಕೆ ಗ್ರಾಮಸ್ಥರೇ ಧನ ಸಹಾಯ ಮಾಡಿ ಮುಂದೆ ನಿಂತು ನಿರ್ವಹಿಸಿದರು. ಗ್ರಾಮಸ್ಥರ ಸಹಕಾರದಿಂದ ಗ್ರಾಮದ ಯುವಕ, ಯುವತಿ, ಗೃಹಿಣಿಯರ ಪ್ರತಿಭೆ ಹೊರ ಬಂದಿದೆ ಎಂದು ಗಣಗಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯರಾಮ್ ತಿಳಿಸಿದರು.
***
ಒಂದೊಮ್ಮೆ ತಾಯಂದಿರು ತಮ್ಮ ಮಕ್ಕಳಿಗೆ ಊಟ ಮಾಡಿಲ್ಲ ಎಂದರೆ ಗುಮ್ಮ ಬರುತ್ತೆ ಭೂತ ಬರುತ್ತೆ ಎಂದು ಮಕ್ಕಳಿಗೆ ಭಯ ಹುಟ್ಟಿಸಿ ಊಟ ಮಾಡಿಸುತ್ತಿದ್ದ ಕಾಲ ಇತ್ತು. ಇತ್ತೀಚೆಗೆ ಮಕ್ಕಳಿಗೆ ಊಟ ಮಾಡಿಸಲು, ಮಲಗಿಸಲು, ಅವರು ಅಳುತ್ತಿದ್ದರೆ ಸುಮ್ಮನಿರಿಸಲು ಮೊಬೈಲ್ ಕೊಡುವ ಚಟ, ಬೆಳೆಯುವ ಮಕ್ಕಳು ವ್ಯಸನಿಗಳಾಗುವಂತೆ ಮಾಡುತ್ತಿದ್ದಾರೆ. ಇದರಿಂದ ಮಕ್ಕಳು ದೈಹಿಕ ಕಸರತ್ತಿನ ಆಟಪಾಠಗಳಲ್ಲಿ ಬಿಟ್ಟು ಮೊಬೈಲ್ ಇಲ್ಲದಿದ್ದರೆ ಬದುಕಿಲ್ಲ ಎನ್ನುವ ಸ್ಥಿತಿ ತಲುಪಿದ್ದಾರೆ.
ಆಧುನಿಕತೆ, ತಂತ್ರಜ್ಞಾನ, ಎಐ ಯುಗದಲ್ಲಿ ಈಗಿನ ಯುವಕ ಯುವತಿಯರಷ್ಟೇ ಅಲ್ಲ ಗೃಹಿಣಿಯರು, ಮುದುಕರು ಟಿವಿ ಮೊಬೈಲ್ ಹಿಂದೆ ಬಿದ್ದು ರೀಲ್ಸ್ ತಳುತ್ತಿದ್ದಾರೆ. ಇದರಿಂದ ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಸಿಲುಕಿ ನರಳಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗಗಳಲ್ಲೂ ಇದ್ದಕ್ಕೆ ಭಿನ್ನ ಪರಿಸ್ಥಿತಿ ಇನ್ನೂ ಇಲ್ಲ. ಅವರೂ ಮೊಬೈಲ್ ನೋಡೋದಷ್ಟೇ ಅಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ತಾವು ಮಾಡಿದ ರೀಲ್ಸ್ ತುಣುಕು, ಇಲ್ಲವೇ ಪೊಟೋಗಳನ್ನು ಹಾಕಿ ಎಷ್ಟು ಜನ ನೋಡಿದ್ದರೆ, ಎಷ್ಟು ಮಂದಿ ಯಾವ ರೀತಿ ಕಾಮೆಂಟ್ಸ್ ಮಾಡಿದ್ದಾರೆ ಎಂಬುದನ್ನು ನೋಡಿಕೊಂಡು ಖುಷಿ ಪಡುವ ಕಾಲ ಬಂದಿದೆ. ಇಂತಹದ್ದರಲ್ಲಿ ಮಾರನಗೆರೆ ಗ್ರಾಮಸ್ಥರು ಇದರಿಂದ ಹೊರಬರಲು ಕೋಲಾಟದತ್ತ ಒಲವು ತೋರುತ್ತಿದ್ದಾರೆ.
