ADVERTISEMENT

‘ಆಧುನಿಕತೆ ಬೆಳೆದಂತೆ ಧಾರ್ಮಿಕ ನಿರಾಸಕ್ತಿ’

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 13:53 IST
Last Updated 20 ಜೂನ್ 2019, 13:53 IST
ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿದ್ದ ಶಂಕರ ಭಾರತಿ ಮಹಾಸ್ವಾಮಿ
ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿದ್ದ ಶಂಕರ ಭಾರತಿ ಮಹಾಸ್ವಾಮಿ   

ದೇವನಹಳ್ಳಿ: ಆಧುನಿಕತೆ ಬೆಳೆದಂತೆ ಧಾರ್ಮಿಕ ಆಚರಣೆಯ ಬಗ್ಗೆ ನಿರಾಸಕ್ತಿ ಹೆಚ್ಚುತ್ತಿದೆ ಎಂದು ಎಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರಭಾರತಿ ಮಹಾಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿನ ಸಾದಹಳ್ಳಿ ಗ್ರಾಮದಲ್ಲಿ ನೂತನವಾಗಿ ಕಾಯಕಲ್ಪಗೊಂಡಿರುವ ಶ್ರೀಮಹಾಗಣಪತಿ, ಹನುಮದ್ ಲಕ್ಷ್ಮಣ್ ಸಮೇತ ಸೀತಾರಾಮಚಂದ್ರ ಸ್ವಾಮಿ ಮೂಲ ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.

ಗುರುಹಿರಿಯರಿಗೆ ಎಲ್ಲಿಯವರೆಗೆ ಗೌರವ ಸಿಗುವುದಿಲ್ಲವೋ ಅಲ್ಲಿಯವರೆಗೆ ಧಾರ್ಮಿಕ ಆಚರಣೆಗೆ ಅರ್ಥ ಸಿಗುವುದಿಲ್ಲ, ಪ್ರಾಚೀನ ದೇವಾಲಯಗಳನ್ನು ನಿರ್ಮಿಸಿದವರ ಉದ್ದೇಶ ಸಮಾಜದಲ್ಲಿ ಸಾಮರಸ್ಯ, ಶಾಂತಿ, ಸಹಬಾಳ್ವೆ, ಪರಸ್ಪರ ಸಹಕಾರವಿರಲಿ ಎಂಬುದಾಗಿತ್ತು. ಇಡಿ ಗ್ರಾಮ ಸಾಮೂಹಿಕವಾಗಿ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸುತ್ತಿತ್ತು, ಪ್ರಸ್ತುತ ಹತ್ತಾರು ದೇವರುಗಳು ನೆಲೆಗೊಂಡು ಒಂದೊಂದು ಸಮುದಾಯಗಳಿಗೆ ಸಿಮಿತವಾಗಿದೆ ಎಂದು ಹೇಳಿದರು.

ADVERTISEMENT

ಕೆಲವು ದೇವಾಲಯಗಳಲ್ಲಿ ಕಟ್ಟುಪಾಡುಗಳಿವೆ, ಅವು ಉದ್ದೇಶಪೂರ್ವಕವಾಗಿರುವ ನಿಬಂಧನೆಗಳಲ್ಲ, ಅದರ ಹಿಂದೆ ಅನೇಕ ವೈಜ್ಞಾನಿಕ ಅಂಶಗಳಿವೆ, ಸೂಕ್ಷ್ಮವಾಗಿ ಚಿಂತಿಸಬೇಕು. ಜಗತ್ತಿನ ಪ್ರತಿಯೊಂದು ಧರ್ಮಗಳು ಶಾಂತಿಯನ್ನು ಸಾರುತ್ತವೆ ಹೊರತು ಸಮಾಜದಲ್ಲಿ ಶಾಂತಿ ಕದಡುವುದೆಂದಲ್ಲ. ಮಕ್ಕಳಲ್ಲಿ ಸನ್ನಡತೆಯನ್ನು ಕಲಿಸಿ, ಭಯ, ಭಕ್ತಿ, ಶ್ರದ್ಧೆಗೂ ಒತ್ತು ನೀಡಿ ಎಂದರು. ವಯೋವೃದ್ಧರ ಬಗ್ಗೆ ನಿರ್ಲಕ್ಷ್ಯ ಬೇಡ ಗೌರವಾಯುತವಾಗಿ ನಡೆಸಿಕೊಳ್ಳಿ, ಪಾರಂಪರಿಕ ಆಚರಣೆ ನಿರಂತರವಾಗಿರಲಿ ಎಂದು ಹೇಳಿದರು.

ದೇವಾಲಯ ಆಡಳಿತ ನಿರ್ವಹಣೆ ಮುಖ್ಯಸ್ಥ ಶ್ರೀನಾಥ್ ಮಾತನಾಡಿ, ಐದಾರು ತಲೆಮಾರಿನಿಂದ ನೂತನ ದೇವಾಲಯದ ಜಾಗದಲ್ಲಿ ಪುರಾತನ ಗರುಡಗಂಭವಿತ್ತು, ವೇಣುಗೋಪಾಲಸ್ವಾಮಿ ದೇವಾಲಯ ನಿರ್ಮಾಣ ಮಾಡುವ ಉದ್ದೇಶವಿತ್ತಾದರು ಭಕ್ತರ ಒಟ್ಟಾರೆ ಅಭಿಪ್ರಾಯದ ಮೇರೆಗೆ ನೂತನ ದೇವಾಲಯ ನಿರ್ಮಾಣ ಮಾಡಿ ಶ್ರೀಮಹಾ ಗಣಪತಿ, ಹನುಮದ್ ಲಕ್ಷ್ಮಣ್ ಸಮೇತ ಸೀತಾರಾಮಚಂದ್ರಸ್ವಾಮಿ ನೂತನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದು ಹೇಳಿದರು.

ಜೂನ್ 18 ರಿಂದ ಜೂನ್ 20ರ ಸಂಜೆವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ದೇವಾಲಯ ಆಡಳಿತ ಮಂಡಳಿ ಗೌರವಾಧ್ಯಕ್ಷ ಎಸ್.ಪಿ. ಶ್ರೀಕಂಠ ಐಯ್ಯರ್, ಅಧ್ಯಕ್ಷ ಡೇರಿ ಸುಬ್ರಮಣ್ಯ, ಉಪಾಧ್ಯಕ್ಷ ಎಸ್. ಸುಬ್ರಮಣ್ಯ, ಕಾರ್ಯದರ್ಶಿ ಎಸ್.ಆರ್. ಗೋಪಾಲಕೃಷ್ಣ, ಖಜಾಂಚಿ ಎಸ್. ಮಧುಸೂಧನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.