ADVERTISEMENT

‘ಮೋದಿ ಸರ್ಕಾರ ಶೋಕೇಸ್ ಇದ್ದಂತೆ’

ಇಂದನ ದರ ಹೆಚ್ಚಳ ಖಂಡಿಸಿ ದೇವನಹಳ್ಳಿಯಲ್ಲಿ ಜೆಡಿಎಸ್‌ ಮುಖಂಡರ, ಕಾರ್ಯಕರ್ತರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2018, 13:08 IST
Last Updated 10 ಸೆಪ್ಟೆಂಬರ್ 2018, 13:08 IST
ತಾಲ್ಲೂಕು ಆಡಳಿತ ಕಚೇರಿ ಆವರಣದಲ್ಲಿ ಜೆಡಿಎಸ್ ಕಾರ್ಯಕರ್ತರು ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು
ತಾಲ್ಲೂಕು ಆಡಳಿತ ಕಚೇರಿ ಆವರಣದಲ್ಲಿ ಜೆಡಿಎಸ್ ಕಾರ್ಯಕರ್ತರು ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು   

ದೇವನಹಳ್ಳಿ: ಮೋದಿ ಸರ್ಕಾರ ಮನೆಗಳಲ್ಲಿ ಅಲಂಕಾರಿಕ ವಸ್ತುಗಳನ್ನಿಡುವ ಶೋಕೇಸ್ ಇದ್ದಂತೆ ಎಂದು ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಬಿ.ಮುನೇಗೌಡ ಆರೋಪಿಸಿದರು.

ಇಲ್ಲಿನ ಪಕ್ಷದ ಕಚೇರಿಯಿಂದ ಭಾರತ್ ಬಂದ್‌ಗೆ ಬೆಂಬಲವಾಗಿ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರ್ ಎಂ. ರಾಜಣ್ಣನವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆಯಿಂದ ಪ್ರತಿಯೊಂದು ಕ್ಷೇತ್ರದಲ್ಲಿ ಮತ್ತು ಪ್ರತಿಯೊಂದು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ವಿದೇಶಗಳ ಪ್ರವಾಸ ಸಂದರ್ಭದಲ್ಲಿ ಬಣ್ಣದ ಮಾತುಗಳಿಂದ ಬೆರಗುಗೊಳಿಸುತ್ತಿದ್ದಾರೆಯೇ ಹೊರತು ದೇಶದ ಅರ್ಥಿಕ ಪರಿಸ್ಥಿತಿ ಹತೋಟಿಗೆ ತರಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ADVERTISEMENT

ನೋಟು ರದ್ದತಿ, ಜಿಎಸ್‌ಟಿಯಿಂದ ಯಾವ ಸಾಧನೆಯೂ ಅಗಿಲ್ಲ. ಬರಿಯ ಬೂಟಾಟಿಕೆಯ ಭಾಷಣ ಹೊರತು ಪಡಿಸಿ ಏನೂ ಅಭಿವೃದ್ಧಿ ಇಲ್ಲ ಎಂದರು.

ತಾಲ್ಲೂಕು ಘಟಕ ಅಧ್ಯಕ್ಷ ಬಿ.ಶ್ರೀನಿವಾಸ್ ಮಾತನಾಡಿ, ಪ್ರತಿ ದಿನ ಇಂಧನ ಏರುಮುಖವೆಂದರೆ ಜನಸಾಮಾನ್ಯರ ಪಾಡೇನು, ಇದರ ಮೇಲೆ ವಿಧಿಸುವ ಸುಂಕ ಕಡಿಮೆ ಮಾಡಬೇಕು ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಪ್ರಧಾನಿ ಮೋದಿ ಅವರು ಒಂದು ದೇಶ ಒಂದು ತೆರಿಗೆ ಎಂದು ಘೋಷಣೆ ಮಾಡಿದ್ದಾರೆ. ಅಡುಗೆ ಅನಿಲ ದರವನ್ನೂ ಈ ವ್ಯಾಪ್ತಿಗೆ ಒಳಪಡಿಸಿಲ್ಲ. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ₹ 40 ಗೆ ಪೆಟ್ರೋಲ್, ₹ 22 ಗೆ ಡೀಸೆಲ್‌ ಸಿಗಲಿದೆ ಎಂದು ಭರವಸೆ ನೀಡಿದ್ದರು. ಆದರೆ ಬದಲಾವಣೆ ಆಗಲಿಲ್ಲ ಎಂದರು.

ಹಾಪಕಾಮ್ಸ್ ನಿರ್ದೇಶಕ ಹುರುಗುರ್ಕಿ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಮುನೇಗೌಡ, ಯುವ ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಭರತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಟಿ.ರವಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕಾರಹಳ್ಳಿ ಶ್ರೀನಿವಾಸ್, ಭೀಮರಾಜು, ಮಹೇಶ್, ಪ್ರಚಾರ ಸಮಿತಿ ತಾಲ್ಲೂಕು ಘಟಕ ಅಧ್ಯಕ್ಷ ನರಗಹಳ್ಳಿ ಶ್ರೀನಿವಾಸ್, ಜೆಡಿಎಸ್ ನಗರ ಘಟಕ ಅಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ಸಾಯಿಬಾಬು, ಮುಖಂಡರಾದ ಕಲ್ಯಾಣ್ ಕುಮಾರ್, ವೀರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.