ಏನೇನು ಬದಲಾವಣೆ?
ಪ್ರತಿದಿನ ಗೃಹಿಣಿಯರು ಹಿರಿಯರು ಅಜ್ಜಿ ಅಜ್ಜಂದಿರು ಮಕ್ಕಳು ಮೊಮ್ಮಕ್ಕಳು ಕೋಲಾಟ ತರಬೇತಿಗೆ ಬರುತ್ತಿರುವುದನ್ನು ನೋಡಿದರೆ ಖುಷಿಯಾಗುತ್ತದೆ ಲಕ್ಷ್ಮಿ ರಮೇಶ್ ಕೋಲಾಟ ಗುರು ಶಾಲೆ ಬಿಟ್ಟರೆ ಮನೆ ಮನೆ ಬಿಟ್ಟರೆ ಶಾಲೆ ಇದರ ಮೊಬೈಲ್. ಇಷ್ಟೇ ನಮ್ಮ ಪ್ರಪಂಚ. ನಮ್ಮೂರಲ್ಲಿ ಕೋಲಾಟ ತರಬೇತಿ ಆರಂಭವಾದ ಬಳಿಕ ನಮ್ಮ ದಿನಚರಿಗೆ ಕೋಲಾಟ ಸೇರ್ಪಡೆಗೊಂಡಿದೆ. ಈಗ ಮೊಬೈಲ್ ನೋಡಲು ಸಮಯ ಸಿಗುತ್ತಿಲ್ಲ ಪ್ರಮೋದಿ ಕೋಲಾಟದ ತಂಡದ ಸದಸ್ಯೆ ನಮ್ಮೂರಿಗೆ ಕೋಲಾಟ ಬಂದಾಗಿನಿಂದ ನಾನು ಯೂಟ್ಯೂಬ್ ಮಾತ್ರವಲ್ಲ ಮೊಬೈಲ್ ಅನ್ನೇ ಮುಟ್ಟುತ್ತಿಲ್ಲ. ಮೊಬೈಲ್‌ಗೆ ಮೀಸಲಾಗಿದ್ದ ಸಮಯ ಈಗ ಕೋಲಾಟಕ್ಕೆ ಮೀಸಾಗಿದೆ ಪಾವನಿ ವಿದ್ಯಾರ್ಥಿ ಮನೆಯಲ್ಲಿ ಸುಮ್ಮನೆ ರೀಲ್ಸ್ ನೋಡುತ್ತಾ ಅದೇ ಪ್ರಪಂಚ ಅಂದುಕೊಂಡಿದ್ದೆ. ಈಗ ಆ ಕಾಲ ಬದಲಾಗಿದೆ. ಕೋಲಾಟದಿಂದ ದೈಹಿಕ ಕಸರತ್ತಿನೊಂದಿಗೆ ಮನಸ್ಸಿಗೂ ಖುಷಿ ಸಿಗುತ್ತದೆ. ಆರೋಗ್ಯವು ಸುಧಾರಿಸಿದೆ ನಾಗವೇಣಿ ಆಶಾ ಕಾರ್ಯಕರ್ತೆ ಮಾನಗೆರೆ ಗ್ರಾಮದ ಜೈಮುನಿ ಕುಟುಂಬದ ಮುನಿಯಪ್ಪ ರುದ್ರಮ್ಮ ಚೈತ್ರ ಕುಶಾಲ್ ಎಂಬ ಒಂದೇ ಕುಟುಂಬದ ನಾಲ್ಕು ತಲೆಮಾರಿನ ಅತ್ತೆ ಸೊಸೆ ಮಗಳು– ಮೊಮ್ಮಗ ಕೋಲಾಟ ತಂಡದಲ್ಲಿರುವುದು ಶ್ಲಾಘನೀಯ. ನಟರಾಜ್ ಉಪಾಧ್ಯಕ್ಷ ಕಲಾವಿದರ ಕ್ಷೇಮಾಭಿವೃದ್ಧಿ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.